ತಮಿಳುನಾಡು ರಾಜಕೀಯದಲ್ಲಿ ಇಂಡಿಯಾ ಬಣದ ಪ್ರಾಬಲ್ಯ, ಹೊಸ ಸಮೀಕ್ಷೆಯಿಂದ ಮತ್ತೊಮ್ಮೆ ಸ್ಪಷ್ಟನೆ
ದಕ್ಷಿಣ ಭಾರತದ ಪ್ರಬಲ ರಾಜ್ಯ ಹಾಗೂ ಹಲವು ವಿಚಾರಗಳಿಂದ ಇಡೀ ದೇಶದಲ್ಲೇ ಹೆಸರನ್ನು ಮಾಡಿರುವ ತಮಿಳುನಾಡು ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ರಾಜಕೀಯ ನಾಯಕರು. ಒಂದು ಕಡೆ ಬಿಜೆಪಿ ನಾಯಕರಿಗೆ ತಮಿಳುನಾಡು ಗೆಲ್ಲುವ ಹಂಬಲ, ಇನ್ನೊಂದು ಕಡೆ ಇಂಡಿಯಾ ಒಕ್ಕೂಟದ ನಾಯಕರಿಗೆ ತಮಿಳುನಾಡು ರಾಜ್ಯ ಉಳಿಸಿಕೊಳ್ಳುವ ಅನಿವಾರ್ಯತೆ. ಹೀಗಿದ್ದಾಗ ನಡೆದಿರುವ ಸಮೀಕ್ಷೆಯೊಂದು ಕರ್ನಾಟಕದ ನೆರೆ ರಾಜ್ಯದ ಬಗ್ಗೆ ಭವಿಷ್ಯ ನುಡಿದಿದೆ.
ಇಂಡಿಯಾ ಟುಡೇ ಮತ್ತು ಸಿವೋಟರ್ ಕಡೆಯಿಂದ ನಡೆದ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಮಿಳುನಾಡು ರಾಜ್ಯದ ರಾಜಕೀಯ ಭವಿಷ್ಯ ನುಡಿದಿದೆ. ಅಕಸ್ಮಾತ್ ಈಗಲೇ ಅಂದರೆ ಜನವರಿ 2026ರಲ್ಲಿ ದಿಢೀರ್ ಲೋಕಸಭೆ ಚುನಾವಣೆ ನಡೆದ್ರೆ ತಮಿಳುನಾಡು ರಾಜ್ಯದಲ್ಲಿ ಇಂಡಿಯಾ ಒಕ್ಕೂಟ ಎಲ್ಲಾ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ತಮಿಳುನಾಡು ರಾಜ್ಯದಲ್ಲಿ ಒಟ್ಟು 39 ಲೋಕಸಭಾ ಸ್ಥಾನ ಇದ್ದು, ಈ ಪೈಕಿ 38 ಸ್ಥಾನಗಳನ್ನು ಇಂಡಿಯಾ ಒಕ್ಕೂಟ ಗೆದ್ದು ಬೀಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಅಲ್ಲದೆ ಈ ರಾಜ್ಯದಲ್ಲಿ, ಬಿಜೆಪಿ ಮತ್ತು ಮಿತ್ರ ಪಕ್ಷಗಳು ಅಷ್ಟಾಗಿ ಉತ್ತಮ ಫಲಿತಾಂಶ ಪಡೆಯುವುದು ಕಷ್ಟ ಎಂದು ಸಮೀಕ್ಷೆ ಹೇಳಿದೆ.

ಎನ್‌ಡಿಎ ಒಕ್ಕೂಟಕ್ಕೆ ಭಾರಿ ಹಿನ್ನಡೆ?
ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭ ಆಗಿರುವ ಸಮಯದಲ್ಲೇ, ಯಾವ ಸಮಯದಲ್ಲಿ ಬೇಕಾದರೂ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಹೀಗಿದ್ದಾಗ ಬಿಜೆಪಿ & ಮಿತ್ರ ಪಕ್ಷಗಳು ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅದ್ಭುತವಾದ ಸಾಧನೆ ಮಾಡಲು ಕಾಯುತ್ತಿದ್ದರು. ಆದರೆ ಇದೀಗ ಹೊರಬಿದ್ದಿರುವ ಸಮೀಕ್ಷೆ ಒಂದಷ್ಟು ಹಿನ್ನಡೆಯನ್ನ ತಂದಿದ್ದು, NDA ತಮಿಳುನಾಡಿನಲ್ಲಿ ಕೇವಲ ಒಂದು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಹಾಗಾದರೆ, ಮತ ಹಂಚಿಕೆ ಪ್ರಮಾಣದಲ್ಲಿ ಯಾರಿಗೆ ಎಷ್ಟು ಸಿಗಬಹುದು? ಮುಂದೆ ಓದಿ.
ಯಾರಿಗೆ ಎಷ್ಟು ಮತ ಪ್ರಮಾಣ?
ಸಮೀಕ್ಷೆಯ ಮಾಹಿತಿ ಪ್ರಕಾರ, ಇಂಡಿಯಾ ಮೈತ್ರಿಕೂಟಕ್ಕೆ ತಮಿಳುನಾಡು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಇದೆ. ಈ ಸಮೀಕ್ಷೆ ಆಧಾರಿತ ಮತ ಹಂಚಿಕೆ ದತ್ತಾಂಶವು ಇದೇ ಮಾಹಿತಿ ನೀಡುತ್ತಿದೆ. ಆ ಮೂಲಕ ತಮಿಳುನಾಡು ರಾಜ್ಯದಲ್ಲಿ ಇಂದೇ ಲೋಕಸಭೆ ಚುನಾವಣೆ ನಡೆದರೂ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಭರ್ಜರಿ ಗೆಲುವು ಗ್ಯಾರಂಟಿ ಎನ್ನಲಾಗಿದೆ. ಶೇಕಡಾ 45ರಷ್ಟು ಮತ ಹಂಚಿಕೆ ಇಂಡಿಯಾ ಮೈತ್ರಿಕೂಟಕ್ಕೆ ಸಿಗಲಿದೆಯಂತೆ, ಇನ್ನುಳಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಶೇಕಡಾ 33ರಷ್ಟು ಮತ ಹಂಚಿಕೆ ಪ್ರಮಾಣ ದೊರೆಯಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ. ಹಾಗೇ, ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ ಟಿವಿಕೆ ಸೇರಿ ಇತರೆ ಪಕ್ಷಗಳು ಶೇ. 15 ರಷ್ಟು ಮತ ಹಂಚಿಕೆ ಪ್ರಮಾಣ ಪಡೆಯುವ ನಿರೀಕ್ಷೆ ಇದೆ.












Click it and Unblock the Notifications