ಒಬ್ಬ ಪೈಲೆಟ್ ನಮ್ಮ ವಶದಲ್ಲಿ ಎಂದು ಹೇಳಿದ ಪಾಕಿಸ್ತಾನ
ನವದೆಹಲಿ, ಫೆಬ್ರವರಿ 27 : ಭಾರತದ ವಾಯುಪಡೆಯ ಒಬ್ಬ ಪೈಲೆಟ್ ತನ್ನ ವಶದಲ್ಲಿದ್ದಾನೆ ಎಂದು ಪಾಕಿಸ್ತಾನ ಖಚಿತಪಡಿಸಿದೆ. ಭಾರತದ ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾನೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಮಧ್ಯಾಹ್ನ ಹೇಳಿತ್ತು.
ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಗಫೂರ್ ಈ ಕುರಿತು ಬುಧವಾರ ಸಂಜೆ ಟ್ವೀಟ್ ಮಾಡಿದ್ದಾರೆ. ಒಬ್ಬ ಪೈಲೆಟ್ ತಮ್ಮ ವಶದಲ್ಲಿದ್ದಾನೆ. ಸೇನಾ ನಿಯಮದಂತೆ ಅವರಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಬುಧವಾರ ಬೆಳಗ್ಗೆ ಇಬ್ಬರು ಪೈಲೆಟ್‌ಗಳು ತಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ಹೇಳಿತ್ತು. ಒಬ್ಬರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿತ್ತು. ಪೈಲೆಟ್ ಬಗ್ಗೆ ಮಾಹಿತಿ ನೀಡುವಂತೆ ಭಾರತದ ವಿದೇಶಾಂಗ ಸಚಿವಾಲಯ ಈಗಾಗಲೇ ಪಾಕಿಸ್ತಾನದ ಡೆಪ್ಯೂಟಿ ಹೈ ಕಮೀಷನರ್‌ಗೆ ಸಮನ್ಸ್ ಜಾರಿಗೊಳಿಸಿದೆ.
ಬುಧವಾರ ಸಂಜೆ ಟ್ವೀಟ್ ಮಾಡಿರುವ ಜನರಲ್ ಗಫೂರ್ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದು, ಸೇನಾ ನಿಯಮದಂತೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು 'ಇಂದು ಬೆಳಗಿನ ಆಪರೇಷನ್ ಸಂದರ್ಭದಲ್ಲಿ ನಾವು ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ' ಎಂದು ಹೇಳಿದ್ದರು.
'ಒಬ್ಬ ಪೈಲೆಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲೆಟ್ ನಮ್ಮ ವಶದಲ್ಲಿದ್ದಾನೆ ಎಂದು ಹೇಳಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಒಂದು ವಿಮಾನವನ್ನು ಹೊಡೆದುರುಳಿಸಲಾಗಿದೆ' ಎಂದು ತಿಳಿಸಿದ್ದರು.












Click it and Unblock the Notifications