NEET UG 2026ರ ಶುಲ್ಕ ಮರುಪಾವತಿ: ಬ್ಯಾಂಕ್ ವಿವರ ನೀಡಲು ವಿದ್ಯಾರ್ಥಿಗಳಿಗೆ ಗಡುವು ವಿಸ್ತರಿಸಿದ NTA
ನವದೆಹಲಿ: 2026ರ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮತ್ತೊಂದು ಪ್ರಮುಖ ಅಪ್ಡೇಟ್ ನೀಡಿದೆ. ಪರೀಕ್ಷಾ ಶುಲ್ಕದ ಮರುಪಾವತಿಗಾಗಿ ಬ್ಯಾಂಕ್ ಖಾತೆ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಎನ್‌ಟಿಎ ಇದೀಗ ಜೂನ್ 22, 2026ರ ರಾತ್ರಿ 11:50ರವರೆಗೆ ವಿಸ್ತರಿಸಿದೆ.
ಈ ಹಿಂದೆ ಬ್ಯಾಂಕ್ ಮಾಹಿತಿಯನ್ನು ಸಲ್ಲಿಸಲು ಕೇವಲ ಮೇ 27ರವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ, ಹಲವು ವಿದ್ಯಾರ್ಥಿಗಳು ಹಾಗೂ ಪೋಷಕರು ತಾಂತ್ರಿಕ ಕಾರಣಗಳಿಂದಲೋ ಅಥವಾ ಮಾಹಿತಿಯ ಕೊರತೆಯಿಂದಲೋ ಇನ್ನು ಕೂಡ ತಮ್ಮ ಬ್ಯಾಂಕ್ ವಿವರಗಳನ್ನು ಸಲ್ಲಿಸದ ಕಾರಣ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎನ್‌ಟಿಎ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಈಗಾಗಲೇ ಸುಮಾರು 13 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ವಿವರಗಳನ್ನು ಪೋರ್ಟಲ್‌ನಲ್ಲಿ ಯಶಸ್ವಿಯಾಗಿ ಅಪ್‌ಡೇಟ್ ಮಾಡಿದ್ದಾರೆ ಎಂದು ಎನ್‌ಟಿಎ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಇನ್ನು ಕೂಡ ವಿವರಗಳನ್ನು ನಮೂದಿಸದ ಅಭ್ಯರ್ಥಿಗಳಿಗೆ ಇದೊಂದು ಕೊನೆಯ ಅವಕಾಶವಾಗಿದ್ದು, ಕೂಡಲೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬ್ಯಾಂಕ್ ವಿವರಗಳನ್ನು ಸಲ್ಲಿಸುವ ಸರಳ ವಿಧಾನ ಇಲ್ಲಿದೆ:
ಲಾಗಿನ್ ಆಗಿ: ಮೊದಲಿಗೆ, ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್ ಹಾಗೂ ಪಾಸ್‌ವರ್ಡ್ ಬಳಸಿ ನೀಟ್ (UG)-2026 ಅಧಿಕೃತ ನೋಂದಣಿ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು.
ರಿಫಂಡ್ ಲಿಂಕ್: ಮುಖಪುಟದಲ್ಲಿ ಅಥವಾ ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಕಾಣುವ 'Refund Link' ಮೇಲೆ ಕ್ಲಿಕ್ ಮಾಡಬೇಕು.
ವಿವರಗಳ ನಮೂದು: ಆ ನಂತರ, ಅಭ್ಯರ್ಥಿಗಳು ಬ್ಯಾಂಕ್ ಖಾತೆದಾರರ ಹೆಸರು, ಐಎಫ್‌ಎಸ್‌ಸಿ (IFSC) ಕೋಡ್, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್‌ನ ಸಂಪೂರ್ಣ ಹೆಸರನ್ನು ನಮೂದಿಸಬೇಕು.
ಕ್ಯಾನ್ಸಲ್ಡ್ ಚೆಕ್ ಅಪ್‌ಲೋಡ್: ಬ್ಯಾಂಕ್ ವಿವರಗಳು ನಿಖರವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ರದ್ದಾದ ಚೆಕ್‌ನ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಇದು ಕಡ್ಡಾಯವಲ್ಲದಿದ್ದರೂ (Optional), ಮುಂದಾಗಬಹುದಾದ ತಪ್ಪುಗಳನ್ನು ತಡೆಯಲು ಮತ್ತು ಮರುಪಾವತಿ ಸುಗಮಗೊಳಿಸಲು ಇದನ್ನು ಅಪ್‌ಲೋಡ್ ಮಾಡುವುದು ಬಹಳ ಉತ್ತಮ ಎಂದು ಎನ್‌ಟಿಎ ಸಲಹೆ ನೀಡಿದೆ.
ಅಭ್ಯರ್ಥಿಗಳು ತಾವು ನೀಡುವ ಬ್ಯಾಂಕ್ ಖಾತೆಯು ಪ್ರಸ್ತುತ ಚಾಲ್ತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಯ ಅಥವಾ ಪೋಷಕರ ಬ್ಯಾಂಕ್ ಖಾತೆಗಳನ್ನು ನೀಡುವುದು ಹೆಚ್ಚು ಸೂಕ್ತ. ಅತ್ಯಂತ ಮುಖ್ಯವಾದ ವಿಚಾರವೆಂದರೆ, ಒಮ್ಮೆ ಬ್ಯಾಂಕ್ ವಿವರಗಳನ್ನು ಅಂತಿಮವಾಗಿ ಸಬ್‌ಮಿಟ್ ಮಾಡಿದ ನಂತರ, ಯಾವುದೇ ಕಾರಣಕ್ಕೂ ಆ ಮಾಹಿತಿಯನ್ನು ಮತ್ತೆ ಬದಲಾಯಿಸಲು ಅಥವಾ ತಿದ್ದುಪಡಿ ಮಾಡಲು ಪ್ರಾಧಿಕಾರವು ಅವಕಾಶ ನೀಡುವುದಿಲ್ಲ. ಹೀಗಾಗಿ, ನಮೂದಿಸಿದ ಪ್ರತಿಯೊಂದು ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸಬ್‌ಮಿಟ್ ಮಾಡಿ.
📢 NEET (UG)-2026 | Fee Refund Update
— National Testing Agency (@NTA_Exams) May 27, 2026
Important announcement for candidates yet to submit bank details for fee refund!
The last date has been extended to 22nd June 2026 (till 11:50 PM) 🗓️
✅ ~13 lakh candidates have already updated their details
⏳ If you haven't yet — don't… pic.twitter.com/Poy22425YK
ಕೊನೆಯ ಗಳಿಗೆಯಲ್ಲಿ ಸರ್ವರ್ ಡೌನ್ ಆಗುವ ಅಥವಾ ವೆಬ್‌ಸೈಟ್ ಹ್ಯಾಂಗ್ ಆಗುವ ಸಮಸ್ಯೆಗಳನ್ನು ತಪ್ಪಿಸಲು ಜೂನ್ 22ರವರೆಗೆ ಕಾಯದೆ, ತಕ್ಷಣವೇ ಈ ಪ್ರಕ್ರಿಯೆಯನ್ನು ಮುಗಿಸುವುದು ಉತ್ತಮ. ಈ ಮರುಪಾವತಿ ಪ್ರಕ್ರಿಯೆಯು ಬ್ಯಾಂಕ್ ಪರಿಶೀಲನೆಗಳ ನಂತರ ಆರಂಭವಾಗಲಿದ್ದು, ಅರ್ಹ ವಿದ್ಯಾರ್ಥಿಗಳ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ.












Click it and Unblock the Notifications