NEET UG 2026 Paper Leak: ಸಿಬಿಐ ತನಿಖೆಯಲ್ಲಿ ಮಹತ್ವದ ಸಾಕ್ಷ್ಯ ಲಭ್ಯ, 5 ಲಕ್ಷಕ್ಕೆ ಮಾರಾಟವಾಯ್ತಾ ಪ್ರಶ್ನೆಪತ್ರಿಕೆ ?
ನವದೆಹಲಿ: ಇಡೀ ದೇಶಾದ್ಯಂತ ಭಾರಿ ಸಂಚಲನ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಯುಜಿ-2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಆರೋಪಿ ಯಶ್ ಯಾದವ್ ಎಂಬಾತನ ಮೂಲಕ ಈ ಸೋರಿಕೆಯಾದ ಪ್ರಶ್ನೆಪತ್ರಿಕೆಯು ರಾಜಸ್ಥಾನವನ್ನು ತಲುಪಿರುವುದು ದೃಢಪಟ್ಟಿದೆ. ಈ ಜಾಲವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದು, ಲಕ್ಷಾಂತರ ರೂಪಾಯಿಗಳಿಗೆ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ.
ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆಯ ಜಾಲದಲ್ಲಿ ಯಶ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದಾನೆ. ಆತನಿಗೆ ವಿಕಾಸ್ ಬಿವಾಲ್ ಎಂಬಾತನ ಪರಿಚಯವಿತ್ತು. ಈ ವಿಕಾಸ್ ಬಿವಾಲ್‌ನ ತಂದೆಯಾದ ದಿನೇಶ್ ಬಿವಾಲ್, ಸೋರಿಕೆಯಾದ ಪ್ರಶ್ನೆಪತ್ರಿಕೆಯ ಹಾರ್ಡ್ ಕಾಪಿಯನ್ನು ಸ್ಕ್ಯಾನ್ ಮಾಡಿ, ಅದನ್ನು ಪಿಡಿಎಫ್ ಫೈಲ್‌ಗಳಾಗಿ ಪರಿವರ್ತಿಸುವ ಕೆಲಸ ಮಾಡಿದ್ದನು. ಆರೋಪಿಗಳು ಮೊದಲು ಪ್ರಶ್ನೆಪತ್ರಿಕೆಯನ್ನು ತಮ್ಮ ಕೈಯಾರೆ ಬರೆದುಕೊಂಡು, ನಂತರ ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ತಂದಿದ್ದರು. ಬಳಿಕ ಈ ಪಿಡಿಎಫ್ ಪ್ರತಿಗಳನ್ನು ರಾಜಸ್ಥಾನದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ಸಿಕರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳಿಗೆ ಹಂಚಲಾಗಿದೆ.

ಬಹಳ ಅಚ್ಚರಿಯ ವಿಚಾರವೆಂದರೆ, ಈ ಹಗರಣದಲ್ಲಿ ಭಾಗಿಯಾಗಿರುವ ಯಶ್ ಯಾದವ್ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಕಲ್ ಸೈನ್ಸಸ್ (BAMS) ವಿದ್ಯಾರ್ಥಿಯಾಗಿದ್ದಾನೆ. ಇತರರಿಗೆ ನೀಟ್ ಪ್ರಶ್ನೆಪತ್ರಿಕೆ ನೀಡಿದ್ದ ಈತನೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲನಾಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸಿಕರ್‌ನಲ್ಲಿರುವ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳು ಈ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಬರೋಬ್ಬರಿ 2 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಹಣ ಪಾವತಿಸಿದ್ದಾರೆ ಎಂದು ಸ್ವತಃ ವಿದ್ಯಾರ್ಥಿಗಳೇ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.
ಪ್ರಕರಣದ ಜಾಡು ಹಿಡಿದು ಹೊರಟಿರುವ ಸಿಬಿಐ ಅಧಿಕಾರಿಗಳು, ಈಗಾಗಲೇ ಸಿಕರ್‌ನ ವಿವಿಧ ಕೋಚಿಂಗ್ ಸಂಸ್ಥೆಗಳ ಸಿಬ್ಬಂದಿ ಹಾಗೂ ಮಾಲೀಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಗರಣದ ಹಿಂದಿನ ಪ್ರಮುಖ ರೂವಾರಿ ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಶುಭಂ ಖೈರ್ನಾರ್ ಎಂಬಾತ, ತಾನು ಈ ಹಗರಣದ ಮಾಸ್ಟರ್ ಮೈಂಡ್ ಅಲ್ಲ ಎಂದು ಅಧಿಕಾರಿಗಳ ಮುಂದೆ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾನೆ.
ಸದ್ಯ ಸಿಬಿಐ ಅಧಿಕಾರಿಗಳು ಆರೋಪಿಗಳು ಹಾಗೂ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಪರೀಕ್ಷಾ ಅಕ್ರಮದ ಮೂಲವನ್ನು ಬೇರುಸಹಿತ ಕಿತ್ತುಹಾಕಲು ಅಧಿಕಾರಿಗಳು ಮುಂದಾಗಿದ್ದು, ಈ ಅಕ್ರಮ ವ್ಯವಹಾರದಲ್ಲಿ ನಡೆದಿರುವ ಹಣದ ವಹಿವಾಟಿನ ಬಗ್ಗೆಯೂ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
NEET UG-2026 paper leak | Initial investigations have revealed that through Yash Yadav, the UG NEET paper reached Rajasthan. Yash knew Vikas Biwal. Vikas Biwal's father, Dinesh Biwal, scanned the hard copy of the question paper and made PDF files. The accused had handwritten the…
— ANI (@ANI) May 14, 2026
ಲಕ್ಷಾಂತರ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದಿ ಬರೆಯುವ ಇಂತಹ ಅತ್ಯಂತ ಮಹತ್ವದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಈ ರೀತಿಯ ಬೃಹತ್ ಅಕ್ರಮ ನಡೆದಿರುವುದು ಪ್ರಾಮಾಣಿಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವು ಪ್ರಭಾವಿಗಳ ಮುಖವಾಡ ಕಳಚುವ ಸಾಧ್ಯತೆಯಿದೆ.












Click it and Unblock the Notifications