ಮುಂಬೈ-ಹೈದರಾಬಾದ್ ಬುಲೆಟ್ ರೈಲಿಗೆ ಗ್ರೀನ್ ಸಿಗ್ನಲ್! ಕರ್ನಾಟಕದ ಕಲಬುರಗಿಯಲ್ಲಿ ನಿಲ್ದಾಣ
ಮುಂಬೈ-ಹೈದರಾಬಾದ್ ನಡುವಿನ ಬುಲೆಟ್ ರೈಲು ಯೋಜನೆಗೆ ಮಹತ್ವದ ಮುನ್ನಡೆ ಸಿಕ್ಕಿದ್ದು, ಈ ಮಾರ್ಗದ ವಿವರವಾದ ಯೋಜನಾ ವರದಿ (DPR) ಪೂರ್ಣಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಈ ಹೈ-ಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಕರ್ನಾಟಕಕ್ಕೂ ಪ್ರಮುಖ ಪಾತ್ರ ಸಿಕ್ಕಿದೆ. ಒಟ್ಟು 671 ಕಿ.ಮೀ ಉದ್ದದ ಮಾರ್ಗದಲ್ಲಿ ಸುಮಾರು 121 ಕಿ.ಮೀ ಭಾಗ ಕರ್ನಾಟಕದ ಮೂಲಕ ಹಾದು ಹೋಗಲಿದ್ದು, ಕಲಬುರಗಿ ಜಿಲ್ಲೆಯಲ್ಲಿ ಒಂದು ಪ್ರಮುಖ ನಿಲ್ದಾಣವನ್ನು ನಿರ್ಮಿಸಲು ಯೋಜಿಸಲಾಗಿದೆ. ಈ ಯೋಜನೆ ಜಾರಿಯಾದರೆ ಹೈದರಾಬಾದ್ ಕರ್ನಾಟಕದ ಪ್ರಯಾಣಿಕರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಪ್ರಸ್ತಾವಿತ ಹೈದರಾಬಾದ್-ಪುಣೆ-ಮುಂಬೈ ಬುಲೆಟ್ ರೈಲು ಮಾರ್ಗದಲ್ಲಿ ರೈಲುಗಳು ಗಂಟೆಗೆ ಸುಮಾರು 300 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಇದರಿಂದ ಮುಂಬೈಯಿಂದ ಹೈದರಾಬಾದ್‌ಗೆ ಕೇವಲ 2 ಗಂಟೆ 55 ನಿಮಿಷಗಳಲ್ಲಿ ತಲುಪಬಹುದು ಎಂದು ಅಂದಾಜಿಸಲಾಗಿದೆ. ಕೆಲವು ಹೆಚ್ಚುವರಿ ನಿಲ್ದಾಣಗಳಲ್ಲಿ ನಿಲ್ಲುವುದರಿಂದ, ಪ್ರಯಾಣಕ್ಕೆ ಸುಮಾರು 3 ಗಂಟೆ 13 ನಿಮಿಷ ಬೇಕಾಗಬಹುದು.

ಪ್ರಸ್ತುತ ಇದೇ ಮಾರ್ಗದಲ್ಲಿ ರೈಲು ಪ್ರಯಾಣಕ್ಕೆ ಸುಮಾರು 15 ಗಂಟೆಗಳು ಮತ್ತು ರಸ್ತೆ ಮಾರ್ಗದಲ್ಲಿ ಸುಮಾರು 12 ಗಂಟೆಗಳ ಸಮಯ ಬೇಕಾಗುತ್ತದೆ. ಬುಲೆಟ್ ರೈಲು ಯೋಜನೆ ಕಾರ್ಯರೂಪಕ್ಕೆ ಬಂದರೆ ಪ್ರಯಾಣದ ಸಮಯ ತುಂಬಾ ಇಳಿಕೆ ಆಗಲಿದೆ.
ಒಟ್ಟು 671 ಕಿ.ಮೀ ಉದ್ದದ ಈ ಕಾರಿಡಾರ್‌ನಲ್ಲಿ ಸುಮಾರು 93 ಕಿ.ಮೀ ಭಾಗ ತೆಲಂಗಾಣ, 121 ಕಿ.ಮೀ ಭಾಗ ಕರ್ನಾಟಕ ಹಾಗೂ 457 ಕಿ.ಮೀ ಭಾಗ ಮಹಾರಾಷ್ಟ್ರದಲ್ಲಿ ಹಾದು ಹೋಗಲಿದೆ. ಹೀಗಾಗಿ ಮಹಾರಾಷ್ಟ್ರ ಈ ಯೋಜನೆಯಲ್ಲಿ ಅತಿ ದೊಡ್ಡ ಪಾಲು ಹೊಂದಿರುವ ರಾಜ್ಯವಾಗಿದೆ.
ಕರ್ನಾಟಕದಲ್ಲಿ ಕಲಬುರಗಿ ಪ್ರಮುಖ ನಿಲ್ದಾಣವಾಗಿರಲಿದೆ
ಮಹಾರಾಷ್ಟ್ರದಲ್ಲಿ ವಿಖ್ರೋಲಿ, ಥಾಣೆ, ನವಿ ಮುಂಬೈ, ಲೊನಾವಾಲಾ, ಪಿಂಪ್ರಿ-ಚಿಂಚ್ವಾಡ್, ಪುಣೆ, ಬಾರಾಮತಿ, ಪಂಡರಪುರ ಹಾಗೂ ಸೊಲ್ಲಾಪುರ ಸೇರಿದಂತೆ ಹಲವು ನಿಲ್ದಾಣಗಳು ಇರಲಿವೆ.
ಯಾವೆಲ್ಲ ನಿಲ್ದಾಣಗಳು?
ತೆಲಂಗಾಣದಲ್ಲಿ ಪಶ್ಚಿಮ ಭಾಗದಲ್ಲಿರುವ ಕೊಕಾಪೇಟ್, ವಿಕಾರಾಬಾದ್ ಹಾಗೂ ಶಂಶಾಬಾದ್‌ನಲ್ಲಿ ನಿಲ್ದಾಣಗಳಿರಲಿವೆ. ಶಂಶಾಬಾದ್ ಸಮೀಪದಲ್ಲೇ ನಿರ್ವಹಣಾ ಡಿಪೋ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಇಂಜಿನಿಯರಿಂಗ್ ಸವಾಲು
ಈ ಯೋಜನೆಯ ಅತ್ಯಂತ ಸಂಕೀರ್ಣ ಭಾಗ ಮಹಾರಾಷ್ಟ್ರದ ಖಂಡಾಲಾ ಘಾಟ್ ಪ್ರದೇಶವಾಗಿದೆ. ಇಲ್ಲಿ 13 ಸ್ಥಳಗಳಲ್ಲಿ ಒಟ್ಟು 24 ಕಿ.ಮೀ ಉದ್ದದ ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ. ಇದರ ಜೊತೆಗೆ 35.30 ಕಿ.ಮೀ ಉದ್ದದ ಭೂಗತ ಮಾರ್ಗವನ್ನೂ ರೂಪಿಸಲಾಗಿದೆ.
ಇಂಜಿನಿಯರಿಂಗ್ ಸವಾಲು
ಈ ಯೋಜನೆಯ ಅತ್ಯಂತ ಸಂಕೀರ್ಣ ಭಾಗ ಮಹಾರಾಷ್ಟ್ರದ ಖಂಡಾಲಾ ಘಾಟ್ ಪ್ರದೇಶವಾಗಿದೆ. ಇಲ್ಲಿ 13 ಸ್ಥಳಗಳಲ್ಲಿ ಒಟ್ಟು 24 ಕಿ.ಮೀ ಉದ್ದದ ಸುರಂಗಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ. ಇದರ ಜೊತೆಗೆ 35.30 ಕಿ.ಮೀ ಉದ್ದದ ಸುರಂಗದ ಮೂಲಕ ಸಾಗುವ ದಾರಿಯನ್ನು ರೂಪಿಸಲಾಗಿದೆ.
ವಿಮಾನ ನಿಲ್ದಾಣ ಮಾದರಿಯ ನಿಲ್ದಾಣಗಳು
ಪ್ರತಿ ನಿಲ್ದಾಣ ಸಂಕೀರ್ಣಕ್ಕೆ ಸುಮಾರು 247 ಎಕರೆ ಜಾಗ ಅಗತ್ಯವಿದ್ದು, ಪ್ರಯಾಣಿಕರ ಸೌಲಭ್ಯ, ಪಾರ್ಕಿಂಗ್ ಹಾಗೂ ಬಹುಮಟ್ಟದ ಸಾರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ನಿಲ್ದಾಣಗಳನ್ನು ಸಾಮಾನ್ಯ ರೈಲು ನಿಲ್ದಾಣಗಳ ಬದಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶವಿದೆ.
ರೈಲಿನ ಸಾಮರ್ಥ್ಯ
ಪ್ರತಿ ಬುಲೆಟ್ ರೈಲು 16 ಬೋಗಿಗಳನ್ನು ಹೊಂದಿದ್ದು, ಸುಮಾರು 1,215 ಪ್ರಯಾಣಿಕರು ಪ್ರಯಾಣಿಸಬಹುದು. ಆರಂಭಿಕ ಹಂತದಲ್ಲೇ ದಿನಕ್ಕೆ 63,000ಕ್ಕೂ ಹೆಚ್ಚು ಪ್ರಯಾಣಿಕರು ಈ ಸೇವೆಯನ್ನು ಬಳಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಬಜೆಟ್ 2026-27ರಲ್ಲಿ ಈ ಯೋಜನೆಯನ್ನು ಘೋಷಿಸಲಾಗಿದ್ದು, ಇದೀಗ ಡಿಪಿಆರ್ ಪೂರ್ಣಗೊಂಡಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ಮುಂದಿನ ಪ್ರಮುಖ ಹಂತವಾಗಿದೆ. ಯೋಜನೆಗೆ ಅಗತ್ಯ ಭೂಮಿಯನ್ನು ಒದಗಿಸಲು ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮವು ತೆಲಂಗಾಣ ಸರ್ಕಾರದ ಸಹಕಾರ ಕೋರಿದೆ. ಭೂಸ್ವಾಧೀನ ಪೂರ್ಣಗೊಂಡ ಬಳಿಕ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ.














Click it and Unblock the Notifications