ಸಿ-ವೋಟರ್ ಸಮೀಕ್ಷೆ : ಎನ್‌ಡಿಎಗೆ ಬಹುಮತಕ್ಕೆ 8 ಸ್ಥಾನ ಕಡಿಮೆ!
ಬೆಂಗಳೂರು, ಮಾರ್ಚ್ 11 : ಎನ್‌ಡಿಎ ಮೈತ್ರಿಕೂಟ ಬಹುಮತಕ್ಕಿಂತ 8 ಸ್ಥಾನಗಳನ್ನು ಕಡಿಮೆ ಪಡೆಯಲಿದೆ ಎಂದು ಚುನಾವಣಾ ಸಮೀಕ್ಷೆ ಹೇಳಿದೆ. ಈಗಾಗಲೇ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು 7 ಹಂತದಲ್ಲಿ ಚುನಾವಣೆಗಳು ನಡೆಯಲಿವೆ.
ಸಿ-ವೋಟರ್ ಐಎಎನ್‌ಎಸ್‌ಗಾಗಿ ಚುನಾವಣಾ ಸಮೀಕ್ಷೆಯನ್ನು ನಡೆಸಿದೆ. ಮಾರ್ಚ್ ತಿಂಗಳಿನಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ನರೇಂದ್ರ ಮೋದಿ ಮೋದಿ ಸರ್ಕಾರ ಉಗ್ರರ ಶಿಬಿರಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದ ಬಳಿಕ ನಡೆಸಲಾದ ಸಮೀಕ್ಷೆ ಇದಾಗಿದೆ.
ಉಗ್ರರ ಶಿಬಿರಗಳ ಮೇಲೆ ಮಾಡಿದ ದಾಳಿಯು ಚುನಾವಣೆಯಲ್ಲಿ ಸಹಾಯಕವಾಗಲಿದೆ. ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಹಾಘಟ್ ಬಂಧನ್‌ಗೆ ಹಿನ್ನಡೆ ಆಗಲಿದೆ.
ಲೋಕಸಭೆಯಲ್ಲಿ ಬಹುಮತ ಪಡೆಯಲು 273 ಸೀಟುಗಳ ಅಗತ್ಯವಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 264 ಸ್ಥಾನಗಳನ್ನು ಪಡೆಯಲಿದೆ. ಚುನಾವಣೋತ್ತರ ಮೈತ್ರಿಯಿಂದಾಗಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಸಮೀಕ್ಷೆ ಹೇಳಿದೆ.

ಯಾರಿಗೆ ಎಷ್ಟು ಸ್ಥಾನಗಳು?
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 264, ಯುಪಿಎ ಮೈತ್ರಿಕೂಟ 141 ಮತ್ತು ಇತರರು 138 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಪ್ರಕಾರ ಎನ್‌ಡಿಎ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ಸಂಖ್ಯೆಗಿಂತ 8 ಸ್ಥಾನಗಳನ್ನು ಕಡಿಮೆ ಪಡೆಯಲಿದೆ.

ಚುನಾವಣೋತ್ತರ ಮೈತ್ರಿ
ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 264 ಸೀಟುಗಳಲ್ಲಿ ಜಯಗಳಿಸಲಿದೆ. ಒಂದು ವೇಳೆ ವೈಎಸ್ಆರ್ ಕಾಂಗ್ರೆಸ್, ಎಂಎನ್‌ಎಫ್, ಬಿಜೆಡಿ, ಟಿಆರ್‌ಎಸ್ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡರೆ ಮೈತ್ರಿಕೂಟದ ಸಂಖ್ಯೆ 307ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಉತ್ತರ ಪ್ರದೇಶದಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನ
80 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೊಡ್ಡ ರಾಜ್ಯ ಉತ್ತರ ಪ್ರದೇಶ. ಬಿಜೆಪಿಯನ್ನು ಇಲ್ಲಿ ಸೋಲಿಸಬೇಕು ಎಂದು ಬಿಎಸ್ಪಿ ಮತ್ತು ಎಸ್‌ಪಿ ಹೊಂದಾಣಿಕೆ ಮಾಡಿಕೊಂಡಿವೆ. ಎಸ್‌ಪಿ 37, ಬಿಎಸ್‌ಪಿ 38 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಆದರೆ, ಎನ್‌ಡಿಎ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಕಾಂಗ್ರೆಸ್‌ಗೆ 86 ಸೀಟು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 86 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಯುಪಿಎ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳು 55 ಸ್ಥಾನಗಳಲ್ಲಿ ಜಯಗಳಿಸಲಿವೆ. ಯುಪಿಎ ಚುನಾವಣೋತ್ತರ ಮೈತ್ರಿಯನ್ನು ಎಐಯುಡಿಎಫ್, ಎಲ್‌ಡಿಎಫ್, ಎಂಜಿಬಿ, ಟಿಎಂಸಿ ಜೊತೆ ಮಾಡಿಕೊಂಡರೆ ಮೈತ್ರಿಕೂಟದ ಸಂಖ್ಯೆ 226ಕ್ಕೆ ಏರಿಕೆಯಾಗಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಸ್ಥಾನ
ಬಿಜೆಪಿ ಬಿಹಾರದಲ್ಲಿ 36 (2014ರಲ್ಲಿ 22), ಗುಜರಾತ್‌ನಲ್ಲಿ 24, ಕರ್ನಾಟಕದಲ್ಲಿ 16, ಮಧ್ಯಪ್ರದೇಶದಲ್ಲಿ 24, ಮಹಾರಾಷ್ಟ್ರದಲ್ಲಿ 36, ಓಡಿಸ್ಸಾದಲ್ಲಿ 12, ರಾಜಸ್ಥಾನದಲ್ಲಿ 20 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಯ ವರದಿ ಹೇಳಿದೆ.

ಕಾಂಗ್ರೆಸ್‌ಗೆ ಎಷ್ಟು ಸ್ಥಾನ?
ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ 7, ಛತ್ತೀಸ್‌ಗಢ್‌ನಲ್ಲಿ 5, ಕೇರಳದಲ್ಲಿ 14, ಕರ್ನಾಟಕದಲ್ಲಿ 9, ಜಾರ್ಖಂಡ್‌ನಲ್ಲಿ 5, ಮಧ್ಯಪ್ರದೇಶದಲ್ಲಿ 5, ಮಹಾರಾಷ್ಟ್ರದಲ್ಲಿ 7, ಪಂಜಾಬ್‌ನಲ್ಲಿ 12, ರಾಜಸ್ಥಾನದಲ್ಲಿ 5, ತಮಿಳುನಾಡಿನಲ್ಲಿ 4, ಉತ್ತರ ಪ್ರದೇಶದಲ್ಲಿ 4 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications