Jammu And Kashmir Assembly Election 2024: ಕಾಂಗ್ರೆಸ್ ಇಲ್ಲದೇ ಬಹುಮತ ಪಡೆದ ನ್ಯಾಷನಲ್ ಕಾನ್ಪರೆನ್ಸ್
ಶ್ರೀನಗರ, ಅಕ್ಟೋಬರ್ 10: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆ ಬಳಿಕ ಅಚ್ಚರಿಯ ಬೆಳವಣಿಗೆ ನಡೆದಿದೆ. ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ನ್ಯಾಷನಲ್ ಕಾನ್ಪರೆನ್ಸ್ ಕಾಂಗ್ರೆಸ್ ಬೆಂಬಲವಿಲ್ಲದೇ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್ ನಂಬರ್ ತಲುಪಿದೆ. ಒಟ್ಟು 90 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಚುನಾವಣೆಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ 42 ಸ್ಥಾನಗಳಲ್ಲಿ ಜಯಗಳಿಸಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಅಕ್ಟೋಬರ್ 8ರ ಮಂಗಳವಾರ ಮತ ಎಣಿಕೆ ನಡೆದಿದ್ದು, ನ್ಯಾಷನಲ್ ಕಾನ್ಪರೆನ್ಸ್ 42, ಬಿಜೆಪಿ 29, ಕಾಂಗ್ರೆಸ್ 6, ಪಿಡಿಪಿ 3, ಜೆಪಿಸಿ 1 ಮತ್ತು ಇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.

ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರು. ಆದ್ದರಿಂದ ನ್ಯಾಷನಲ್ ಕಾನ್ಪರೆನ್ಸ್ 42 + ಕಾಂಗ್ರೆಸ್ 6 ಸೇರಿ ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ರಚನೆಯಾಗಲಿದೆ. ನ್ಯಾಷನಲ್ ಕಾನ್ಪರೆನ್ಸ್ ಪಕ್ಷವು ಈಗಾಗಲೇ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದೆ.
ಮಹತ್ತರ ರಾಜಕೀಯ ಬೆಳವಣಿಗೆ: ಗುರುವಾರ ನಡೆದ ಮಹತ್ತರ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷಕ್ಕೆ 4 ಪಕ್ಷೇತರ ಶಾಸಕರು ಬೆಂಬಲ ಘೋಷಣೆ ಮಾಡಿದ್ದಾರೆ. ಆದ್ದರಿಂದ ಒಮರ್ ಅಬ್ದುಲ್ಲಾ ನೇತೃತ್ವದ ಪಕ್ಷವು ಕಾಂಗ್ರೆಸ್ ಬೆಂಬಲವಿಲ್ಲದೇ ಸರಳ ಬಹುಮತವನ್ನು ಪಡೆದುಕೊಂಡಿದೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗವರ್ನರ್ ಐವರು ಶಾಸಕರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶವಿದೆ. ಆದರೆ ಈ ಶಾಸಕರ ಬೆಂಬಲವಿಲ್ಲದೇ, ಕಾಂಗ್ರೆಸ್ ಬೆಂಬಲವೂ ಇಲ್ಲದೇ ನ್ಯಾಷನಲ್ ಕಾನ್ಪರೆನ್ಸ್ ಪಕ್ಷ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆದಿದೆ.
ಒಮರ್ ಅಬ್ದುಲ್ಲಾ ಈಗಾಗಲೇ ಮುಖ್ಯಮಂತ್ರಿಯಾಗಲು ತಯಾರಿ ನಡೆಸಿದ್ದಾರೆ. ಈಗ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಯ ಕಥೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಚುನಾವಣೆಗೂ ಮೊದಲು ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಅಥವ ಚುನಾವಣೆ ನಂತರ ಬೆಂಬಲ ಕೊಟ್ಟ ಪಕ್ಷೇತರರು ಯಾರಿಗೆ ಪಕ್ಷ ಆದ್ಯತೆ ನೀಡಲಿದೆ? ಎಂಬುದು ಪ್ರಶ್ನೆ.
ನ್ಯಾಷನಲ್ ಕಾನ್ಪರೆನ್ಸ್ ಪಕ್ಷಕ್ಕೆ ಈಗ ಕಾಂಗ್ರೆಸ್ ಪಕ್ಷವನ್ನು ಓಲೈಸುವ ಯಾವುದೇ ಅಗತ್ಯವಿಲ್ಲ. ಮುಖ್ಯಮಂತ್ರಿಯಾಗುವ ಒಮರ್ ಅಬ್ದುಲ್ಲಾ ಕಾಂಗ್ರೆಸ್ ಬೆಂಬಲವಿಲ್ಲದೇ ಪಕ್ಷೇತರರ ಬೆಂಬಲದಿಂದ ಸರ್ಕಾರವನ್ನು ರಚನೆ ಮಾಡಬಹುದು. ಆದರೆ ಮೈತ್ರಿ ಧರ್ಮವನ್ನು ಪಾಲಿಸುವುದಾದರೆ ಕಾಂಗ್ರೆಸ್ ಜೊತೆಯೇ ಸಾಗಬೇಕಾಗುತ್ತದೆ.
ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿ, ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ನಾಯಕರ ಜೊತೆ ಮೈತ್ರಿ ಮಾತುಕತೆ ನಡೆಸಿ, ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರು. 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದಲ್ಲಿ ರಚನೆಯಾದ 'ಇಂಡಿಯಾ' ಮೈತ್ರಿಕೂಟದಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಪಕ್ಷವೂ ಇತ್ತು.
ಮೈತ್ರಿಕೂಟದ ಸೀಟು ಹಂಚಿಕೆಯಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ಕ್ಕೆ ನ್ಯಾಷನಲ್ ಕಾನ್ಪರೆನ್ಸ್ 51, ಕಾಂಗ್ರೆಸ್ 32 ಸೀಟುಗಳಲ್ಲಿ ಕಣಕ್ಕಿಳಿದಿತ್ತು. ತಲಾ ಒಂದೊಂದು ಸೀಟನ್ನು ಸಿಪಿಐ(ಎಂ) ಮತ್ತು ಜೆಕೆಎನ್‌ಪಿಪಿ ಪಕ್ಷಕ್ಕೆ ಬಿಟ್ಟುಕೊಡಲಾಗಿತ್ತು.












Click it and Unblock the Notifications