ಬಿಜೆಪಿ ಜೊತೆ ಸೇರಲು ನನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ: ಶರದ್ ಪವಾರ್
ಬಿಜೆಪಿ ಜೊತೆ ಹೋಗಲು ಕೆಲವು ಹಿತೈಷಿಗಳು ನನ್ನ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ತನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಂಗೋಳದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪವಾರ್, ಎನ್‌ಸಿಪಿಯ ರಾಜಕೀಯ ನೀತಿಗಳು ಬಿಜೆಪಿಯ ನೀತಿಗಳ ಜೊತೆ ಹೊಂದಾಣಿಕೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

"ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿ ನಾನು, ನನ್ನ ಪಕ್ಷ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಭಾರತೀಯ ಜನತಾ ಪಕ್ಷದೊಂದಿಗಿನ ಯಾವುದೇ ಸಂಬಂಧವು ಎನ್‌ಸಿಪಿಯ ರಾಜಕೀಯ ನೀತಿಗೆ ಹೊಂದಿಕೆಯಾಗುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರು.
ಕೆಲವು "ಹಿತೈಷಿಗಳು" ತನ್ನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಅವರು ಎಂದಿಗೂ ಭಾರತೀಯ ಜನತಾ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಜೊತೆಗಿನ ಹೊಂದಾಣಿಕೆ ಸುದ್ದಿಗೆ ತೆರೆ ಎಳೆದಿದ್ದಾರೆ.
"ನಮ್ಮಲ್ಲಿ ಕೆಲವರು (ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಗುಂಪು) ವಿಭಿನ್ನ ನಿಲುವು ತಳೆದಿದ್ದಾರೆ. ನಮ್ಮ ಕೆಲವು ಹಿತೈಷಿಗಳು ನಮ್ಮ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಬಹುದೇ ಎಂದು ನೋಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಸೌಹಾರ್ದಯುತವಾಗಿ ಚರ್ಚಿಸಲು ಪ್ರಯತ್ನಿಸುತ್ತಿದ್ದಾರೆ" ಅವರು ಯಾರ ಹೆಸರನ್ನೂ ಪ್ರಸ್ತಾಪಿಸದೆ ಹೇಳಿದರು.
ಅಜಿತ್ ಪವಾರ್ ಜೊತೆ ಭೇಟಿಗೆ ಸ್ಪಷ್ಟನೆ
ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸರ್ಕಾರದ ಭಾಗವಾಗಿರುವ ತಮ್ಮ ಸೋದರಳಿಯ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಶನಿವಾರ ಪುಣೆಯಲ್ಲಿ ನಡೆದ "ರಹಸ್ಯ" ಸಭೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, "ಅವರು ನನ್ನ ಸೋದರಳಿಯ ಎಂದು ನಿಮಗೆ ಹೇಳಲು ಬಯಸುತ್ತೇನೆ. ನನ್ನ ಸೋದರಳಿಯನನ್ನು ಭೇಟಿಯಾಗುವುದರಲ್ಲಿ ತಪ್ಪೇನು? ಒಂದು ಕುಟುಂಬದ ಹಿರಿಯ ವ್ಯಕ್ತಿಯು ಇನ್ನೊಬ್ಬ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಬಯಸಿದರೆ, ಅದರಲ್ಲಿ ಯಾವುದೇ ಸಮಸ್ಯೆ ಇರಬಾರದು. ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್ ಗುಂಪು) ಮತ್ತು ಕಾಂಗ್ರೆಸ್ ಒಳಗೊಂಡಿರುವ ಮಹಾ ವಿಕಾಸ್ ಅಘಾಡಿಗೆ ಜನರು ರಾಜ್ಯದ ಆಡಳಿತವನ್ನು ಹಸ್ತಾಂತರಿಸಲಿದ್ದಾರೆ" ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದರು.
ಭಾನುವಾರ ದಿವಂಗತ ಶಾಸಕ ಗಣಪತ್ರಾವ್ ದೇಶಮುಖ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಶರದ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸೊಲ್ಲಾಪುರ ಜಿಲ್ಲೆಯಲ್ಲಿ ವೇದಿಕೆ ಹಂಚಿಕೊಂಡರು. ಕಳೆದ ತಿಂಗಳು ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದರೆ, ಅವರನ್ನು ಬೆಂಬಲಿಸುವ ಎನ್‌ಸಿಪಿಯ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಲ್ಲದೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಶರದ್ ಪವಾರ್ ಮುಖ್ಯ ಅತಿಥಿಯಾಗಿದ್ದರು. ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದು ಹಲವು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು.












Click it and Unblock the Notifications