National Space Day: ಚಂದ್ರಯಾನ 3ರ ಯಶಸ್ಸಿನ ಸ್ಮರಣೆ: ಆಗಸ್ಟ್ 23 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಣೆ
ನವದೆಹಲಿ, ಆಗಸ್ಟ್ 29: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇದರ ಯಶಸ್ಸಿನ ಸ್ಮರಣೆಗಾಗಿ ಕೇಂದ್ರ ಸಂಪುಟ ಮಂಗಳವಾರ ಆಗಸ್ಟ್ 23 ಅನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಆಚರಿಸುವುದಾಗಿ ಘೋಷಿಸಿದೆ.
'ಇಂದು ಇಡೀ ದೇಶ ಚಂದ್ರಯಾನ 3 ಮಿಷನ್‌ನ ಯಶಸ್ಸನ್ನು ಆಚರಿಸುತ್ತಿದೆ. ನಮ್ಮ ರಾಷ್ಟ್ರದ ವಿಜ್ಞಾನಿಗಳ ಈ ಐತಿಹಾಸಿಕ ಸಾಧನೆಯನ್ನು ಕೇಂದ್ರ ಸಚಿವ ಸಂಪುಟ ಶ್ಲಾಘಿಸುತ್ತದೆ. ಈ ಯಶಸ್ಸಿನ ಸ್ಮರಣೆಗಾಗಿ ಕ್ಯಾಬಿನೆಟ್ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲು ಅನುಮೋದನೆ ನೀಡಿದೆ. ಈ ಅದ್ಭುತ ಸಾಧನೆಗಾಗಿ ಇಸ್ರೋವನ್ನು ಸಂಪುಟ ಅಭಿನಂದಿಸುತ್ತದೆ' ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

'ನಮ್ಮ ವಿಜ್ಞಾನಿಗಳು ನಿರಂತರ ಪ್ರಯತ್ನಗಳನ್ನು ಮಾಡಿದ್ದಾರೆ. ಇದರಿಂದ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಲು ಸಹಾಯ ಮಾಡಿದೆ. ನಮ್ಮ ವಿಜ್ಞಾನಿಗಳು ಜ್ಞಾನದ ಹುಡುಕಾಟದಲ್ಲಿ ಅಡೆತಡೆಗಳನ್ನು ಮುರಿಯಲು ಹೇಗೆ ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ' ಎಂದು ಠಾಕೂರ್ ತಿಳಿಸಿದ್ದಾರೆ.
ಬಾಹ್ಯಾಕಾಶ ಅಭಿವೃದ್ಧಿಯಲ್ಲಿ ಹೊಸ ಮುನ್ನಡೆಗಳತ್ತ ಸಾಗಲು ಪ್ರಗ್ಯಾನ್ ರೋವರ್ ಸಹಾಯ ಮಾಡುತ್ತದೆ. ಚಂದ್ರನ ರಹಸ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ದಾರಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಠಾಕೂರ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
'ಅನೇಕ ಮಹಿಳಾ ವಿಜ್ಞಾನಿಗಳು ಭಾರತದ ಬಾಹ್ಯಾಕಾಶ ಯೋಜನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಚಂದ್ರಯಾನ 3 ರ ಯಶಸ್ಸಿನ ಸಂದರ್ಭದಲ್ಲಿ ಅದೇ ರೀತಿ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಇದು ಮಹಿಳೆಯರನ್ನು ಪ್ರೇರೇಪಿಸುತ್ತದೆ' ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಬಗ್ಗೆ ಅವರ ದೃಷ್ಟಿಕೋನ ಮತ್ತು ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪುಟ ಅಭಿನಂದಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವು ಹೊಸ ವೈಭವದತ್ತ ಮುನ್ನಡೆಯುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.
ಭಾರತದ ಚಂದ್ರಯಾನ-3 ಆಗಸ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದೆ. ಯುಎಸ್, ಚೀನಾ ಮತ್ತು ರಷ್ಯಾ ನಂತರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ನಾಲ್ಕನೇ ದೇಶ ಭಾರತವಾಗಿದೆ.












Click it and Unblock the Notifications