ಬ್ಯಾಂಕ್ ಸಿಬ್ಬಂದಿಯೇ ಗ್ರಾಹಕರನ್ನು ವಂಚಿಸಿದರೆ ಹೇಗೆ, ಸುಳ್ಳು ಹೇಳಿ ಹಣ ಸಂಗ್ರಹಿಸುವುದು ಅಪರಾಧ: ನಿರ್ಮಲಾ ಸೀತಾರಾಮನ್ ಎಚ್ಚರಿಕೆ
ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ತಪ್ಪು ಮಾಹಿತಿ ನೀಡಿ ಉತ್ಪನ್ನ ಮಾರಾಟ ಮಾಡುವ (ಮಿಸ್-ಸೆಲ್ಲಿಂಗ್) ಮತ್ತು ಅತಿಯಾದ ಸಾಲ ವಿತರಣೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಬ್ಯಾಂಕುಗಳು ತಮ್ಮ ಮೂಲ ಉದ್ದೇಶವಾದ ಕೋರ್ ಬ್ಯಾಂಕಿಂಗ್ (Core Banking) ಚಟುವಟಿಕೆಗಳಿಗೆ ಮರಳಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳು ಮತ್ತು ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಬ್ಯಾಂಕುಗಳು ತಮ್ಮ ಪ್ರಾಥಮಿಕ ಕೆಲಸವನ್ನು ಮರೆತು ಬೇರೆ ವ್ಯವಹಾರಗಳಲ್ಲಿ ತೊಡಗುತ್ತಿವೆ ಎಂದು ಸಚಿವರು ಟೀಕಿಸಿದರು. ಬ್ಯಾಂಕುಗಳು ಮೊದಲು ಗ್ರಾಹಕರನ್ನು ತಲುಪಿ, ಠೇವಣಿಗಳನ್ನು (Deposits) ಸಂಗ್ರಹಿಸಬೇಕು ಎಂದು ಸೂಚನೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳ (CASA) ಮೂಲಕ ಬರುವ ಕಡಿಮೆ ವೆಚ್ಚದ ಠೇವಣಿಗಳು ಕಡಿಮೆಯಾಗುತ್ತಿವೆ. ಇದನ್ನು ಸುಧಾರಿಸುವುದು ಬ್ಯಾಂಕುಗಳ ಮೊದಲ ಆದ್ಯತೆಯಾಗಬೇಕು. ನಿಮ್ಮ ಗ್ರಾಹಕರನ್ನು ಸರಿಯಾಗಿ ತಿಳಿಯಿರಿ (KYC), ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಸುರಕ್ಷಿತವಾಗಿ ಸಾಲ ನೀಡಿ. ಇದುವೇ ನಿಜವಾದ ಬ್ಯಾಂಕಿಂಗ್ ಎಂದು ಅವರು ನಿರ್ಮಲಾ ಸೀತಾರಾಮನ್ ವ್ಯಾಖ್ಯಾನಿಸಿದರು.
ಗ್ರಾಹಕರ ಆರ್ಥಿಕ ಹೊರೆ ಹೆಚ್ಚಳ
ವಿಮೆ ಮಾರಾಟದ ಹೆಸರಿನಲ್ಲಿ 'ಮಿಸ್-ಸೆಲ್ಲಿಂಗ್' ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಬ್ಯಾಂಕುಗಳು ಸಾಲ ನೀಡುವ ಸಂದರ್ಭದಲ್ಲಿ ಗ್ರಾಹಕರಿಗೆ ಅನಗತ್ಯವಾಗಿ ವಿಮಾ ಪಾಲಿಸಿಗಳನ್ನು ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಬ್ಬ ಗ್ರಾಹಕ ಗೃಹ ಸಾಲ ಪಡೆಯುವಾಗ ಈಗಾಗಲೇ ತನ್ನ ಆಸ್ತಿಯನ್ನು ಅಡಮಾನ ಇಟ್ಟಿರುತ್ತಾನೆ. ಜೊತೆಗೆ ಅವನ ಬಳಿ ಜೀವ ವಿಮೆ ಅಥವಾ ಆರೋಗ್ಯ ವಿಮೆ ಇರುತ್ತದೆ. ಹೀಗಿದ್ದರೂ ಸಹ, ಬ್ಯಾಂಕುಗಳು ಮತ್ತೊಂದು ವಿಮೆ ಖರೀದಿಸುವಂತೆ ಒತ್ತಡ ಹೇರುತ್ತಿವೆ. ಇದು ಗ್ರಾಹಕರ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ ಎಂದರು.
ಲಾಭದ ಉದ್ದೇಶಕ್ಕೆ ಸಾಲ ಬೇಡ
ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳ ನಡುವಿನ ನಿಯಂತ್ರಣಾ ವ್ಯವಸ್ಥೆಯಲ್ಲಿರುವ ಕೆಲವು ಗೊಂದಲಗಳನ್ನು ಬಳಸಿಕೊಂಡು ಇಂತಹ ದಂಧೆ ನಡೆಯುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಬ್ಯಾಂಕುಗಳಿಗೆ ತಾಕೀತು ಮಾಡಿದರು. ಹಾದಿ ತಪ್ಪಿದ ಸಾಲ ವಿತರಣೆ ಮತ್ತು ಬಂಡವಾಳದ ಬಗ್ಗೆಯೂ ಅಸಮಾಧಾನ ಹೊರಹಾಕಿದ ಅವರು, ಕೆಲವು ವರ್ಷಗಳ ಹಿಂದೆ ಬ್ಯಾಂಕುಗಳು ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಿದ್ದರಿಂದ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಹದಗೆಟ್ಟಿತ್ತು. ಸರ್ಕಾರವು ಇನ್ನು ಮುಂದೆ ಬ್ಯಾಂಕುಗಳಿಗೆ ಪದೇ ಪದೇ ಬಂಡವಾಳ ನೀಡುವುದಿಲ್ಲ. ಬ್ಯಾಂಕುಗಳು ತಮ್ಮ ಆಡಳಿತ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಿಕೊಂಡು, ಮಾರುಕಟ್ಟೆಯಿಂದಲೇ ಬಂಡವಾಳ ಕ್ರೋಢೀಕರಿಸಬೇಕು ಎಂದು ಸಲಹೆ ನೀಡಿದರು.
ಸಾಲ ನೀಡುವಾಗ ವೃತ್ತಿಪರ ಮೌಲ್ಯಮಾಪನ ಇರಬೇಕು ಮತ್ತು ಕೇವಲ ಲಾಭದ ಉದ್ದೇಶಕ್ಕಾಗಿ ಸಾಲ ನೀಡುವುದು ಬೇಡ ಎಂದು ಅವರು ಎಚ್ಚರಿಸಿದರು. ಬ್ಯಾಂಕುಗಳು ಸಾರ್ವಜನಿಕರ ಹಣದ ರಕ್ಷಕರು. ಅವರು ಲಾಭದ ಹಿಂದೆ ಬಿದ್ದು ಗ್ರಾಹಕರ ಹಿತಾಸಕ್ತಿಯನ್ನು ಬಲಿ ಕೊಡಬಾರದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜನಸಾಮಾನ್ಯರ ವಿಶ್ವಾಸ ಗಳಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದರು.
ಬ್ಯಾಂಕುಗಳು ಕೇವಲ ಲಾಭದ ಬೆನ್ನತ್ತದೆ, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗಾಗಲೇ 'ಮಿಸ್-ಸೆಲ್ಲಿಂಗ್' ವಿರುದ್ಧ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದನ್ನು ಬ್ಯಾಂಕುಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.












Click it and Unblock the Notifications