Modi Bomb: ರಾಜಸ್ಥಾನದಲ್ಲಿ ‘ಕಡಲೆ ಪುರಿ’ ರೀತಿ ಮಾರಾಟವಾಗುತ್ತಿವೆ ಮೋದಿ ಬಾಂಬ್!
ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಜಗತ್ತಿನಾದ್ಯಂತ ಒಂದು ಗತ್ತಿದೆ, ಅದರಲ್ಲೂ ವಿದೇಶದ ನಾಯಕರು ಕೂಡ ಪ್ರಧಾನಿ ಮೋದಿ ಅವರ ಬಗ್ಗೆ ಹೊಗಳಿದ್ದಾರೆ. ಭಾರತದಲ್ಲಿ ಹೀಗೆಯೇ ಮೋದಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಇದೇ ಅಭಿಮಾನಿ ಬಳಗವನ್ನೇ ಟಾರ್ಗೆಟ್ ಮಾಡಿ, ದೀಪಾವಳಿ ಹಬ್ಬಕ್ಕೆ 'ಮೋದಿ ಬಾಂಬ್' ರಿಲೀಸ್ ಮಾಡಿದ್ದಾರೆ ಪಟಾಕಿ ಮಾರಾಟಗಾರರು!
ದೀಪಾವಳಿ ಹಬ್ಬ ಬಂದ ತಕ್ಷಣ ಮೊದಲು ನೆನಪಾಗುವುದು ಪಟಾಕಿ, ಆದರೆ ಈ ಬಾರಿಯ ದೀಪಾವಳಿಗೆ ಪಟಾಕಿ ಬಳಕೆಗೆ ಕಡಿವಾಣ ಬಿದ್ದಿದೆ. ಆದರೂ ಚುನಾವಣೆ ಎದುರಿಸುತ್ತಿರುವ, ರಾಜಸ್ಥಾನ ರಾಜ್ಯದಲ್ಲಿ 'ಮೋದಿ ಬಾಂಬ್' ಮಾರಾಟ ಭರ್ಜರಿಯಾಗಿದೆ! ಪಟಾಕಿ ಮಾರುವ ಮಾರಾಟಗಾರರು ಹೊಸ ತಂತ್ರದ ಮೊರೆ ಹೋಗಿದ್ದು ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಇದೇ ಸಮಯದಲ್ಲಿ ಭಾರಿ ಚರ್ಚೆಗೂ ಕಾರಣವಾಗಿದೆ. ರಾಜಸ್ಥಾನದ ರಾಜಧಾನಿ ಜೈಪುರ ನಗರದ ತುಂಬಾ ಈ ರೀತಿ 'ಮೋದಿ ಬಾಂಬ್' ಪಟಾಕಿ ಮಾರಾಟ ಭರ್ಜರಿಯಾಗಿ ಸಾಗಿದೆ.

'ಮೋದಿ ಬಾಂಬ್' ಬೆಲೆ ಎಷ್ಟಿದೆ?
ರಾಜಸ್ಥಾನ ಕೂಡ ದೀಪಾವಳಿ ಹಬ್ಬದ ಆಚರಣೆಗೆ ದೊಡ್ಡ ಹೆಸರು ಮಾಡಿದೆ. ಸಾಂಸ್ಕೃತಿಕ ನಗರಿ ಜೈಪುರ ದೀಪಾವಳಿ ಹಬ್ಬಕ್ಕೆ ಫೇಮಸ್. ಹೀಗೆ ಜನ ಕೂಡ, ಸಾವಿರಾರು ರೂಪಾಯಿ ವೆಚ್ಚ ಮಾಡಿ ಪಟಾಕಿ ಖರೀದಿ ಮಾಡುತ್ತಾರೆ. ಇದೀಗ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಪಟಾಕಿ ಮಾರಾಟ ಆಗುತ್ತಿರುವುದು ಗಮನ ಸೆಳೆದಿದೆ. ಹಾಗೇ ಪಟಾಕಿಗಳನ್ನ ಕೊಳ್ಳುವುದಕ್ಕೆ ಬಂದ ಜನರು, ಹೆಚ್ಚಾಗಿ 'ಮೋದಿ ಬಾಂಬ್' ಕೇಳುತ್ತಿದ್ದಾರಂತೆ. ಇನ್ನು 'ಮೋದಿ ಬಾಂಬ್' ಬೆಲೆ ಕೂಡ ಭರ್ಜರಿಯಾಗಿದೆ. 'ನಮೋ ಬಾಂಬ್' ಎಂಬ ಹೆಸರಿನಲ್ಲೂ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಪ್ಯಾಕೆಟ್‌ಗೆ ಗುಣಮಟ್ಟದ ಆಧಾರದಲ್ಲಿ 150 ರಿಂದ 500 ರೂಪಾಯಿ ತನಕ ಮಾರಾಟ ಆಗುತ್ತಿದೆ ಈ ಪಟಾಕಿ.
ಪಟಾಕಿಯಲ್ಲಿ ಮಾಲಿನ್ಯ ಕೂಡ ಕಡಿಮೆ!
'ಮೋದಿ ಬಾಂಬ್' ಹಾಗೂ 'ನಮೋ ಬಾಂಬ್' ಪಟಾಕಿಗಳು ಬೇರೆ ಪಟಾಕಿಗಳಿಗೆ ಹೋಲಿಕೆ ಮಾಡಿದರೆ, ಮಾಲಿನ್ಯದಲ್ಲೂ ತುಂಬಾ ಉತ್ತಮ ಎನ್ನಲಾಗಿದೆ. ಅತ್ಯಂತ ಕಡಿಮೆ ಮಾಲಿನ್ಯ ಸೃಷ್ಟಿಸುವ ಅಂಶಗಳನ್ನು ಈ ಪಟಾಕಿಗಳು ಹೊಂದಿವೆ. ಹೀಗಾಗಿ ಈ ಪಟಾಕಿಗಳಿಗಾಗಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅಲ್ಲದೆ ಬೆಲೆ ಕೂಡ ಉತ್ತಮವಾಗಿದ್ದು, ವ್ಯಾಪಾರಿಗಳಿಗೆ ಇದರಿಂದ ಲಾಭವು ಹೆಚ್ಚಾಗಿದೆ ಎನ್ನಲಾಗಿದೆ. ಒಟ್ನಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಯ ವೇಳೆ ಈ ಪಟಾಕಿಗಳು ಸಖತ್ ಸದ್ದು ಮಾಡುತ್ತಿವೆ.
ಎಲ್ಲೆಲ್ಲೂ ಮೋದಿ ಫೋಟೋ ಮಿಂಚಿಂಗ್
ಲಾಭ ಎಲ್ಲಿ ಹೆಚ್ಚಾಗಿ ಸಿಗುತ್ತೋ, ಆ ವಸ್ತುಗಳನ್ನೇ ಮಾರಾಟ ಮಾಡುವುದು ವ್ಯಾಪಾರಿಗಳ ಗುಣ. ಇಲ್ಲೂ ಅದೇ ಆಗಿದ್ದು, 'ನಮೋ ಬಾಂಬ್' ಪಟಾಕಿಗೆ ಬೇಡಿಕೆ ಹೆಚ್ಚಾದ ಕಾರಣಕ್ಕೆ ವ್ಯಾಪಾರಿಗಳು ಕೂಡ ಈ ಪಟಾಕಿಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಹೀಗೆ ತಯಾರಕರು ಮತ್ತು ಮಾರಾಟಗಾರರು ಇಬ್ಬರಿಗೂ ದೀಪಾವಳಿ ಹಬ್ಬಕ್ಕೆ 'ನಮೋ ಬಾಂಬ್' ಪಟಾಕಿ ಬಂಪರ್ ಲಾಭ ನೀಡುತ್ತಿದೆ. ರಾಜಸ್ಥಾನ ರಾಜಧಾನಿ ಅಂಗಡಿಗಳ ಮುಂಭಾಗದಲ್ಲಿ ಇದೇ ಪಟಾಕಿಗಳು ಕಾಣಸಿಗುತ್ತಿವೆ.

ತೀವ್ರ ಕುತೂಹಲ ಕೆರಳಿಸಿರುವ, ರಾಜಸ್ಥಾನ ರಾಜ್ಯದ ಚುನಾವಣೆ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನವೆಂಬರ್ 25 ಕ್ಕೆ ರಾಜಸ್ಥಾನ ವಿಧಾನಸಭೆಗೆ ಮತದಾನವು ನಡೆಯಲಿದ್ದು, ಡಿಸೆಂಬರ್ 3 ರಂದು ರಿಸಲ್ಟ್ ಹೊರಬೀಳಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ ರೀತಿ ಬಿಜೆಪಿ ಈ ಚುನಾವಣೆಯಲ್ಲಿ ಮುಂದೆ ಇದೆ. ಮತ್ತೊಮ್ಮೆ ರಾಜಸ್ಥಾನ ರಾಜ್ಯ ಬಿಜೆಪಿ ತೆಕ್ಕೆಗೆ ಬೀಳುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಈಗ ಅಧಿಕಾರ ನಡೆಸುತ್ತಿರುವ 'ಕೈ' ಪಡೆ ಸೋಲುವ ಚಿಂತೆ ನಡುವೆ ತಂತ್ರಗಳನ್ನು ಹೆಣೆಯುತ್ತಿದೆ. ಇಷ್ಟೆಲ್ಲದರ ನಡುವೆ ಪ್ರಧಾನಿಯ ಹೆಸರಲ್ಲಿ ಪಟಾಕಿ ಮಾರಾಟ ಕೂಡ ಜೋರಾಗಿ ಸಾಗಿದೆ.












Click it and Unblock the Notifications