SSLC: ಮಗನಿಗೆ 55% ಅಂಕ, ವಿಶೇಷ ಕೇಕ್ ಕತ್ತರಿಸಿದ ಸಂಭ್ರಮಿಸಿದ ಕುಟುಂಬ; ನೆಟ್ಟಿಗರಿಂದ ಭಾರೀ ಮೆಚ್ಚುಗೆ
ಪರೀಕ್ಷೆ ಫಲಿತಾಂಶ ಎಂದಾಕ್ಷಣ ಮಕ್ಕಳಲ್ಲಿ ಮಾತ್ರವಲ್ಲದೇ ಪೋಷಕರಲ್ಲೂ ಒಂದು ರೀತಿಯ ಒತ್ತಡ ಕಾಣಿಸುತ್ತದೆ. ಕಡಿಮೆ ಅಂಕ ಬಂತೆಂದು ಹೆಚ್ಚು ಅಂಕ ಪಡೆದವರೊಂದಿಗೆ ಹೋಲಿಸಿ ಕೆಲವು ಪೋಷಕರು ಮಕ್ಕಳನ್ನು ಬೈಯುತ್ತಾರೆ. ಆದರೆ ಇಲ್ಲೊಂದು ಕುಟುಂಬ ತಮ್ಮ ಮಗ ಶೇಕಡಾ 55 ರಷ್ಟು ಅಂಕಗಳನ್ನು ಗಳಿಸಿದ್ದಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಸಾಕಷ್ಟು ಮೆಚ್ಚುಗೆಯನ್ನು ಸಹ ಪಡೆಯುತ್ತಿದೆ.
55% ಅಂಕ ಪಟ್ಟಿ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಕೇಕ್ ಅನ್ನು ಮಗನಿಂದ ಕಟ್ ಮಾಡಿಸಿದ ಮುಂಬೈ ಕುಟುಂಬವೊಂದು ಫಲಿತಾಂಶವನ್ನು ವಿಶೇಷವಾಗಿ ಆಚರಿಸಿದೆ. ಶೇಕಡಾ 55 ರಷ್ಟು ಅಂಕ ಗಳಿಸಿದ್ದು ಕಂಡು ಇಡಿ ಕುಟುಂಬವೇ ಸಂಭ್ರಮಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಸಾಕಷ್ಟು ಹೃದಯಗಳನ್ನು ಗೆದ್ದಿದೆ. ಮನೆಯಲ್ಲಿ ಸಂತೋಷ ಕಾಣಲು ಯಾವಾಗಲೂ "ಟಾಪರ್" ಆಗಿರಬೇಕೆಂದಿಲ್ಲ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

ಕುಟುಂಬದ ಪ್ರಯತ್ನ, ಬೆಂಬಲ ಮುಖ್ಯ: ಬಳಕೆದಾರರಿಂದ ಮೆಚ್ಚುಗೆ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಲಕ ಕೇಕ್ ಕತ್ತರಿಸುವ, ಅವರ ಕುಟುಂಬಸ್ಥರೆಲ್ಲ ಸಂಭ್ರಮಿಸುವ ಆರೋಗ್ಯಕರ ಕ್ಷಣ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಬಾಲಕ ಗಳಿಸಿರುವ ಅಂಕಗಳಿಗಿಂತ ಕುಟುಂಬವು ಮಾಡಿದ ಪ್ರಯತ್ನ, ಬೆಂಬಲ, ಹುರಿದುಂಬಿಸಲು ಆಯ್ಕೆ ಮಾಡಿಕೊಂಡ ದಾರಿಯನ್ನು ಶ್ಲಾಘಿಸಿದ್ದಾರೆ.
ಕುಟುಂಬಸ್ಥರ ಸಂತಸದ ಕ್ಷಣ ವೈರಲ್
ಸಾಮಾನ್ಯವಾಗಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದಾಗ, ಅತ್ಯಧಿಕ ಶ್ರೇಣಿಯಲ್ಲಿ ಉತ್ತೀರ್ಣವಾದಾಗ ಈ ರೀತಿ ಸಂಭ್ರಮ ಕಂಡು ಬರುವುದು ಸಹಜ. ಆದರೆ ಇಲ್ಲಿ ಶೇ.55ಗಳಿಸಿದ್ದಕ್ಕೆ ಈ ರೀತಿ ಆಚರಣೆ ಮಾಡುತ್ತಿರುವುದನ್ನು ನೆಟ್ಟಿಗರು ಕಣ್ಣರಳಿಸಿ ನೋಡಿದ್ದಾರೆ. ಮಕ್ಕಳು ಕಡಿಮೆ ಫಲಿತಾಂಶ ತೆಗೆದರೆಂದು ಇತರರಿಗೆ ಹೋಲಿಕೆ ಮಾಡಿ ಪೋಷಕರು ನಿರಾಶೆಗೊಳ್ಳುವುದು ಹೆಚ್ಚು. ಆದರೆ ಇಲ್ಲಿ ಮಗನ ಮೇಲೆ ಕಾಳಜಿ ತೋರಿಸುತ್ತಿದ್ದಾರೆ. ಮಗನ ಫಲಿತಾಂಶ ಕಂಡು ಮನೆ ಮಂದಿಯಲ್ಲಿ ಸಂತಷ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ವಿಡಿಯೋ ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಎಕ್ಸ್‌ನಲ್ಲಿ ಸೇರಿ ಪ್ರಮುಖ ವೇದಿಕೆಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಮಕ್ಕಳು, ಪೋಷಕರ ಮೇಲೆ ಫಲಿತಾಂಶದ ಒತ್ತಡ
ಭಾರತದಲ್ಲಿ ಪರೀಕ್ಷಾ ಫಲಿತಾಂಶದ ಏಪ್ರಿಲ್, ಮೇ ಋತುವಿನಲ್ಲಿ ವಿದ್ಯಾರ್ಥಿಗಳ ಮೇಲೆ ಸಾಮಾನ್ಯವಾಗಿ ಶೈಕ್ಷಣಿಕ ಒತ್ತಡ ಹೆಚ್ಚಿರುತ್ತದೆ. ಇದೆಲ್ಲ ದಾಟಿ ಮಗ ತೇರ್ಗಡೆ ಆಗಿರುವುದಕ್ಕೆ ಈ ಕುಟುಂಬವು ಆಚರಣೆ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪರಿಪೂರ್ಣತೆಗಿಂತ ಭಾವನಾತ್ಮಕ ಬೆಂಬಲ ಮತ್ತು ಪ್ರೋತ್ಸಾಹ ಮುಖ್ಯವೆಂದು ತೋರಿಸಿಕೊಟ್ಟಿದೆ. ಎಲ್ಲ ಮನೆಗಳಲ್ಲಿ ಇಂತಹ ವಾತಾವರಣ ಮುಖ್ಯವೆಂದು ನೆಟ್ಟಿಗರು ಅಭಿಪ್ರಾಯ ಹೊರ ಹಾಕಿದ್ದಾರೆ.
ಭಾರತದಂತಹ ದೇಶಗಳಲ್ಲಿ ಪರೀಕ್ಷಾ ಫಲಿತಾಂಶ, ಒತ್ತಡವು ದೊಡ್ಡ ಸಮಸ್ಯೆ ಎನ್ನಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಬೋರ್ಡ್ ಪರೀಕ್ಷೆ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶಗಳು ವಿದ್ಯಾರ್ಥಿಗಳನ್ನು, ಮತ್ತವರ ಕುಟುಂಬಸ್ಥರನ್ನು ಹೆಚ್ಚು ಭಾವನಾತ್ಮಕವಾಗಿಸಿಬಿಡುತ್ತದೆ. ಅತ್ಯಧಿಕ ಅಂಕ ಪಡೆಯುವು ಒತ್ತಡ, ಸಂಬಂಧಿಕರ ಮುಂದಿನ ಹೋಲಿಕೆ, ಸಹಪಾಠಿಗರ ಅಂಕಗಳ ಜೊತೆ ಹೋಲಿಕೆ, ಪೋಷಕರ ಹತಾಶೆ, ನಿರಾಸೆಗೊಳಿಸುವ ಭಯ, ಭವಿಷ್ಯದ ಕುರಿತು ಚಿಂತನೆ, ನಿರೀಕ್ಷೆಗಳು ಹೀಗೆ ಎಲ್ಲ ವಿಷಯಗಳ ತಲೆಯಲ್ಲಿ ಕೊರೆಯುತ್ತಿರುತ್ತವೆ. ಆದರೆ ಈ ಕುಟುಂಬದಲ್ಲಿ ಅಂಥವುಗಳಿಗೆ ಅವಕಾಶ ಕೊಡದೇ ಮಗನ ಶ್ರಮವನ್ನು ಆಚರಿಸಿ ಖುಷಿಪಟ್ಟಿದ್ದಾರೆ.
ಪರೀಕ್ಷಾ ಫಲಿತಾಂಶಗಳೇ ನಮ್ಮ ಜೀವನ ನಿರ್ವಹಿಸುತ್ತದೆ ಎಂಬ ಮಾತನ್ನು ಕೆಲವರು ಬಲವಾಗಿ ನಂಬುತ್ತಾರೆ. ಅಂಕಗಳು ಬಾರದಿದ್ದರೂ ಜೀವನ ನಡೆಯುತ್ತದೆ ಎಂಬುದನ್ನು ಅನೇಕರು ತಿಳಿಸಿದರೂ ಇಂದಿನ ಕೆಲವು ಪೋಷಕರು, ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅಂಥವರ ಮಧ್ಯೆ ಮುಂಬೈ ಕುಟುಂಬವು ವಿಶೇಷವಾಗಿ ಕಾಣಿಸುತ್ತದೆ.
🚨A Mumbai family celebrates son's 55% class 10th exam results with marksheet-themed cake🙏 pic.twitter.com/J0dHUBg3y3
— Indian Infra Report (@Indianinfoguide) May 15, 2026














Click it and Unblock the Notifications