ನೋಡಿ ನನ್ನ ತಂಗಿ ಸತ್ತಿದ್ದಾಳೆ: ಅಕೌಂಟ್‌ನಲ್ಲಿದ್ದ ಹಣ ನೀಡಲು ಸಾಕ್ಷಿ ಕೇಳಿದ ಬ್ಯಾಂಕ್ ಮುಂದೆ ಅಸ್ಥಿಪಂಜರ ತಂದಿಟ್ಟ ಅಣ್ಣ
ತಮ್ಮ ಮೃತ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಆಕೆಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಒಡಿಶಾದ ರಾಯಗಡ ಜಿಲ್ಲೆಯ ಪಟನಾ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಿಪಾಸಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಬೆಚ್ಚಿಬೀಳಿಸುವ ದೃಶ್ಯವೊಂದು ಕಂಡುಬಂದಿದೆ. ಚೀಲವೊಂದರಲ್ಲಿ ಅಸ್ಥಿಪಂಜರವನ್ನು ಹೊತ್ತು ತಂದ ವ್ಯಕ್ತಿಯನ್ನು ಕಂಡು ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರು ಭಯಭೀತರಾಗಿದ್ದಾರೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ಒಳಗಿನಿಂದ ಬಾಗಿಲು ಹಾಕಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಣ ನೀಡಲು ನಿರಾಕರಿಸಿ ಬ್ಯಾಂಕ್
ಘಟನೆಯ ಹಿನ್ನೆಲೆಯ ಪ್ರಕಾರ, ಜಿತು ಮುಂಡಾ ಅವರ ಸಹೋದರಿ ಸುಮಾರು ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಆಕೆಯ ಹೆಸರಿನಲ್ಲಿ ಸ್ಥಳೀಯ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಯಿದ್ದು, ಅದರಲ್ಲಿ ₹19,300 ಹಣ ಜಮೆಯಾಗಿತ್ತು. ಬಡತನದಲ್ಲಿದ್ದ ಜಿತು ಆ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದಾಗ, ಅಧಿಕಾರಿಗಳು ಖಾತೆದಾರರು ಇಲ್ಲದೆ ಹಣ ನೀಡಲು ನಿರಾಕರಿಸಿದ್ದರು. ಸಹೋದರಿ ಮೃತಪಟ್ಟಿದ್ದಾಳೆ ಎಂದು ಜಿತು ಹೇಳಿದಾಗ, ಆಕೆಯ ಮರಣ ಪ್ರಮಾಣಪತ್ರ ಮತ್ತು ಇತರ ಕಾನೂನು ದಾಖಲೆಗಳನ್ನು ಸಲ್ಲಿಸುವಂತೆ ಬ್ಯಾಂಕ್ ಸಿಬ್ಬಂದಿ ಸೂಚಿಸಿದ್ದರು.

ಜಿತು ಮುಂಡಾ ಅನಕ್ಷರಸ್ಥರಾಗಿದ್ದರಿಂದ ಬ್ಯಾಂಕ್ ಅಧಿಕಾರಿಗಳು ಕೇಳಿದ 'ಡೆತ್ ಸರ್ಟಿಫಿಕೇಟ್' ಎಂಬ ಪದದ ಅರ್ಥ ಅವರಿಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಅಧಿಕಾರಿಗಳು ಪುರಾವೆ ಕೇಳುತ್ತಿದ್ದಾರೆ ಎಂದರೆ ಮೃತಪಟ್ಟಿರುವ ಬಗ್ಗೆ ಸಾಕ್ಷಿ ತೋರಿಸಬೇಕು ಎಂದುಕೊಂಡ ಅವರು, ನೇರವಾಗಿ ಸ್ಮಶಾನಕ್ಕೆ ಹೋಗಿ ಹೂತುಹಾಕಿದ್ದ ಸಹೋದರಿಯ ಶವವನ್ನು ಅಗೆದಿದ್ದಾರೆ. ಅಲ್ಲಿ ಸಿಕ್ಕ ಮೂಳೆಗಳನ್ನು ಚೀಲದಲ್ಲಿ ತುಂಬಿಕೊಂಡು ಬ್ಯಾಂಕಿಗೆ ಸಾಕ್ಷಿಯಾಗಿ ಪ್ರಸ್ತುತಪಡಿಸಿದ್ದಾರೆ. "ಬ್ಯಾಂಕಿನವರು ಪುರಾವೆ ಕೇಳಿದ್ದರು, ಅದಕ್ಕೆ ಅವಳು ಸತ್ತಿದ್ದಾಳೆ ಎಂದು ತೋರಿಸಲು ಅಸ್ಥಿಪಂಜರ ತಂದೆ" ಎಂದು ಜಿತು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪಟನಾ ಪೊಲೀಸ್ ಠಾಣೆಯ ಐಐಸಿ ಕಿರಣ್ ಪ್ರಸಾದ್ ಸಾಹು ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿತು. ಜಿತು ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಪೊಲೀಸರು, ಬ್ಯಾಂಕ್ ಪ್ರಕ್ರಿಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟರು. ಜಿತು ಅವರದ್ದು ಯಾವುದೇ ದುರುದ್ದೇಶವಿರಲಿಲ್ಲ, ಕೇವಲ ಅಜ್ಞಾನ ಮತ್ತು ಅಮಾಯಕತೆಯಿಂದ ಈ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರ ಸಲಹೆಯಂತೆ ಜಿತು ಅಸ್ಥಿಪಂಜರವನ್ನು ವಾಪಸ್ ಕೊಂಡೊಯ್ದು ಸರಿಯಾದ ಜಾಗದಲ್ಲಿ ಹೂತುಹಾಕಿದ್ದಾರೆ. ಸದ್ಯ ಪೊಲೀಸರು ಅವರಿಗೆ ಮರಣ ಪ್ರಮಾಣಪತ್ರ ಕೊಡಿಸಿ ಬ್ಯಾಂಕಿನಿಂದ ಹಣ ಕೊಡಿಸುವ ಭರವಸೆ ನೀಡಿದ್ದಾರೆ. ಈ ಘಟನೆಯು ಆಡಳಿತ ವ್ಯವಸ್ಥೆ ಮತ್ತು ಸಾಮಾನ್ಯ ಜನರ ನಡುವಿನ ಸಂವಹನದ ಕೊರತೆಗೆ ಸಾಕ್ಷಿಯಾಗಿದೆ.
ಸ್ಥಳೀಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಮಾನಸ್ ದಂಡ್ಪತ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಈವರೆಗೆ ಯಾರೂ ಮೃತ ಕಲ್ರಾ ಮುಂಡಾ ಅವರ ಕಾನೂನುಬದ್ಧ ವಾರಸುದಾರರ ಪತ್ರಕ್ಕಾಗಿ ನನ್ನನ್ನು ಸಂಪರ್ಕಿಸಿರಲಿಲ್ಲ. ಇಂದು ಪತ್ರಿಕೆಗಳ ಮೂಲಕ ವಿಷಯ ತಿಳಿದಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಬ್ಯಾಂಕ್ ಮೂಲಗಳ ಪ್ರಕಾರ, ಮೃತ ಕಲ್ರಾ ಮುಂಡಾ ಅವರ ಖಾತೆಯಲ್ಲಿ ದಾಖಲಾಗಿದ್ದ ನಾಮಿನಿ ಕೂಡ ಈಗಾಗಲೇ ಮೃತಪಟ್ಟಿದ್ದಾರೆ. ಹೀಗಾಗಿ, ಜಿತು ಮುಂಡಾ ಅವರು ಈ ಹಣಕ್ಕೆ ಏಕೈಕ ಕಾನೂನುಬದ್ಧ ವಾರಸುದಾರರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ತ್ವರಿತ ಹಣ ಬಿಡುಗಡೆಗೆ ಸೂಚನೆ
ಸ್ಥಳೀಯ ಆಡಳಿತವು ಈಗ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಯಮಾನುಸಾರ ಏಕೈಕ ಹಕ್ಕುದಾರರಾಗಿರುವ ಜಿತು ಮುಂಡಾ ಅವರಿಗೆ ಯಾವುದೇ ವಿಳಂಬವಿಲ್ಲದೆ ಹಣ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆದೇಶಿಸಿದೆ. ಬ್ಯಾಂಕ್ ಪ್ರಕ್ರಿಯೆಗಳನ್ನು ಪೂರೈಸಲು ಅಗತ್ಯವಿರುವ ದಾಖಲೆಗಳನ್ನು ಒದಗಿಸಲು ಸ್ಥಳೀಯ ಆಡಳಿತವೇ ಜಿತು ಅವರಿಗೆ ನೆರವಾಗಲಿದೆ. ಒಬ್ಬ ಅಮಾಯಕ ವ್ಯಕ್ತಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲಾಗದೆ ಇಷ್ಟೊಂದು ದೊಡ್ಡ ಸಾಹಸಕ್ಕೆ ಕೈಹಾಕಿದ್ದು ಇಡೀ ಜಿಲ್ಲಾಡಳಿತವನ್ನು ಎಚ್ಚರಿಸಿದೆ. ತಡವಾಗಿಯಾದರೂ ಜಿತು ಮುಂಡಾ ಅವರಿಗೆ ಸಿಗಬೇಕಾದ ಹಣ ಶೀಘ್ರದಲ್ಲೇ ಅವರ ಕೈ ಸೇರಲಿದೆ.












Click it and Unblock the Notifications