ರಾಹುಲ್ ಗಾಂಧಿ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂ. ಕೊಡ್ತೀನಿ, ಹೇಳಿದ್ಯಾರು
ರಾಹುಲ್ ಗಾಂಧಿ ಅವರು ಮೀಸಲಾತಿಯ ಬಗ್ಗೆ ನೀಡಿದ್ದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಹಾಗೂ ಕೇಂದ್ರ ಸಚಿವರು ರಾಹುಲ್ ಗಾಂಧಿ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾರೂ ಸಹ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ವೈಯಕ್ತಿಕ ದಾಳಿಯನ್ನಾಗಲಿ ಅಥವಾ ಪ್ರಚೋದನೆ ನೀಡುವಂತೆ ಮಾತನಾಡಿರಲಿಲ್ಲ. ಇದೀಗ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಿವಸೇನೆಯ ಪ್ರಮುಖ ಶಾಸಕರೊಬ್ಬರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ತೆಗೆಯುವ ಬಗ್ಗೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದೆ. ಇದು ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಅಸಹನೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಚುನಾವಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನೇ ಸೋಲಿಸಿತ್ತು. ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಯಾರಾದರೂ ಕತ್ತರಿಸುವವರಿಗೆ ನಾನು ಅವರಿಗೆ 11 ಲಕ್ಷ ರೂಪಾಯಿ ಕೊಡಲಿದ್ದೇನೆ ಎಂದು ಶಿವಸೇನೆಯ ಶಾಸಕ ತುಂಬಿದ ಸಭೆಯಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ನಡೆದಿದೆ. ಈಚೆಗೆ ಅಮೆರಿಕಾ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ್ದರು. ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ಖಂಡಿಸಿತ್ತು. ಇದೀಗ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಶಿವಸೇನೆಯ (ಏಕನಾಥ್ ಶಿಂಧೆ) ಬಣದ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಸೇನೆಯ ಸಂಜಯ್ ಗಾಯಕ್ವಾಡ್ ಎನ್ನುವ ಶಾಸಕ, ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸುವ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.
ಇನ್ನು ಮೀಸಲಾತಿಗಾಗಿ ಮಹಾರಾಷ್ಟ್ರದಲ್ಲಿ ಹಲವು ಪ್ರಮುಖ ಸಮುದಾಯಗಳು ಹೋರಾಟ ಮಾಡುತ್ತಿವೆ. ಈ ವಿಷಯವನ್ನೂ ಪ್ರಸ್ತಾಪಿಸಿರುವ ಶಾಸಕ, ಮಹಾರಾಷ್ಟ್ರದಲ್ಲಿ ಮರಾಠರು ಸೇರಿದಂತೆ ಹಲವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಹುಲ್‌ಗಾಂಧಿ ಅವರು ಮೀಸಲಾತಿ ತೆಗೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಂವಿಧಾನವನ್ನು ಬದಲಾಯಿಸಲಿದೆ ಎಂದು ಕಾಂಗ್ರೆಸ್ ದೂರಿತ್ತು. ಆ ಮೂಲಕ ಬಿಜೆಪಿಯ ಬಗ್ಗೆ ತಪ್ಪು ಭಾವನೆಯನ್ನು ಜನರಲ್ಲಿ ಮೂಡಿಸಲಾಗಿತ್ತು. ಆದರೆ, ಕಾಗ್ರೆಸ್ ದೇಶವನ್ನು 400 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲಿದೆ ಎಂದೂ ಅವರು ಹೇಳಿದ್ದಾರೆ.
ಇನ್ನು ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಅವರು ವಿವಾದಾತ್ಮಕ ಹೇಳಿಕೆಗಳನ್ನು ಈ ಹಿಂದೆಯೂ ನೀಡಿದ್ದರು. ಇವರ ವಿವಾದಾತ್ಮಕ ಹೇಳಿಕೆಯ ವಿಡಿಯೋಗಳು ವೈರಲ್ ಆಗಿರುವುದು ಇದೆ. ಇನ್ನು ಸೋಮವಾರ ರಾಹುಲ್ ಗಾಂಧಿ ಅವರ ಬಗ್ಗೆ ಸಂಜಯ್ ಅವರು ಮಾತನಾಡಿರುವ ವಿಡಿಯೋ ಸಹ ವೈರಲ್ ಆಗಿದೆ.
ಬಿಜೆಪಿಯಿಂದಲೂ ವಿರೋಧ
ಶಾಸಕನ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿ ಪ್ರಧಾನ ಪಕ್ಷವಾಗಿದ್ದರೆ, ಶಿವಸೇನೆಯ (ಏಕನಾಥ್ ಶಿಂಧೆ ಬಣ)ದ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಶಿವಸೇನೆಯ ಶಾಸಕನ ಹೇಳಿಕೆಯಿಂದ ಬಿಜೆಪಿ ಅಂತರ ಕಾಪಾಡಿಕೊಂಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಾಕ್ಷ ಚಂದ್ರಶೇಖರ ಬಾವಂಕುಲೆ ಅವರು ಶಾಸಕ ಸಂಜಯ್ ಅವರ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications