ವಾರಣಾಸಿಯಲ್ಲಿ ನರೇಂದ್ರ ಮೋದಿಗೆ ಠೇವಣಿ ಸಿಗಲ್ಲ
ವಾರಣಾಸಿ, ಮೇ 9: ಪಕ್ಷದ ರೋಡ್ ಶೋಗೆ ಸಿಕ್ಕ ಅಭೂತಪೂರ್ವ ಜನಬೆಂಬಲದಿಂದ ಉಲ್ಲಸಿತರಾಗಿರುವ ಅರವಿಂದ್ ಕೇಜ್ರಿವಾಲ್, ವಾರಣಾಸಿಯಲ್ಲಿ ನರೇಂದ್ರ ಮೋದಿಗೆ ಠೇವಣಿಯೂ ಸಿಗುವುದಿಲ್ಲ ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
ಆಮ್ ಆದ್ಮಿ ಪಕ್ಷ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಿದೆ. ಮೋದಿ ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲಲಿದ್ದು, ಠೇವಣಿ ಕಳೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. (ವಾರಣಾಸಿ: ಮೋದಿ ಸಮಾವೇಶಕ್ಕೆ ಬ್ರೇಕ್ )

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮತ್ತು ದೇವಾಲಯದ ನಗರಿ ವಾರಣಾಸಿಯಲ್ಲಿ ಪಕ್ಷದ ಅಭ್ಯರ್ಥಿಯೂ ಆಗಿರುವ ಮೋದಿ, ಬರೀ ಎರಡು ಗಂಟೆ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದಾರೆ.
ಒಂದು ವೇಳೆ ಅವರು ಇಲ್ಲಿಂದ ಆಯ್ಕೆಯಾದರೆ ವಾರಣಾಸಿಗಾಗಿ ಏನು ಮಾಡುತ್ತಾರೆಂದು ನೀವೇ ಊಹಿಸಿ ಕೊಳ್ಳಿ. ಮೋದಿಗೆ ಮತ ಚಲಾಯಿಸಿದರೆ ನಿಮ್ಮ ಮತ ವ್ಯರ್ಥವಾಗಲಿದೆ ಎಂದು ಕೇಜ್ರಿವಾಲ್ ಮತದಾರರನ್ನು ಕೇಳಿಕೊಂಡಿದ್ದಾರೆ.
ಗುರುವಾರ (ಮೇ 8) ಮೋದಿ ನಡೆಸಿದ ರೋಡ್ ಶೋ ನಂತರ, ಶುಕ್ರವಾರ (ಮೇ 10) ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ವಾರಣಾಸಿ ನಗರದಲ್ಲಿ ರೋಡ್ ಶೋ ನಡಿಸಿದರು. ಕೇಜ್ರಿವಾಲ್ ರೋಡ್ ಶೋಗೆ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ.
ಇಡೀ ದೇಶದ ಗಮನ ಸೆಳೆದಿರುವ ವಾರಣಾಸಿಯಲ್ಲಿ ಕೊನೆಯ ಹಂತದ ಚುನಾವಣೆಯ ದಿನವಾದ ಸೋಮವಾರ (ಮೇ 12) ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ನರೇಂದ್ರ ಮೋದಿ, ಕಾಂಗ್ರೆಸ್ಸಿನಿಂದ ಅಜಯ್ ರೈ ಮತ್ತು ಆಮ್ ಆದ್ಮಿ ಪಕ್ಷದಿಂದ ಆರವಿಂದ್ ಕೇಜ್ರಿವಾಲ್ ಕಣದಲ್ಲಿದ್ದಾರೆ.












Click it and Unblock the Notifications