Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್
ಕುಂಭಮೇಳದ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ ಮತ್ತು ಆಕೆಯ ಪತಿ ಫರ್ಮಾನ್ ಖಾನ್ ಅವರಿಗೆ ಕೇರಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮಧ್ಯಪ್ರದೇಶದಲ್ಲಿ ದಾಖಲಾಗಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಮೇ 20ರವರೆಗೆ ಬಂಧಿಸದಂತೆ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠವು ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಈ ಜೋಡಿಯು ಮಲಯಾಳಂ ಸಿನಿಮಾವೊಂದರಲ್ಲಿ ನಟಿಸುವಾಗ ಪ್ರೀತಿಸಿ, ಕಳೆದ ಮಾರ್ಚ್ 11ರಂದು ಕೇರಳದಲ್ಲಿ ವಿವಾಹವಾಗಿದ್ದರು. ಆದರೆ, ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಿದ್ದಾರೆ ಎಂದು ಮೊನಾಲಿಸಾ ತಂದೆ ಮಧ್ಯಪ್ರದೇಶದಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ದಂಪತಿಗಳು ಈಗಾಗಲೇ ಪತಿ-ಪತ್ನಿಯಾಗಿ ವಾಸಿಸುತ್ತಿರುವುದನ್ನು ಗಮನಿಸಿ ಅವರಿಗೆ ಕಾನೂನು ರಕ್ಷಣೆ ನೀಡಿದೆ.

ದಾಖಲೆಗಳಲ್ಲಿ ಮೊನಾಲಿಸಾಗೆ 18 ವರ್ಷ ತುಂಬಿದೆ
ಇದೇ ವೇಳೆ ಕೇರಳ ಪೊಲೀಸರು ಡಿಜಿಪಿಗೆ ವರದಿ ಸಲ್ಲಿಸಿದ್ದು, ವಿವಾಹದ ಸಂದರ್ಭದಲ್ಲಿ ಯಾವುದೇ ಲೋಪಗಳಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯುವತಿ ಸಲ್ಲಿಸಿದ್ದ ಆಧಾರ್ ಕಾರ್ಡ್ ಅನ್ನು ಅಧಿಕೃತ ಪೋರ್ಟಲ್ ಮೂಲಕ ಪರಿಶೀಲಿಸಿದಾಗ ಆಕೆಗೆ 18 ವರ್ಷ ತುಂಬಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಅಪ್ರಾಪ್ತ ವಯಸ್ಕಳು ಎಂದು ಬಿಂಬಿಸಿ ಮಧ್ಯಪ್ರದೇಶ ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ಅರ್ಜಿಯೊಂದಿಗೆ ಮದುವೆಯ ಪ್ರಮಾಣಪತ್ರ ಮತ್ತು ಜನ್ಮ ದಾಖಲೆಗಳನ್ನು ಸಲ್ಲಿಸಿರುವ ಅವರು, ತಾವು ಸ್ವ ಇಚ್ಛೆಯಿಂದ ವಿವಾಹವಾಗಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸದ್ಯ ಹೈಕೋರ್ಟ್ ನೀಡಿರುವ ಈ ಆದೇಶದಿಂದಾಗಿ ವೈರಲ್ ಸುಂದರಿ ಮತ್ತು ಆಕೆಯ ಪತಿಗೆ ಮುಂದಿನ ಒಂದು ತಿಂಗಳ ಕಾಲ ಬಂಧನದ ಭೀತಿಯಿಂದ ಮುಕ್ತಿ ಸಿಕ್ಕಂತಾಗಿದೆ.
ಕುಟುಂಬದ ವಿರುದ್ಧ ಗಂಭೀರ ಆರೋಪ
ದಂಪತಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಒಂದು ಕುತೂಹಲಕಾರಿ ಅಂಶವನ್ನು ಉಲ್ಲೇಖಿಸಿದ್ದಾರೆ. ಆರಂಭದಲ್ಲಿ ಮೊನಾಲಿಸಾ ಅವರ ಕುಟುಂಬದವರು ಈ ವಿವಾಹಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಸಂಬಂಧಿಕರೊಬ್ಬರ ಪ್ರಭಾವಕ್ಕೆ ಒಳಗಾದ ಕುಟುಂಬಸ್ಥರು ತಮ್ಮ ನಿಲುವನ್ನು ಬದಲಿಸಿಕೊಂಡು, ಫರ್ಮಾನ್ ಖಾನ್ ವಿರುದ್ಧ ಅಪಹರಣದ ದೂರು ದಾಖಲಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಕೇವಲ ವೈಯಕ್ತಿಕ ದ್ವೇಷ ಮತ್ತು ಪ್ರಚೋದನೆಯಿಂದಾಗಿ ಈ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪ್ರಕರಣದ ವಿಚಾರಣೆ ವೇಳೆ ಮಧ್ಯಪ್ರದೇಶದ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಕಂಡುಬಂದಿದೆ ಎಂಬ ಆರೋಪವೂ ಕೇಳಿಬಂದಿದೆ. ಕೇರಳ ಹೈಕೋರ್ಟ್ ಈ ಮೊದಲೇ ಮಧ್ಯಪ್ರದೇಶದ ಡಿಜಿಪಿಗೆ ನೋಟಿಸ್ ಜಾರಿ ಮಾಡಿದ್ದರೂ, ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಏಪ್ರಿಲ್ 8ರಂದು ಪ್ರಕರಣವು ವಿಚಾರಣೆಗೆ ಬಂದಾಗಲೂ ಪೊಲೀಸರಿಂದ ಯಾವುದೇ ವಿವರಣೆ ಲಭ್ಯವಾಗಿಲ್ಲ ಎಂದು ಹಿರಿಯ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರ ಮೌನ ಮತ್ತು ದಂಪತಿ ಸುರಕ್ಷತೆಯನ್ನು ಪರಿಗಣಿಸಿದ ನ್ಯಾಯಾಲಯವು ಬಂಧನದ ಮೇಲಿನ ತಡೆಯಾಜ್ಞೆಯನ್ನು ಮೇ 20ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.












Click it and Unblock the Notifications