Tirupati darshan; ಹೊಸವರ್ಷ, ವೈಕುಂಠ ಏಕಾದಶಿ, ಭಕ್ತರ ಗಮನಕ್ಕೆ
ಅಮರಾವತಿ, ಡಿಸೆಂಬರ್ 27: ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಆಂಧ್ರ ಪ್ರದೇಶದ ತಿರುಪತಿ ಸಹ ಒಂದಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಆಗಮಿಸುತ್ತಾರೆ. ರಜೆ ದಿನಗಳು, ವಿಶೇಷ ಸಂದರ್ಭದಲ್ಲಿ ದಿನವೊಂದಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ವರ್ಷಾಂತ್ಯದ ರಜೆ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿಯೂ ಭಕ್ತರ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಹೊಸ ವರ್ಷ, ವೈಕುಂಠ ಏಕಾದಶಿ ಸಂದರ್ಭದಲ್ಲಿ ಬರುವ ಭಕ್ತರಿಗಾಗಿ ಟಿಟಿಡಿ ವಿಶೇಷ ದರ್ಶನ ಟಿಕೆಟ್ ವ್ಯವಸ್ಥೆ ಮಾಡಿದೆ. ಆನ್‌ಲೈನ್‌ನಲ್ಲಿಯೇ ಈ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ. ಈ ಟಿಕೆಟ್ ಬೆಲೆ 300 ರೂ.ಗಳು. ಟಿಟಿಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ಆರಂಭವಾಗಿದೆ.
ಹಲವಾರು ಭಕ್ತರು ಹೊಸ ವರ್ಷದ ಮೊದಲ ದಿನವೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ. ಇದೇ ಸಮಯಕ್ಕೆ ಅಂದರೆ ಜನವರಿ 1, 2ರಂದು ವೈಕುಂಠ ಏಕಾದಶಿ ಇದೆ. ಈ ಹಿನ್ನಲೆಯಲ್ಲಿ ವಿಶೇಷ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಎಸ್‌ಇಡಿ ಟಿಕೆಟ್ ವಿವರಗಳು
ಹೊಸ ವರ್ಷ, ವೈಕುಂಠ ಏಕಾದಶಿಗೆ ಆಗಮಿಸುವ ಭಕ್ತರಿಗಾಗಿ ಟಿಟಿಡಿ ಎಸ್‌ಇಡಿ (ಸ್ಪೆಷಲ್ ಎಂಟ್ರಿ ದರ್ಶನ) ಟಿಕೆಟ್ ವ್ಯವಸ್ಥೆ ಮಾಡಿದೆ. ಈ ಟಿಕೆಟ್‌ಗಳ ಬೆಲೆ 300 ರೂ.ಗಳು. ಡಿಸೆಂಬರ್ 24ರಿಂದಲೇ ಈ ಟಿಕೆಟ್‌ಗಳ ಮಾರಾಟ ಆರಂಭವಾಗಿದೆ. ಟಿಟಿಡಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಟಿಕೆಟ್‌ಗಳು ಲಭ್ಯವಿದೆ. ಈ ವಿಶೇಷ ಟಿಕೆಟ್‌ಗಳು ಜನವರಿ 1ರಿಂದ 11ರ ವರೆತೆ ಚಾಲ್ತಿಯಲ್ಲಿ ಇರುತ್ತದೆ. ಜನವರಿ 2ರಂದು ವೈಕುಂಠ ಏಕಾದಶಿ ಇದ್ದು, ಅಂದು ಭಕ್ತರು ವಿಶೇಷ ದರ್ಶನದ ಟಿಕೆಟ್ ಪಡೆದು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.

10 ದಿನ ವೈಕುಂಠ ದ್ವಾರದ ಪ್ರವೇಶ
2023ರ ಜನವರಿ 1ರ 19:10ಕ್ಕೆ ವೈಕುಂಠ ಏಕಾದಶಿ ಪ್ರಾರಂಭವಾಗುತ್ತದೆ. ಜನವರಿ 2ರ 20.25ಕ್ಕೆ ಅಂತ್ಯಗೊಳ್ಳುತ್ತದೆ. ತಿರುಪತಿಯಲ್ಲಿ ವೈಕುಂಠ ಏಕಾದಶಿ ಸಂದರ್ಭದಲ್ಲಿ ವೈಕುಂಠ ದ್ವಾರದ ಮೂಲಕ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ತಿರುಪತಿ ತಿಮ್ಮಪ್ಪನ ಗರ್ಭಗುಡಿಯನ್ನು ಸುತ್ತುವರೆದಿರುವ ವೈಕುಂಠ ದ್ವಾರವನ್ನು 10 ದಿನಗಳ ತನಕ ತೆರೆಯಲು ಟಿಟಿಡಿ ತೀರ್ಮಾನಿಸಿದೆ. ವಿಶೇಷ ಟಿಕೆಟ್ ಪಡೆದವರು ವೈಕುಂಠ ದ್ವಾರದ ಮೂಲಕ ಸಾಗಬಹುದಾಗಿದೆ.

ಸರ್ವ ದರ್ಶನಂ ಟೋಕನ್‌ಗಳು
ಟಿಟಿಡಿ ಜನವರಿ 1 ರಿಂದ 11ರ ತನಕ ಸರ್ವ ದರ್ಶನಂ ಟೋಕನ್‌ಗಳನ್ನು ಸಹ ಮಾರಾಟ ಮಾಡಲಿದೆ. ತಿರುಪತಿ ಮತ್ತು ತಿರುಮಲದ ಮೂಲ ಸ್ಥಳದಲ್ಲಿಯೇ ಈ ಟೋಕನ್‌ಗಳು ಭಕ್ತಾದಿಗಳಿಗೆ ಲಭ್ಯವಿದೆ.
ವೈಕುಂಠ ಏಕಾದಶಿ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ತಿರುಪತಿಗೆ ಆಗಮಿಸುತ್ತಾರೆ. ಆದ್ದರಿಂದ ವಸತಿ ವ್ಯವಸ್ಥೆಯ ಬಗ್ಗೆ ಗಮನ ಹರಿಸಿ. ಭಕ್ತರು ಕನಿಷ್ಠ ಒಂದು ದಿನ ಮುಂಚೆ, ಗರಿಷ್ಠ 120 ದಿನ ಮೊದಲು ವಸತಿ ವ್ಯವಸ್ಥೆ ಕಾಯ್ದಿರಿಸುವ ಅವಕಾಶವಿದೆ. ನೀವು ದಿನಾಂಕ ನಮೂದು ಮಾಡಿದ ಬಳಿಕ ವೆಬ್‌ಸೈಟ್‌ನಲ್ಲಿಯೇ ಲಭ್ಯವಿರುವ ಕೊಠಡಿ, ದರ ಕಾಣಿಸುತ್ತದೆ. ಆದ್ಯತೆಗೆ ತಕ್ಕಂತೆ ಬುಕ್ ಮಾಡಬಹುದಾಗಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?
ವೈಕುಂಠ ಏಕಾದಶಿ ಸಂದರ್ಭದಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಟಿಟಿಡಿ ವಿಶೇಷ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ಭಕ್ತರು https://tirupatibalaji.ap.gov.in/#/login ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.
ವೆಬ್‌ಸೈಟ್‌ಗೆ ಲಾಗಿನ್ ಆದ ಬಳಿಕ ಮೊಬೈಲ್ ಸಂಖ್ಯೆ ನಮೂದು ಮಾಡಿ ಕ್ಯಾಪ್ಚಾ ಕೋಡ್ ಹಾಕಬೇಕು. ನಿಮ್ಮ ಮೊಬೈಲ್ ಸಂಖ್ಯೆಗೆ ಕಳಿಸಲಾದ ಒಟಿಪಿ ಹಾಕಿ ಟಿಕೆಟ್ ಬುಕ್ ಮಾಡಬಹುದಾಗಿದೆ.












Click it and Unblock the Notifications