Vande Bharat Express; ಈ ಮಾರ್ಗದಲ್ಲಿ ಓಡಲಿದೆ 2ನೇ ರೈಲು
ಮುಂಬೈ, ಆಗಸ್ಟ್ 22: ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಿಭಾಗದ ಜನಪ್ರಿಯ ಮಾರ್ಗ ಮುಂಬೈ-ಅಹಮದಾಬಾದ್. ಈ ಮಾರ್ಗದಲ್ಲಿ ಒಂದು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಮತ್ತೊಂದು ರೈಲು ಓಡಿಸಲು ಈಗ ಚಿಂತನೆ ನಡೆಸಲಾಗುತ್ತಿದೆ.
2022ರ ಫೆಬ್ರವರಿಯಲ್ಲಿ ಮುಂಬೈ-ಗಾಂಧಿನಗರ ನಡುವೆ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಈ ರೈಲು ಸೇವೆ ಯಶಸ್ವಿಯಾಗಿದೆ. ಪ್ರಯಾಣಿಕರ ಬೇಡಿಕೆಯೂ ಇರುವ ಹಿನ್ನಲೆಯಲ್ಲಿ ಮತ್ತೊಂದು ವಂದೇ ಭಾರತ್ ರೈಲು ಓಡಿಸುವ ನಿರೀಕ್ಷೆ ಇದೆ.

ಇದು ಭಾರತದ ಅತ್ಯಂತ ಬ್ಯುಸಿ ಮಾರ್ಗ ಎಂದು ಹೆಸರು ಪಡೆದಿದೆ. ಈಗಿರುವ ಒಂದು ವಂದೇ ಭಾರತ್ ರೈಲಿಗೆ ಭಾರೀ ಬೇಡಿಕೆ ಇದೆ. ರಸ್ತೆ, ವಿಮಾನದಲ್ಲಿ ಸಂಚಾರ ನಡೆಸುವುದಕ್ಕಿಂತ ಹೆಚ್ಚು ಜನರು ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ. ಆದ್ದರಿಂದ 2ನೇ ವಂದೇ ಭಾರತ್ ರೈಲಿನ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಎಷ್ಟು ಪ್ರಯಾಣಿಕರ ಸಂಚಾರ; ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ರಾಜಧಾನಿ ಅಹಮದಾಬಾದ್ ನಡುವೆ ಪ್ರತಿದಿನ ಸುಮಾರು 3 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ 2ನೇ ವಂದೇ ಭಾರತ್ ರೈಲು ಓಡಿಸಿದರೆ ಜನರಿಗೂ ಅನುಕೂಲವಾಗಲಿದೆ, ರೈಲ್ವೆ ಇಲಾಖೆಗೆ ಆದಾಯವೂ ಸಹ ಬರಲಿದೆ.
ಪಶ್ಚಿಮ ರೈಲ್ವೆ ವಿಭಾಗ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ 2 ನೇ ವಂದೇ ಭಾರತ್ ರೈಲು ಓಡಿಸುವ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ. ಮೊದಲ ರೈಲಿನಂತೆಯೇ ಇದು ಸಹ ಗಂಟೆಗೆ ಸುಮಾರು 160 ಕಿ. ಮೀ. ವೇಗದಲ್ಲಿ ಓಡಲಿದ್ದು, 6 ಗಂಟೆಗಳಲ್ಲಿ ಉಭಯ ನಗರಗಳನ್ನು ಸಂಪರ್ಕಿಸಲಿದೆ.
ಎರಡನೇ ವಂದೇ ಭಾರತ್ ರೈಲಿನಲ್ಲಿ ಪ್ರಸ್ತುತ ಈ ಮಾದರಿ ರೈಲಿನಲ್ಲಿರುವ ಎಲ್ಲಾ ಸೌಲಭ್ಯಗಳು ಇರಲಿವೆ. ಮುಂಬೈ-ಅಹಮದಾಬಾದ್ ನಡುವಿನ ಕಾರಿಡಾರ್‌ಗೆ ಈ ರೈಲು ಪ್ರಮುಖ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಉಭಯ ನಗರಗಳ ಆರ್ಥಿಕತೆಗೆ ಸಹ ಕೊಡುಗೆ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಸದ್ಯ ಮುಂಬೈ-ಅಹಮದಾಬಾದ್ ನಡುವೆ 20901 ಮತ್ತು 20902 ಸಂಖ್ಯೆಯ ರೈಲು ಸಂಚಾರ ನಡೆಸುತ್ತಿದೆ. ಜಿ20 ಶೃಂಗಸಭೆಗೆ ಆಗಮಿಸಿರುವ ವಿದೇಶಿ ಗಣ್ಯರು ಮಂಗಳವಾರ ಗಾಂಧಿ ನಗರದಿಂದ ಮುಂಬೈಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚಾರ ನಡೆಸಿದರು.
ಮುಂಬೈ-ಗಾಂಧಿನಗರ ನಡುವಿನ ವಂದೇ ಭಾರತ್ ರೈಲು ಭಾರತದ 3ನೇ ವಂದೇ ಭಾರತ್ ರೈಲು ಆಗಿತ್ತು. ಈಗ ಇದೇ ಮಾರ್ಗದಲ್ಲಿ ಮತ್ತೊಂದು ರೈಲು ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಸದ್ಯ ರೈಲು ಮುಂಬೈ ಸೆಂಟ್ರಲ್‌ನಿಂದ ಬೆಳಗ್ಗೆ 6.10ಕ್ಕೆ ಹೊರಟು, ಮಧ್ಯಾಹ್ನ 12.30ಕ್ಕೆ ಗಾಂಧಿನಗರ ತಲುಪಲಿದೆ. ಗಾಂಧಿನಗರದಿಂದ ಮಧ್ಯಾಹ್ನ 2.05ಕ್ಕೆ ಹೊರಟು, ರಾತ್ರಿ 8.35ಕ್ಕೆ ಮುಂಬೈಗೆ ವಾಪಸ್ ಆಗಲಿದೆ.
ಈ ಮಾರ್ಗದಲ್ಲಿ ಎಕ್ಸಿಕ್ಯುಟಿವ್ ಚೇರ್ ಕಾರ್ ಬೆಲೆ 2,505 ರೂ.ಗಳು. ಚೇರ್ ಕಾರ್ ಬೆಲೆ 1,385 ರೂ.ಗಳು. ಈಗ ಇದೇ ಮಾರ್ಗದಲ್ಲಿ ಮತ್ತೊಂದು ರೈಲು ಓಡಿಸುವ ಪ್ರಸ್ತಾವನೆ ಸಿದ್ಧವಾಗುತ್ತಿದೆ. ಆದರೆ ದರ, ವೇಳಾಪಟ್ಟಿ ಇನ್ನೂ ಅಂತಿಮಗೊಳ್ಳಬೇಕಿದೆ.
ಪ್ರಸ್ತುತ ದೇಶದ ಯಾವುದೇ ಮಾರ್ಗದಲ್ಲಿಯೂ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿಲ್ಲ. 25ಕ್ಕೂ ಹೆಚ್ಚು ರೈಲುಗಳು ದೇಶದಲ್ಲಿ ಓಡುತ್ತಿದ್ದು, ಮೊದಲ ಬಾರಿಗೆ ಒಂದೇ ಮಾರ್ಗದಲ್ಲಿ ಎರಡು ರೈಲುಗಳನ್ನು ಓಡಿಸಲು ಇಲಾಖೆ ಮುಂದಾಗಿದೆ.












Click it and Unblock the Notifications