ಈ ಬಾರಿಯ ಮುಂಗಾರಿಗೂ ಎಲ್‌ನಿನೋ ಕಾಟ
ನವದೆಹಲಿ, ಏ. 23 : ಈ ಬಾರಿಯ ಮುಂಗಾರಿಗೂ 'ಎಲ್ ನಿನೊ' ಚಂಡಮಾರುತ ಅಡ್ಡಗಾಲು ಹಾಕಲಿದ್ದು ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ವಾಯುವ್ಯ ಮತ್ತು ಮಧ್ಯ ಭಾಗಗಳಲ್ಲಿ ಮಳೆ ಕಡಿಮೆಯಾಗಲಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಭೂ ವಿಜ್ಞಾನ ಸಚಿವ ಹರ್ಷವರ್ಧನ್ ಅವರು ಈ ಬಾರಿಯ ಮುಂಗಾರಿನ ಕುರಿತು ಮಾಹಿತಿ ನೀಡಿದರು. ಮುಂಗಾರು ಮುನ್ಸೂಚನೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ವಾಡಿಕೆಯ ಶೇಕಡ 93ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ವಾಡಿಕೆಯ ಶೇಕಡ 88ರಷ್ಟು ಮಳೆಯಾಗಿತ್ತು ಎಂದರು. ಮಳೆ ಕೊರತೆ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ ಸಚಿವರು, ಸಂಭಾವ್ಯ ಬರಗಾಲ ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಭರವಸೆ ನೀಡಿದರು. [ಮಾನ್ಸೂನ್ ಮೇಲೆ 'ಎಲ್ ನಿನೋ' ಕರಾಳ ಛಾಯೆ]
ಈ ಬಾರಿಯು ಮುಂಗಾರಿಗೆ 'ಎಲ್ ನಿನೊ' ಚಂಡಮಾರುತ ಅಡ್ಡಬರುವ ಸಾಧ್ಯತೆ ಇದೆ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನೈಋತ್ಯ ಮಾರುತಗಳು ದುರ್ಬಲವಾಗುವ ಸಾಧ್ಯತೆಗಳಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಎಂದು ವಿವರಿಸಿದರು. [ಬೆಂಗಳೂರು ನಗರದಲ್ಲಿ ಮಳೆ ನಿಂತ ಮೇಲೆ]
ಎಲ್ ನಿನೊ ಚಂಡಮಾರುತದಿಂದಾಗಿ ಕಳೆದ 14 ವರ್ಷಗಳಲ್ಲಿ ಎಂಟು ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಾಮಾನ್ಯ ಮುಂಗಾರಿಗಿಂತಲೂ ಕಡಿಮೆ ಮಳೆ ಬೀಳುವ ಸಾಧ್ಯತೆ ಶೇ.35 ರಷ್ಟಿದೆ. ಸಾಮಾನ್ಯ ಮುಂಗಾರಿನ ಸಾಧ್ಯತೆ ಶೇ.28 ರಷ್ಟಿದೆ ಎಂದು ಮಾಹಿತಿ ನೀಡಿದರು.
ಏನಿದು ಎಲ್ ನಿನೋ : ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಲಕ್ಷ್ಮಣ್ ರಾಥೋಡ್ ಅವರು ಎಲ್ ನಿನೋ ಬಗ್ಗೆ ಮಾಹಿತಿ ನೀಡಿದ್ದು, ಪೆಸಿಫಿಕ್ ಸಾಗರದ ದಕ್ಷಿಣ ಅಮೆರಿಕದ ಕಡಲತೀರವೂ ಸೇರಿದಂತೆ ಸಾಗರದ ಮಧ್ಯ ಮತ್ತು ಪೂರ್ವ ಮಧ್ಯ ಭಾಗದಲ್ಲಿ ಬೀಸುವ ಚಂಡ ಮಾರುತ ವಾತಾವರಣ ಮತ್ತು ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. [ಪಿಟಿಐ ಚಿತ್ರ]












Click it and Unblock the Notifications