Mumbai Rain: ಮುಂಬೈ ಭಾರಿ ಮಳೆಗೆ ನಾಲ್ಕು ಮಂದಿ ಸಾವು; ರೆಡ್ ಅಲರ್ಟ್ ಘೋಷಿಸಿದ ಐಎಂಡಿ
ಬುಧವಾರ ರಾತ್ರಿಯಿಂದ ಸುರಿದ ಮಳೆಗೆ ಮಹಾನಗರಿ ಮುಂಬೈ ತತ್ತರಿಸಿದೆ. ಮಳೆಗೆ ಸಂಬಂಧಿಸಿದ ವಿವಿಧ ಪ್ರತ್ಯೇಕ ಘಟನೆಗಳಲ್ಲಿ ಈವರೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬುಧವಾರ ರಾತ್ರಿ ಹಲವು ವಿಮಾನಗಳ ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿತ್ತು.
ಈಗಾಗಲೇ ಭಾರಿ ಮಳೆಯಿಂದ ತತ್ತರಿಸಿರುವ ಮುಂಬೈಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಳೆ ಮತ್ತಷ್ಟು ತೀವ್ರಗೊಳ್ಳುವ ಎಚ್ಚರಿಕೆ ಕೊಟ್ಟಿದೆ. ಬುಧವಾರ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದ ಐಎಂಡಿ ಬಳಿಕ ಅದನ್ನು ರೆಡ್ ಅಲರ್ಟ್‌ಗೆ ಬದಲಾವಣೆ ಮಾಡಿತ್ತು. ಗುರುವಾರ ಕೂಡ ಮಹಾನಗರದಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದ ಕಾರಣ ಜನ ಪರದಾಡುಂತಾಯಿತು. ಅಂಧೇರಿ ರೈಲು ನಿಲ್ದಾಣ ಮತ್ತು ಕುರ್ಲಾ ನಿಲ್ದಾಣದಲ್ಲಿ ಹಳಿಗಳು ಹಳಿಗಳು ಜಲಾವೃತಗೊಂಡ ಕಾರಣ, ಲೋಕಲ್ ರೈಲು ಸೇವೆ ಕೂಡ ರದ್ದಾಗಿದ್ದು ನಗರದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರ ಹದಗೆಟ್ಟಿತ್ತು.
ಹವಾಮಾನ ಇಲಾಖೆ ಎಚ್ಚರಿಕೆ
ಮುಂದಿನ 48 ಗಂಟೆಗಳ ಕಾಲ ಮುಂಬೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದ್ದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಭಾರಿ ಮಳೆಯ ಜೊತೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸುವಂತೆ ಸೂಚನೆ ಕೊಟ್ಟಿದೆ.
ಎಲ್ಲೆಲ್ಲಿ ಎಷ್ಟು ಮಳೆ?
ಬುಧವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯ ನಡುವೆ ಮುಂಬೈ ಪೂರ್ವ ಉಪನಗರ ಭಾಗದಲ್ಲಿ 169.85 ಮಿ.ಮೀ. ಮಳೆಯಾಗಿದೆ. ಪಶ್ಚಿಮ ಉಪನಗರ ಭಾಗದಲ್ಲಿ ಇದೇ ವೇಳೆಯಲ್ಲಿ 104.17 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳು ತಿಳಿಸಿವೆ. ಮನ್‌ಖುರ್ದ್ ಪ್ರದೇಶದಲ್ಲಿ 276 ಮಿ.ಮೀ ಮಳೆಯಾಗಿದ್ದು, ಭಂದೂಪ್‌ನಲ್ಲಿ 275 ಮಿ.ಮೀ ಮತ್ತು ಪೊವೈ ಪ್ರದೇಶದಲ್ಲಿ 274 ಮಿ.ಮೀ ಮಳೆಯಾಗಿದೆ.
ಕರ್ನಾಟದಲ್ಲೂ ಮಳೆ
ಮಹಾರಾಷ್ಟ್ರ ಮಾತ್ರವಲ್ಲದ ಕರ್ನಾಟಕದ ಹಲವು ಭಾಗಗಳಲ್ಲಿ ಕೂಡ ಬುಧವಾರ ಭಾರಿ ಮಳೆಯಾಗಿದೆ. ಕಲಬುರಗಿ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಸೇಡಂನ ಅಡಕಿ ಎನ್ನುವಲ್ಲಿ 94 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ. ಗುರುವಾರ ಕೂಡ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವು ಮುನ್ಸೂಚನೆ ಇದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications