Get Updates
Get notified of breaking news, exclusive insights, and must-see stories!

Explainer: ಉತ್ತರ ಭಾರತದ ಮಹಿಳೆ ಅಡುಗೆಮನೆಗೆ ಸೀಮಿತ, ದಕ್ಷಿಣ ಭಾರತದ ಮಹಿಳೆ ಮಾಡರ್ನ್‌: ಈ ವಿಭಜನೆ ಸರಿಯೇ?

ಉತ್ತರ ಮತ್ತು ದಕ್ಷಿಣ ಭಾರತದ ಮಹಿಳೆಯರ ಕುರಿತು ರಾಜಕೀಯ ವೇದಿಕೆಯಲ್ಲಿ ಹೊರಬಂದ ಹೇಳಿಕೆಗಳು ದೇಶದೊಳಗಿನ ಪ್ರಾದೇಶಿಕ ವಿಭಜನೆಯ ಚರ್ಚೆಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಮಹಿಳಾ ಸಬಲೀಕರಣದ ವಿಚಾರ ಆಧರಿಸಿ ಕೆಲವು ನಾಯಕರು ಮಾಡಿದ ಹೋಲಿಕೆಗಳು ವಿವಾದಕ್ಕೆ ಕಾರಣವಾಗಿವೆ.

ಇತ್ತೀಚೆಗೆ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸಂಸದರಾದ ದಯಾನಿಧಿ ಮಾರನ್ ಅವರು ಉತ್ತರ ಭಾರತದ ಮಹಿಳೆಯರನ್ನು ತಮಿಳುನಾಡಿನ ಮಹಿಳೆಯರೊಂದಿಗೆ ಹೋಲಿಕೆ ಮಾಡಿ ನೀಡಿದ ಹೇಳಿಕೆಯು ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಉತ್ತರ ಭಾರತದ ಮಹಿಳೆಯರನ್ನು "ಮನೆಯಲ್ಲೇ ಇರಿ, ಅಡುಗೆಮನೆಯಲ್ಲೇ ಇರಿ, ಮಕ್ಕಳನ್ನು ಹೆತ್ತು ಬೆಳೆಸುವುದು ನಿಮ್ಮ ಕೆಲಸ" ಎಂದು ಹೇಳಲಾಗುತ್ತದೆ ಎಂದು ಅವರು ಆರೋಪಿಸಿದರೆ, ತಮಿಳುನಾಡಿನಲ್ಲಿ "ಹುಡುಗಿಯರಿಗೆ ಓದಿ, ಮತ್ತಷ್ಟು ಓದಿ ಎಂದು ಉತ್ತೇಜಿಸಲಾಗುತ್ತದೆ" ಎಂದು ಹೇಳಿದರು.

ವಿವಾದದ ಹಿನ್ನೆಲೆ

ಚೆನ್ನೈನ ಕ್ವೈದ್-ಇ-ಮಿಲ್ಲತ್ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಾತನಾಡಿದ ಅವರು, "ನಮ್ಮ ಹುಡುಗಿಯರು ಲ್ಯಾಪ್‌ಟಾಪ್‌ ಹಿಡಿದು ಆತ್ಮವಿಶ್ವಾಸದಿಂದ ಸಂದರ್ಶನಕ್ಕೂ ಹೋಗಬೇಕು, ಉನ್ನತ ಶಿಕ್ಷಣಕ್ಕೂ ಮುಂದಾಗಬೇಕು. ಇದು ತಮಿಳುನಾಡಿನ ಸಂಸ್ಕೃತಿ. ಇಲ್ಲಿ ನಿಮ್ಮ ಪ್ರಗತಿಯೇ ರಾಜ್ಯದ ಪ್ರಗತಿ" ಎಂದು ಹೇಳಿದರು. ತಮಿಳುನಾಡು ದೇಶದ ಅತ್ಯುತ್ತಮ ರಾಜ್ಯ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದೂ ಹೊಗಳಿದರು.

North vs South

ಈ ಹೇಳಿಕೆಗಳು ಚುನಾವಣಾ ರಾಜಕೀಯಕ್ಕೆ ಅನುಗುಣವಾಗಿ ಮತದಾರರನ್ನು ಮೆಚ್ಚಿಸಲು ಮಾಡಿದ ಪ್ರಯತ್ನವೆಂದು ವಿರೋಧ ಪಕ್ಷಗಳು ತೀವ್ರ ಟೀಕೆ ಮಾಡಿವೆ. ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ "ಇದು ಉತ್ತರ ಭಾರತೀಯರಿಗೆ ಮಾಡಿದ ಅವಮಾನ" ಎಂದು ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕಿ ಅನಿಲಾ ಸಿಂಗ್ "ಭಾರತದಲ್ಲಿ ಹೆಣ್ಣನ್ನು ಶಕ್ತಿ ಎಂದು ಪೂಜಿಸಲಾಗುತ್ತದೆ; ಮಹಿಳೆಯರನ್ನು ಉತ್ತರ-ದಕ್ಷಿಣ ಎಂದು ವಿಭಜಿಸುವುದು ಸಂಸ್ಕೃತಿಯ ಅವಮಾನ" ಎಂದು ಖಂಡಿಸಿದರು.

ಈ ಘಟನೆ ಕೇವಲ ಒಬ್ಬ ರಾಜಕಾರಣಿಯು ನಿರ್ಲಕ್ಷ್ಯದಿಂದ ನೀಡಿದ ಹೇಳಿಕೆಯಾಗಿಲ್ಲ. ಇದು ಭಾರತದ ರಾಜಕೀಯದಲ್ಲಿ ಅಲ್ಪಾವಧಿ ಚುನಾವಣಾ ಲಾಭಕ್ಕಾಗಿ ಪ್ರಾದೇಶಿಕ ಭೇದಗಳನ್ನು ಮತ್ತೆ ಮತ್ತೆ ಕೆದಕುವ ಪ್ರವೃತ್ತಿಗೆ ಒಂದು ಉದಾಹರಣೆ. ಭಾರತದ ಸಾಮಾನ್ಯ ನಾಗರಿಕರು-ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ಆಶಯ ಹೊಂದಿದ್ದಾರೆ. ಅದು ಉತ್ತಮ ಶಿಕ್ಷಣ, ಸ್ಥಿರ ಉದ್ಯೋಗ, ಸುರಕ್ಷತೆ, ಗೌರವ ಮತ್ತು ಉತ್ತಮ ಜೀವನಮಟ್ಟ. ನಿಜವಾದ ವಿಭಜನೆ ಭೌಗೋಳಿಕವಾಗಿ ಅಲ್ಲ, ಅದು ಪ್ರಗತಿ ಬಯಸುವ ಜನರು ಮತ್ತು ಗುರುತಿನ ರಾಜಕಾರಣವನ್ನು ಬಳಸುವ ರಾಜಕೀಯ ವಲಯದ ನಡುವೆ ಇದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಉಚಿತ ಯೋಜನೆಗಳ ಪೈಪೋಟಿ, ಗೆಲುವಿಗಾಗಿ ಭರ್ಜರಿ ಹೋರಾಟ ಶುರು | Tamil Nadu Election

ವಿವಿಧ ಪಕ್ಷಗಳಲ್ಲಿಯೂ ಇದೇ ಪ್ರವೃತ್ತಿ

ಈ ರೀತಿಯ ಹೇಳಿಕೆಗಳು ಒಂದೇ ಪಕ್ಷಕ್ಕೆ ಸೀಮಿತವಲ್ಲ. 2021ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದಲ್ಲಿ ಮಾತನಾಡುವಾಗ ಉತ್ತರ ಭಾರತದ ರಾಜಕೀಯವನ್ನು "ಮೇಲ್ಮಟ್ಟದ" ಎಂದು ದಕ್ಷಿಣ ಭಾರತದ ರಾಜಕೀಯವನ್ನು "ವಿಷಯಾಧಾರಿತ" ಎಂದು ವರ್ಣಿಸಿದ್ದರು. ಉದ್ದೇಶ ಪ್ರಶಂಸೆ ಆಗಿದ್ದರೂ, ಪ್ರಾದೇಶಿಕ ಹೋಲಿಕೆ ಅನಾವಶ್ಯಕ ಶ್ರೇಣಿ ವ್ಯವಸ್ಥೆ ಸೃಷ್ಟಿಸಿತು.

North vs South

2024ರಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತೆರಿಗೆ ಹಂಚಿಕೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಹಣಕಾಸು ವಿಚಾರದಲ್ಲಿ ಕೇಂದ್ರ ಸರ್ಕಾರದ ಹಿಡಿತ ಕುರಿತ ಚರ್ಚೆ ಸೂಕ್ತವಾದದ್ದೇ ಸರಿ. ಆದರೆ ಅದು "ಉತ್ತರ-ದಕ್ಷಿಣ" ಚೌಕಟ್ಟಿನಲ್ಲಿ ಪ್ರಸ್ತುತವಾದಾಗ ಅಂಕಿ-ಅಂಶಗಳ ಚರ್ಚೆ ಗುರುತಿನ ರಾಜಕಾರಣವಾಗಿ ಬದಲಾಗುತ್ತದೆ.

ಎಂ.ಕೆ.ಸ್ಟಾಲಿನ್ 2022ರಲ್ಲಿ ಉಕ್ರೇನ್ ಯುದ್ಧದ ಸಂದರ್ಭ ತಮಿಳು ವಿದ್ಯಾರ್ಥಿಗಳಿಗೆ ಕೇಂದ್ರದಿಂದ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದ್ದರು. ಅವರ ಪುತ್ರ ಉದಯನಿಧಿ ಸ್ಟಾಲಿನ್ "ಹಿಂದಿ ಹೇರಿಕೆ ತಮಿಳು ಭಾಷೆಯನ್ನು ಅಳಿಸಿಬಿಡುತ್ತದೆ" ಎಂದು ಹೇಳಿದ್ದರು. ಇಂತಹ ಹೇಳಿಕೆಗಳು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದರೂ, ಆಡಳಿತಾತ್ಮಕ ಪರಿಹಾರಗಳನ್ನು ನೀಡುವುದಿಲ್ಲ. ಸಂಕೀರ್ಣ ಪ್ರಶ್ನೆಗಳು ಸರಳವಾದ ದ್ವಂದ್ವಗಳಾಗಿ ಕುಗ್ಗುತ್ತವೆ.

ಸಾಮಾನ್ಯ ಭಾರತೀಯರು ವಿಭಜಿತರಲ್ಲ

ದಕ್ಷಿಣ ಭಾರತೀಯರು ರಾಷ್ಟ್ರವಿರೋಧಿಗಳು ಅಲ್ಲ; ಉತ್ತರ ಭಾರತೀಯರು ಹಿಂದುಳಿದವರಲ್ಲ. ಇವು ರಾಜಕೀಯ ಭಾಷಣಗಳಲ್ಲಿ ಪ್ರಸ್ತಾಪವಾಗಿ ಜನರು ನಂಬಿಕೊಂಡಿರುವ ಚಿತ್ರಣಗಳಷ್ಟೇ ಆಗಿವೆ. ತಮಿಳುನಾಡಿನ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳು ಶ್ಲಾಘನೀಯ. ಹಾಗೆಯೇ ಉತ್ತರ ರಾಜ್ಯಗಳ ಮೂಲಸೌಕರ್ಯ, ಉದ್ಯಮಶೀಲತೆ, ಕ್ರೀಡೆ ಮತ್ತು ಆಡಳಿತ ಸುಧಾರಣೆಗಳ ಸಾಧನೆಗಳೂ ಮಹತ್ವದ್ದು.

ಭಾರತದ ಮಧ್ಯಮ ವರ್ಗ ರಾಜ್ಯಗಳ ನಡುವೆಯೇ ಮುಕ್ತವಾಗಿ ಸಂಚರಿಸುತ್ತಿದೆ. ಉತ್ತರದವರು ಚೆನ್ನೈ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ. ದಕ್ಷಿಣದವರು ದೆಹಲಿ, ಮುಂಬೈನಲ್ಲಿ ಉನ್ನತ ಹುದ್ದೆಗಳನ್ನು ವಹಿಸುತ್ತಾರೆ. ವಿದ್ಯಾರ್ಥಿಗಳು ರಾಜ್ಯಾಂತರ ವಿದ್ಯಾಭ್ಯಾಸ ಮಾಡುತ್ತಾರೆ. ಕುಟುಂಬಗಳು ಪರಸ್ಪರ ವಿವಾಹವಾಗುತ್ತವೆ. ಸಂಸ್ಕೃತಿ ಸಹಜವಾಗಿ ಬೆರೆಯುತ್ತದೆ. ಈ ಸಂಘರ್ಷವನ್ನು ರಾಜಕಾರಣಿಗಳು ನಿರ್ಮಿಸುತ್ತಾರೆ, ಜನರು ಅಲ್ಲ.

ಈ ಉತ್ತರ-ದಕ್ಷಿಣ ವಿಭಜನೆಯ ಬೇರುಗಳು ಬ್ರಿಟಿಷರ "ವಿಭಜಿಸಿ ಆಳುವ" ನೀತಿಯಲ್ಲಿ ಇವೆ. 1816ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಫ್ರಾನ್ಸಿಸ್ ವೈಟ್ ಎಲಿಸ್ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳು ಒಂದೇ ಕುಟುಂಬಕ್ಕೆ ಸೇರಿವೆ ಎಂದು ಗುರುತಿಸಿ "ದ್ರಾವಿಡ" ಪದ ಬಳಕೆ ಮಾಡಿದರು. ಅದು ಶುದ್ಧ ಭಾಷಾಶಾಸ್ತ್ರೀಯ ಅಧ್ಯಯನವಾಗಿತ್ತು. ಜರ್ಮನ್ ಪಂಡಿತ ಮ್ಯಾಕ್ಸ್ ಮುಲ್ಲರ್ ಇಂಡೋ-ಯೂರೋಪಿಯನ್ ಭಾಷೆಗಳ ವಲಸೆ ಕುರಿತು ಪ್ರಸ್ತಾಪಿಸಿದರು. ಆದರೆ ಅದನ್ನು ಜನಾಂಗೀಯ ಸಿದ್ಧಾಂತವನ್ನಾಗಿ ಮಾಡಲಿಲ್ಲ. ನಂತರ ವಸಾಹತು ಚಿಂತಕರು ಅದನ್ನು ವಂಶೀಯ ವ್ಯಾಖ್ಯಾನಗಳಾಗಿ ತಿರುಚಿದರು.

ಆರ್ಯ-ದ್ರಾವಿಡ ಪರಿಕಲ್ಪನೆ

ಮಿಷನರಿ ಪಂಡಿತ ಬಿಷಪ್ ರಾಬರ್ಟ್ ಕಾಲ್ಡ್ವೆಲ್ ಭಾಷೆ ಮತ್ತು ಜನಾಂಗಗಳ ಸಂಶ್ಲೇಷಣೆಯ ಸಿದ್ಧಾಂತ ಮುಂದಿಟ್ಟರು. ಬ್ರಿಟಿಷ್ ಮಾನವಶಾಸ್ತ್ರಜ್ಞ ಹರ್ಬರ್ಟ್ ಹೋಪ್ ರಿಸ್ಲಿ ಮೂಗಿನ ಅಳತೆ, ತಲೆಬುರುಡೆ ಅಳತೆ ಆಧಾರವಾಗಿ ಉತ್ತರ ಭಾರತೀಯರನ್ನು "ಆರ್ಯರು" ಹಾಗೂ ದಕ್ಷಿಣ ಭಾರತೀಯರನ್ನು "ದ್ರಾವಿಡರು" ಎಂದು ವರ್ಗೀಕರಿಸಿದರು. ಇದು ವೈಜ್ಞಾನಿಕ ಆಧಾರವಿಲ್ಲದ ರಾಜಕೀಯ ತಂತ್ರವಾಗಿತ್ತು.

North vs South

ಡಿಎನ್‌ಎ ವಿಜ್ಞಾನ ಸತ್ಯ ಹೊರತಂದಿದೆ

ಆಧುನಿಕ ಡಿಎನ್‌ಎ ಅಧ್ಯಯನಗಳು ಈ ಆರ್ಯ-ದ್ರಾವಿಡ ವಂಶ ಸಿದ್ಧಾಂತವನ್ನು ತಳ್ಳಿಹಾಕಿವೆ. ಭಾರತದ ಜನಸಂಖ್ಯೆ ಆಳವಾದ ಮಿಶ್ರಣ ಹೊಂದಿದೆ. ANI (ಪ್ರಾಚೀನ ಉತ್ತರ ಭಾರತೀಯ) ಮತ್ತು ASI (ಪ್ರಾಚೀನ ದಕ್ಷಿಣ ಭಾರತೀಯ) ಎಂಬ ಅಂಶಗಳು ದೇಶದಾದ್ಯಂತ ಎಲ್ಲ ಸಮುದಾಯಗಳಲ್ಲಿಯೂ ಮಿಶ್ರಿತವಾಗಿವೆ. ಭಾಷೆಯು ರಕ್ತದ ವಂಶವನ್ನು ನಿರ್ಧರಿಸುವುದಿಲ್ಲ. ಇದು ಸಂಸ್ಕೃತಿ ವಿಭಜನೆಗೆ ಸಮಾನವಲ್ಲ. ಆದರೂ ರಾಜಕಾರಣಿಗಳು ಈ ಹಳೆಯ ಕಲ್ಪನೆಗಳನ್ನು ಮರುಬಳಕೆ ಮಾಡುತ್ತಾರೆ, ಏಕೆಂದರೆ ಅವು ಭಾವನಾತ್ಮಕವಾಗಿ ಪರಿಣಾಮಕಾರಿಯಾಗಿವೆ.

ಆಡಳಿತ ವೈಫಲ್ಯ ಮರೆಮಾಚುವ ಅಸ್ತ್ರ

ಉದ್ಯೋಗಗಳು ಕಡಿಮೆಯಾಗಿದ್ದರೆ "ದೆಹಲಿಯಿಂದ ಭೇದಭಾವ" ಎಂದು ಕೂಗುವುದು ಸುಲಭ. ಕೈಗಾರಿಕೆಗಳು ವಲಸೆ ಹೊರಟರೆ "ಇತರೆ ರಾಜ್ಯಗಳ ಅನ್ಯಾಯ" ಎಂದು ಹೇಳುವುದು ಸುಲಭ. ಭ್ರಷ್ಟಾಚಾರ ಹೊರಬಂದರೆ ಭಾಷಾ ಗೌರವದ ಮಾತುಗಳನ್ನು ಮುಂದಿಡುವುದು ಸುಲಭ. ಗುರುತು (ಅಸ್ಮಿತೆ) ಒಂದು ರಾಜಕೀಯ ಕವಚವಾಗುತ್ತದೆ. ಈ ಭಾಷಣಗಳ ಪರಿಣಾಮ ಚುನಾವಣೆಗಿಂತ ದೂರ ಹೋಗುತ್ತದೆ. ಯುವಜನತೆ ರೂಢಿಚಿತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಸಾಮಾಜಿಕ ಮಾಧ್ಯಮಗಳು ಕೋಪವನ್ನು ಹೆಚ್ಚಿಸುತ್ತವೆ. ಸಮುದಾಯಗಳ ನಡುವಿನ ವಿಶ್ವಾಸ ಕುಸಿಯುತ್ತದೆ.

ಬಿಹಾರದ ರೈತ ಹಾಗೂ ತಂಜಾವೂರಿನ ರೈತ ಒಂದೇ ಹವಾಮಾನ ಸವಾಲು ಎದುರಿಸುತ್ತಾರೆ. ದೆಹಲಿಯ ಮಹಿಳೆ ಹಾಗೂ ಕೊಯಮತ್ತೂರಿನ ಮಹಿಳೆ ಒಂದೇ ಕೆಲಸದ ಸವಾಲುಗಳನ್ನು ಎದುರಿಸುತ್ತಾರೆ. ಇಲ್ಲಿ ಸಮಸ್ಯೆಗಳು ಒಂದೇ, ಅವರು ಪರಸ್ಪರ ಶತ್ರುಗಳಲ್ಲ, ದುರ್ಬಲ ಆಡಳಿತ ಮತ್ತು ಅವಕಾಶವಾದಿ ರಾಜಕಾರಣವೇ ಜನರ ಶತ್ರುಗಳು. ಭಾರತವು ಪ್ರಜಾಸತ್ತಾತ್ಮಕ ರಾಷ್ಟ್ರ. ರಾಜ್ಯ-ಕೇಂದ್ರಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಅಂಕಿ-ಅಂಶ, ಸಂವಾದ ಮತ್ತು ಪರಿಹಾರಗಳ ಮೂಲಕ ಪರಿಹರಿಸಬೇಕು, ಪ್ರಚೋದನಾತ್ಮಕ ಭಾಷಣಗಳ ಮೂಲಕವಲ್ಲ. ಹಿಂದಿಯನ್ನು ಅವಮಾನಿಸದೆ ತಮಿಳನ್ನು ಸಂಭ್ರಮಿಸಬಹುದು. ಉತ್ತರ ಭಾರತವನ್ನು ದ್ವೇಷಿಸದೆ ಕೇಂದ್ರವನ್ನು ಟೀಕಿಸಬಹುದು. ರಾಷ್ಟ್ರದ ಏಕತೆಯನ್ನು ಹಾನಿಗೊಳಿಸದೆ ರಾಜ್ಯದ ಹಕ್ಕುಗಳನ್ನು ರಕ್ಷಿಸಬಹುದು.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಇಂಡಿಯಾ ಬಣದ ಪ್ರಾಬಲ್ಯ, ಹೊಸ ಸಮೀಕ್ಷೆಯಿಂದ ಮತ್ತೊಮ್ಮೆ ಸ್ಪಷ್ಟನೆ

ದಯಾನಿಧಿ ಮಾರನ್ ಅವರ ಹೇಳಿಕೆ ಖಂಡನೀಯ. ಇಂತಹ ಹೇಳಿಕೆಗಳು ಯಾವ ಪಕ್ಷದಿಂದ ಬಂದರೂ ಖಂಡಿಸಬೇಕು. ಏಕೆಂದರೆ ಅವು ಒಂದು ಪ್ರದೇಶವನ್ನಲ್ಲ, ಸಾರ್ವಜನಿಕ ಸಂವಾದವನ್ನೇ ವಿಷಗೊಳಿಸುತ್ತವೆ. ಭಾರತ ಅನೇಕ ಆಕ್ರಮಣಗಳು, ವಸಾಹತುಶಾಹಿ ಮತ್ತು ಬಡತನವನ್ನು ಎದುರಿಸಿ ಉಳಿದಿದೆ. ಏಕೆಂದರೆ ಜನರು ಶಾಶ್ವತವಾಗಿ ವಿಭಜಿತರಾಗಲಿಲ್ಲ. ಇಂದಿನ ನಾಯಕರು ಇತಿಹಾಸದಿಂದ ಪಾಠ ಕಲಿಯಬೇಕು. ಅದರ ಕೆಟ್ಟ ಅಧ್ಯಾಯಗಳು ಮರುಕಳಿಸಬಾರದು. ಬ್ರಿಟಿಷರು ನಮ್ಮನ್ನು ವಿಭಜಿಸಿ ಆಳಿದರು. ಇಂದಿನ ನಾಯಕರು ನಮ್ಮನ್ನು ಒಗ್ಗೂಡಿಸಿ ಆಡಳಿತ ನಡೆಸಬೇಕು. ಅದಕ್ಕಿಂತ ಕಡಿಮೆ ಯಾವುದಾದರೂ ಪ್ರಾದೇಶಿಕ ಹೆಮ್ಮೆ ಅಲ್ಲ, ಅದು ರಾಷ್ಟ್ರದ ವಿರುದ್ಧದ ದ್ರೋಹವೇ ಸರಿ.
----

ಈ ವಿವಾದದ ಬಗ್ಗೆ ಕೆಲ ಪ್ರಶ್ನೋತ್ತರಗಳು

1. ಉತ್ತರ ಭಾರತದ ಮಹಿಳೆ vs ದಕ್ಷಿಣ ಭಾರತದ ಮಹಿಳೆ (Women In North vs South India) ವಿವಾದಕ್ಕೆ ಕಾರಣವಾದ ಹೇಳಿಕೆ ಯಾವುದು?

ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ ಭಾರತದ ಮಹಿಳೆಯರನ್ನು ತಮಿಳುನಾಡಿನ ಮಹಿಳೆಯರೊಂದಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದರು. ಅವರು ತಮಿಳುನಾಡಿನಲ್ಲಿ ಮಹಿಳೆಯರಿಗೆ ಶಿಕ್ಷಣ ಉತ್ತೇಜನ ದೊರೆಯುತ್ತದೆ ಎಂದು ಹೇಳಿ, ಉತ್ತರ ಭಾರತದಲ್ಲಿ ಮಹಿಳೆಯರನ್ನು ಮನೆ ಮತ್ತು ಅಡುಗೆಮನೆಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

2. ಈ ಹೇಳಿಕೆಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು?

ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಯಿತು. ಬಿಜೆಪಿ ಮತ್ತು ಇತರ ನಾಯಕರು ಇದನ್ನು ಪ್ರಾದೇಶಿಕ ವಿಭಜನೆ ಉಂಟುಮಾಡುವ ಹೇಳಿಕೆ ಎಂದು ಖಂಡಿಸಿದರು.

3. ಈ ಘಟನೆ ಕೇವಲ ಒಬ್ಬ ರಾಜಕಾರಣಿಯ ಹೇಳಿಕೆಯೇ?

ಇಲ್ಲ. ಉತ್ತರ-ದಕ್ಷಿಣ ಹೋಲಿಕೆ ರಾಜಕೀಯದಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುವ ಪ್ರವೃತ್ತಿಯಾಗಿದೆ. ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರರು ಸಹ ಪ್ರಾದೇಶಿಕ ಹೋಲಿಕೆಗಳನ್ನು ಮಾಡಿದ್ದಾರೆ.

4. ಉತ್ತರ-ದಕ್ಷಿಣ ವಿಭಜನೆ ರಾಜಕೀಯವಾಗಿ ಏಕೆ ಬಳಸಲಾಗುತ್ತದೆ?

ಪ್ರಾದೇಶಿಕ ಗುರುತಿನ ರಾಜಕಾರಣ ಭಾವನಾತ್ಮಕವಾಗಿ ಜನರನ್ನು ಒಗ್ಗೂಡಿಸುತ್ತದೆ. ಚುನಾವಣಾ ಸಮಯದಲ್ಲಿ ಇಂತಹ ಹೇಳಿಕೆಗಳು ಮತದಾರರ ಮನೋಭಾವವನ್ನು ಪ್ರಭಾವಿಸಲು ಬಳಸಲಾಗುತ್ತದೆ.

5. ಹಣಕಾಸು ಹಂಚಿಕೆ ವಿಚಾರವೂ ಈ ವಿವಾದಕ್ಕೆ ಸಂಬಂಧಿಸಿದ್ದೇ?

ಹೌದು. ತೆರಿಗೆ ಹಂಚಿಕೆ ಕುರಿತು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದರು. ಇಂತಹ ಚರ್ಚೆಗಳು ಆರ್ಥಿಕ ವಿಚಾರದಿಂದ ಗುರುತಿನ ರಾಜಕಾರಣಕ್ಕೆ ತಿರುಗುವ ಸಾಧ್ಯತೆ ಇದೆ.

6. ಭಾಷಾ ರಾಜಕಾರಣವೂ ಇದರಲ್ಲಿ ಪಾತ್ರವಹಿಸುತ್ತಿದೆಯೇ?

ಹೌದು. ಹಿಂದಿ ಹೇರಿಕೆ ಕುರಿತಾಗಿ ಉದಯನಿಧಿ ಸ್ಟಾಲಿನ್ ಎಚ್ಚರಿಕೆ ನೀಡಿದ್ದರು. ಭಾಷಾ ಪ್ರಶ್ನೆಗಳು ಭಾವನಾತ್ಮಕ ರಾಜಕೀಯ ಸಾಧನವಾಗುತ್ತವೆ.

7. ಆರ್ಯ-ದ್ರಾವಿಡ ಸಿದ್ಧಾಂತದ ಮೂಲವೇನು?

ಈ ಕಲ್ಪನೆ ವಸಾಹತು ಕಾಲದಲ್ಲಿ ರೂಪುಗೊಂಡದ್ದು. ಬ್ರಿಟಿಷರು ಭಾಷಾ ಅಧ್ಯಯನಗಳನ್ನು ಜನಾಂಗೀಯ ವಿಭಜನೆಗೊಳಿಸಿ ರಾಜಕೀಯ ಲಾಭಕ್ಕಾಗಿ ಬಳಸಿದರು. ಆರ್ಯರು ವಲಸೆ ಬಂದು ದ್ರಾವಿಡರ ಶೋ‍ಷಣೆ ಮಾಡಿದರು ಎಂದು ಈ ಸಿದ್ಧಾಂತವು ಪ್ರತಿಪಾದಿಸುತ್ತದೆ.

8. ಆಧುನಿಕ ವಿಜ್ಞಾನ ಏನು ಹೇಳುತ್ತದೆ?

ವಂಶವಾಹಿ (DNA) ಅಧ್ಯಯನಗಳು ಭಾರತದಲ್ಲಿ ಬಹುಕಾಲದ ಹಿಂದೆಯೇ ವರ್ಣಸಂಕರವಾಗಿದೆ. ಹೀಗಾಗಿ ನಿರ್ದಿಷ್ಟವಾಗಿ ಇಂಥದ್ದೇ ತಳಿಗೆ ಸೇರಿದ ಮಾನವ ಜನಾಂಗ ಇಂತಲ್ಲಿ ವಾಸವಿದೆ ಎಂದು ಹೇಳಲು ಸಾಧ್ಯವಿಲ್ಲಎಂದು ಸ್ಪಷ್ಟಪಡಿಸಿವೆ. ಉತ್ತರ-ದಕ್ಷಿಣ ಜನಾಂಗೀಯ ವಿಭಜನೆಗೆ ವೈಜ್ಞಾನಿಕ ಆಧಾರವಿಲ್ಲ.

9. ಸಾಮಾನ್ಯ ನಾಗರಿಕರ ಜೀವನದಲ್ಲಿ ಈ ವಿಭಜನೆ ಎಷ್ಟು ಸತ್ಯ?

ಸಾಮಾನ್ಯ ಜನರಲ್ಲಿ ಉತ್ತರ-ದಕ್ಷಿಣ ಭಾರತೀಯರೆಂಬ ಶತ್ರುತ್ವ ಅಸ್ತಿತ್ವದಲ್ಲಿಲ್ಲ. ಉದ್ಯೋಗ, ಶಿಕ್ಷಣ, ಸುರಕ್ಷತೆ, ಜೀವನಮಟ್ಟ ಎಂಬ ಆಶಯಗಳು ಎಲ್ಲರಿಗೂ ಸಾಮಾನ್ಯ.

10. ಇಂತಹ ವಿವಾದಗಳಿಂದ ಹೊರಬರಲು ಏನು ಮಾಡಬೇಕು?

ರಾಜಕೀಯ ನಾಯಕರು ಪ್ರೌಢಿಮೆ ತೋರಬೇಕು. ಪ್ರಾದೇಶಿಕತೆಯನ್ನು ಹೆಮ್ಮೆಯಿಂದ ಸಂಭ್ರಮಿಸಬಹುದು. ಆದರೆ ಇತರರನ್ನು ಅವಮಾನಿಸಬಾರದು. ದಾಖಲೆಗಳ ವಿನಿಮಯ, ಸಂವಾದ ಮತ್ತು ಆಡಳಿತಾತ್ಮಕ ಪರಿಹಾರಗಳ ಮೂಲಕವೇ ಒಕ್ಕೂಟ ವ್ಯವಸ್ಥೆಯು ಬಲವಾಗುತ್ತದೆ.

ಬರಹ: ಕೀರ್ತಿ ಪಾಂಡೆ

(ಲೇಖಕಕಿ ಕೀರ್ತಿ ಪಾಂಡೆ ಹಿರಿಯ ಪತ್ರಕರ್ತೆ ಹಾಗೂ ಲೇಖಕಿ. ರಾಜಕೀಯ, ಸಮಾಜ, ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಸಂಶೋಧನಾಧಾರಿತ ವಿಶ್ಲೇಷಣೆಗಾಗಿ ಪ್ರಸಿದ್ಧರು. ಟೆಲಿವಿಷನ್ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಅನುಭವ ಹೊಂದಿರುವ ಅವರು ಆಡಳಿತ, ಆರೋಗ್ಯ, ಲಿಂಗಸಮಾನತೆ ಮತ್ತು ಆರ್ಥಿಕ ವಿಷಯಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+