ಬೆಂಗಳೂರಿಗೆ ಹೊಸ ಟಕ್ಕರ್ ಕೊಟ್ಟ ತಮಿಳುನಾಡು: ಹೊಸೂರಲ್ಲಿ ಐಟಿ ಪಾರ್ಕ್, ಜ್ಞಾನ ಕಾರಿಡಾರ್, 400 ಕೋಟಿ "ರೂ."!
ತಮಿಳುನಾಡು ಸರ್ಕಾರವು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಪೈಪೋಟಿ ನೀಡುವುದಕ್ಕೆ ಮುಂದಾಗಿದೆ. ಕೇಂದ್ರ ಹಾಗೂ ತಮಿಳುನಾಡಿನ ನಡುವಿನ ಜಿದ್ದಾಜಿದ್ದಿ, ರೂಪಾಯಿ ಮೌಲ್ಯ ಚಿಹ್ನೆ (ರೂಪಾಯಿ ಕರೆನ್ಸಿ ಚಿಹ್ನೆ) ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಗೊಂದಲಗಳ ನಡುವೆಯೇ 2025 -2026ನೇ ಸಾಲಿನ ತಮಿಳುನಾಡು ಬಜೆಟ್ ಅನ್ನು ಸಿ.ಎಂ ಎಂ.ಕೆ ಸ್ಟಾಲಿನ್ ಅವರು ಮಂಡನೆ ಮಾಡಿದ್ದು. ಇದರಲ್ಲಿ ಬೆಂಗಳೂರಿಗೆ ಪೈಪೋಟಿ ಕೊಡುವ ಹಲವು ಅಂಶಗಳು ಸೇರಿವೆ. ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪೈಪೋಟಿ ಕೊಡುತ್ತಿದೆ. ಇದರ ನಡುವೆ ಹೊಸೂರಿನಲ್ಲಿ ಬೃಹತ್ ಕೈಗಾರಿಕಾ ಅಭಿವೃದ್ಧಿಗೆ ತಮಿಳುನಾಡು ಸರ್ಕಾರವು ಬಜೆಟ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಅನುದಾನ ಘೋಷಿಸಿದೆ.
ದಕ್ಷಿಣ ಭಾರತದಲ್ಲಿ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿ ಇವೆ. ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಜಿದ್ದಾಜಿದ್ದಿನ ಪೈಪೋಟಿ ಶುರುವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂದಾಗಿದೆ. ಈ ರೀತಿ ಇರುವಾಗಲೇ ಹೊಸೂರಿನಲ್ಲಿ ಬೃಹತ್ ಕೈಗಾರಿಕೆ ಅಭಿವೃದ್ಧಿಗೆ ತಮಿಳುನಾಡು ಸರ್ಕಾರ ಮುಂದಾಗಿದೆ.

ತಮಿಳುನಾಡಿನ ಹೊಸೂರು ಪ್ರದೇಶವು ಈಗಾಗಲೇ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. ಇದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮುಂದಾಗಿದ್ದಾರೆ. ಇದು ಸಹಜವಾಗಿಯೇ ಬೆಂಗಳೂರಿಗೆ ಪೈಪೋಟಿ ಸೃಷ್ಟಿಯಾಗಲಿದೆ.
Exclusive Knowledge Corridor: ತಮಿಳುನಾಡು ಸರ್ಕಾರವು ಅಲ್ಲಿನ ರಾಜಧಾನಿ ಚೆನ್ನೈನ ಮಾದರಿಯಲ್ಲಿ ಹೊಸೂರು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದೆ. ತಮಿಳುನಾಡಿನ ಚೆನ್ನೈನಲ್ಲಿ ಇಸಿಆರ್ ಪ್ರದೇಶದಲ್ಲಿ ಈಗಾಗಲೇ ಸ್ಥಾಪನೆ ಆಗಿರುವಂತೆಯೇ ಹೊಸೂರಿನಲ್ಲಿಯೂ "ವಿಶೇಷ ಜ್ಞಾನ ಕಾರಿಡಾರ್" ಸ್ಥಾಪನೆ ಮಾಡುವುದಾಗಿ ತಮಿಳುನಾಡಿನ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಹೊಸೂರಿನಲ್ಲಿ 400 ಕೋಟಿ ರೂಪಾಯಿ ಹೂಡಿಕೆಯೊಂದಿಗೆ 500,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಟೈಡೆಲ್ ಐಟಿ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬರೋಬ್ಬರಿ 6,600ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಹೊಸೂರು ಇದೆ. ಇದೀಗ ಇಲ್ಲಿ ಇಷ್ಟು ದೊಡ್ಡ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಆಗುತ್ತಿರುವುದು ಮುಂದಿನ ದಿನಗಳಲ್ಲಿ ಬೆಂಗಳೂರು ಕೈಗಾರಿಕೆಗೆ ಭರ್ಜರಿ ಪೈಪೋಟಿ ಎದುರಾಗಲಿದೆ. ಅಲ್ಲದೆ ಐಟಿ ಪಾರ್ಕ್‌ನಿಂದ ಬೆಂಗಳೂರು ಐಟಿಗೂ ಪೈಪೋಟಿ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ನಗರದ ಎರಡನೇ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಸರ್ಕಾರವು ಸಿದ್ಧವಾಗುವುದಕ್ಕೆ ಮುಂಚೆಯೇ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಜಾಗಗಳನ್ನು ಗುರುತು ಮಾಡಲಾಗಿದೆ. ಈಗ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯು ತಮಿಳುನಾಡಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications