ಕನ್ನಡ ಮಾಧ್ಯಮದ ಇಂಜಿನಿಯರಿಂಗ್ ಕೋರ್ಸ್‌ಗಳಿಗಿಲ್ಲ ಬೆಲೆ: ಮೂರು ವರ್ಷ ಕಳೆದರೂ ದಾಖಲಾಗಿಲ್ಲ ವಿದ್ಯಾರ್ಥಿಗಳು
ಮೂರು ವರ್ಷ ಕಳೆದರೂ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಕೋರ್ಸುಗಳನ್ನು ತೆಗೆದುಕೊಳ್ಳುವವರಿಲ್ಲದಂತಾಗಿದ್ದು ಕನ್ನಡದಲ್ಲಿ ಇಂಜಿನಿಯರಿಂಗ್ ಕಲಿಯಲು ಪ್ರೋತ್ಸಾಹದ ಕೊರತೆ ಇದೆ ಎಂದು ತಜ್ಞರು ದೂರಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇತ್ತೀಚೆಗೆ 2022-23ನೇ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಮತ್ತು ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕನ್ನಡ ಮಾಧ್ಯಮ ಇಂಜಿನಿಯರಿಂಗ್ ಅನ್ನು ತೆಗೆದುಕೊಳ್ಳುವವರು ಇರಲಿಲ್ಲ.
ಸತತ ಮೂರನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮದ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ತೆಗೆದುಕೊಳ್ಳುವವರು ಕಂಡುಬಂದಿಲ್ಲ. ಇದರಿಂದಾಗಿ ಮೂರು ಕಾಲೇಜುಗಳಲ್ಲಿ ಎಲ್ಲಾ 90 ಸೀಟುಗಳು ಖಾಲಿಯಾಗಿವೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಪ್ರಕಾರ, ಆಯ್ಕೆಯ ಪ್ರವೇಶದ ಸಮಯದಲ್ಲಿ 30 ಅಭ್ಯರ್ಥಿಗಳು ಕನ್ನಡ ಮಾಧ್ಯಮದ ಎಂಜಿನಿಯರಿಂಗ್ ಸೀಟುಗಳನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಅವರ್ಯಾರೂ ಕಾಲೇಜುಗಳಿಗೆ ಆಗಮಿಸಿಲ್ಲ ಎಂದರು.

2021-22ರಲ್ಲಿ 10 ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರಲ್ಲಿ ಯಾರೂ ಪ್ರವೇಶ ಪಡೆದಿಲ್ಲ. 2020-21ನೇ ಶೈಕ್ಷಣಿಕ ವರ್ಷದಲ್ಲಿಯೂ 17 ವಿದ್ಯಾರ್ಥಿಗಳು ಸೀಟುಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಕಾಲೇಜುಗಳಿಗೆ ಆಗಮಿಸಿಲ್ಲ.
ಉನ್ನತ ಶಿಕ್ಷಣ ಇಲಾಖೆಯು 2020-21ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡಲು ನಿರ್ಧರಿಸಿದೆ. ಮೂರು ಕಾಲೇಜುಗಳಾದ ಎಸ್‌ಜೆಸಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಚಿಕ್ಕಬಳ್ಳಾಪುರ), ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಮೈಸೂರು) ಮತ್ತು ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬೀದರ್)ನಲ್ಲಿ ಕನ್ನಡ ಮಾಧ್ಯಮದಲ್ಲಿ ಸಿವಿಲ್ ಮತ್ತು ಮೆಕ್ಯಾನಿಕಲ್ ಸ್ಟ್ರೀಮ್‌ಗಳಲ್ಲಿ ಕೋರ್ಸ್‌ಗಳ ಶಿಕ್ಷಣ ನೀಡಲು ನಿರ್ಧರಿಸಿದೆ.

ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡುವಂತೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಶಿಫಾರಸು ಮಾಡಿದ ನಂತರ, ಸರ್ಕಾರ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ನಿರ್ಧರಿಸಿತು. ಆದರೆ ಯಾವುದೇ ಕಾಲೇಜುಗಳಲ್ಲಿ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣವನ್ನು ವಿಟಿಯು ಉಪಕುಲಪತಿ ಎಸ್ ವಿದ್ಯಾಶಂಕರ್ ವಿವರಿಸಿದ್ದಾರೆ.

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಗೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ನಾವು ಉದ್ಯೋಗಗಳಲ್ಲಿ ಮೀಸಲಾತಿ ನೀಡದ ಹೊರತು ಈ ಉಪಕ್ರಮವು ಫಲಪ್ರದವಾಗುವುದಿಲ್ಲ ಎಂದು ವಿಟಿಯು ಉಪಕುಲಪತಿ ಎಸ್ ವಿದ್ಯಾಶಂಕರ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ನಡುವೆ ಎರಡನೇ ವರ್ಷದ ಕೋರ್ಸ್‌ನ ಪಠ್ಯಕ್ರಮವನ್ನು ಕನ್ನಡ ಮಾಧ್ಯಮಕ್ಕೆ ಅನುವಾದಿಸುವ ಕಾರ್ಯವೂ ಬಹುತೇಕ ಮುಗಿದಿದೆ ಎಂದು ವಿಟಿಯು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications