ನನ್ನ ಪತಿಯನ್ನು ದೂಷಿಸಬೇಡಿ: ಪ್ರಿಯಾಂಕಾ ವಾದ್ರಾ
ರಾಯ್ ಬರೇಲಿ, ಏ.22: ಕಾಂಗ್ರೆಸ್ ಅಧ್ಯಕ್ಷೆ, ಪಕ್ಷದ ಅಭ್ಯರ್ಥಿ ಸೋನಿಯಾ ಗಾಂಧಿ ಪರ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪತಿ ರಾಬರ್ಟ್ ವಾದ್ರಾ ಮೇಲಿನ ಭ್ರಷ್ಟಾಚಾರದ ಆರೋಪಗಳ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಪತಿಯ ಮೇಲಿನ ಭ್ರಷ್ಟಾಚಾರವನ್ನು ಮೊದಲ ಬಾರಿಗೆ ಬಹಿರಂಗವಾಗಿ ಪ್ರಸ್ತಾಪಿಸಿದ ಪ್ರಿಯಾಂಕಾ, ನನ್ನ ಸಂಸಾರವನ್ನು ವಿನಾಕಾರಣ ಅವಮಾನಪಡಿಸಲಾಗುತ್ತಿದೆ. ನನ್ನ ಪತಿದೇವರ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಮಾಡಲಾಗಿದೆ. ಅವರು ನಮ್ಮನ್ನು ಹೆಚ್ಚು ಹೆಚ್ಚು ಅವಮಾನಪಡಿಸಿದಷ್ಟೂ ನಾವು ಹೆಚ್ಚು ಹೆಚ್ಚು ಸದೃಢರಾಗುತ್ತಿದ್ದೇವೆ' ಎಂದು ಪ್ರತಿಪಕ್ಷಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.
ಇಂತಹ ಆರೋಪಗಳಿಂದ ನನಗೆ ದುಃಖವಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಧೈರ್ಯದಿಂದಿರಲು ನಾನು ನನ್ನ ಅಜ್ಜಿಯಿಂದ ಕಲಿತಿದ್ದೇನೆ. ಸತ್ಯವೇ ನನಗೆ ಶ್ರೀರಕ್ಷೆ ನೀಡುತ್ತದೆ' ಎಂದು ಪ್ರಿಯಾಂಕಾ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿಯ ಹೆಸರನ್ನು ಪ್ರಸ್ತಾಪಿಸಿದರು.

45 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ರಾಬರ್ಟ್ ವಾದ್ರಾ ಅವರ ಆಸ್ತಿ ಪ್ರಮಾಣ ಶರವೇಗದಲ್ಲಿ ಏರುತ್ತಿದೆ. ಇಷ್ಟೊಂದು ಹಣ ಆತನಿಗೆ ಎಲ್ಲಿಂದ ಬಂತು? ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇತ್ತೀಚೆಗೆ ಚುನಾವಣಾ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರೀವಾಲ್ ಸಹ ಕಾನೂನು ಮುರಿದು ವಾದ್ರಾ ಹರ್ಯಾಣಾದಲ್ಲಿ ಭಾರಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಪ್ರಿಯಾಂಕಾಗೆ ಬಿಜೆಪಿ ಉಚಿತ ಸಲಹೆ:
ಖಂಡಿತಾ ಭಾರತೀಯ ನಾರಿ ಯಾರೇ ಆಗಲಿ ತಮ್ಮ ಪತಿಯ ವಿರುದ್ಧ ಕೆಟ್ಟದ್ದಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಆದರೆ ಆ ಪತಿರಾಯ ಅಕ್ರಮ ಮಾರ್ಗದಿಂದ ಹಣ ಸಂಪಾದಿಸಿರುವುದರ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಹಾಗಾಗಿ ಮೊದಲು ಅವರು ಆ ಹಣವನ್ನೆಲ್ಲಾ ಜನರಿಗೆ ಹಂಚಿಬಿಡಲಿ. ಆಗ ಅವರ ದುಃಖವೂ ಕೊನೆಗಾಣುತ್ತದೆ ಎಂದು ಬಿಜೆಪಿಯ ವಕ್ತಾರೆ ಮೀನಾಕ್ಷಿ ಲೇಖಿ ಅವರು ಪ್ರಿಯಾಂಕಾಗೆ ಉಚಿತ ಸಲಹೆ ನೀಡಿದ್ದಾರೆ.












Click it and Unblock the Notifications