ಕಸದ ಪ್ಲಾಸ್ಟಿಕ್‌ನಿಂದ ಸಾವಿರಾರು ಕಿ.ಮೀ ರಸ್ತೆ! ಭಾರತದ ‘ಪ್ಲಾಸ್ಟಿಕ್ ಮ್ಯಾನ್’ ಅಚ್ಚರಿ ಸಾಧನೆ

ಇಂದು ಜಗತ್ತಿನ ದೊಡ್ಡ ಪರಿಸರ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯವೂ ಒಂದು. ನದಿಗಳು, ಸಮುದ್ರಗಳು, ರಸ್ತೆಗಳು, ಕಸದ ಗುಡ್ಡಗಳು - ಎಲ್ಲೆಲ್ಲೂ ಪ್ಲಾಸ್ಟಿಕ್ ಕಸ. ಹೆಚ್ಚಿನವರು ಪ್ಲಾಸ್ಟಿಕ್‌ನ್ನು ಪರಿಸರದ ಶತ್ರು ಎಂದು ನೋಡುತ್ತಾರೆ. ಆದರೆ ಒಬ್ಬ ಭಾರತೀಯ ವಿಜ್ಞಾನಿ ಮಾತ್ರ "ಸಮಸ್ಯೆ ಪ್ಲಾಸ್ಟಿಕ್ ಅಲ್ಲ, ಅದನ್ನು ನಾವು ಬಳಸುವ ಮತ್ತು ಎಸೆಯುವ ವಿಧಾನ" ಎಂದು ಹೇಳಿದರು. ಪ್ಲಾಸ್ಟಿಕ್‌ ಹೇಗೆ ಸಂಪತ್ತಾಗಬಹುದು ಎಂದು ತಮ್ಮ ಕ್ರಿಯೆಯಿಂದ ಸಾಬೀತುಪಡಿಸಿದರು.

ಅವರು ತಮಿಳುನಾಡಿನ ಮಧುರೈ ಮೂಲದ ರಸಾಯನಶಾಸ್ತ್ರ ಪ್ರಾಧ್ಯಾಪಕ ರಾಜಗೋಪಾಲನ್‌ ವಾಸುದೇವನ್‌. ಭಾರತದಾದ್ಯಂತ "ಪ್ಲಾಸ್ಟಿಕ್ ಮ್ಯಾನ್ ಆಫ್ ಇಂಡಿಯಾ" ಎಂದೇ ಪ್ರಸಿದ್ಧರಾಗಿರುವ ಅವರು, ಕಸದ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಿಸುವ ತಂತ್ರಜ್ಞಾನ ಕಂಡುಹಿಡಿದು ವಿಶ್ವದ ಗಮನ ಸೆಳೆದಿದ್ದಾರೆ.

Rajagopalan Vasudevan

ಆವಿಷ್ಕಾರ ಆದದ್ದು ಹೀಗೆ

2000ರ ದಶಕದ ಆರಂಭದಲ್ಲಿ ಭಾರತದಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಪ್ಲಾಸ್ಟಿಕ್‌ನಿಂದ ಪರಿಸರ ಹಾಳಾಗುತ್ತಿದೆ ಎಂಬ ಆತಂಕ ಎಲ್ಲೆಡೆ ಇತ್ತು. ಆದರೆ ರಾಜಗೋಪಾಲನ್ ವಾಸುದೇವನ್ ಅವರ ಅಭಿಪ್ರಾಯ ಬೇರೆ ಆಗಿತ್ತು.

ಅವರ ಪ್ರಕಾರ, ಪ್ಲಾಸ್ಟಿಕ್ ಬಡವರ ಜೀವನದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಕಡಿಮೆ ಬೆಲೆಯ ಚೀಲಗಳು, ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಅನೇಕ ದಿನನಿತ್ಯದ ವಸ್ತುಗಳು ಪ್ಲಾಸ್ಟಿಕ್‌ನಿಂದಲೇ ಸಿಗುತ್ತವೆ. ಹೀಗಾಗಿ ಅದನ್ನು ಸಂಪೂರ್ಣ ನಿಷೇಧಿಸುವುದಕ್ಕಿಂತ, ಅದನ್ನು ಮರುಬಳಕೆ ಮಾಡುವ ಹೊಸ ಮಾರ್ಗ ಹುಡುಕಬೇಕು ಎಂದು ಅವರು ನಿರ್ಧರಿಸಿದರು.

Science Alert: ಅಮೆರಿಕಾದಾದ್ಯಂತ ಭೂಮಿ ಮೇಲೆ ಬೃಹತ್ ಬಿರುಕು: ವಿಜ್ಞಾನಿಗಳ ಎಚ್ಚರಿಕೆ!
Science Alert: ಅಮೆರಿಕಾದಾದ್ಯಂತ ಭೂಮಿ ಮೇಲೆ ಬೃಹತ್ ಬಿರುಕು: ವಿಜ್ಞಾನಿಗಳ ಎಚ್ಚರಿಕೆ!

ಪ್ರಯೋಗಾಲಯದಲ್ಲಿ ಶುರುವಾದ ಕ್ರಾಂತಿ

ಮಧುರೈನಲ್ಲಿರುವ ತ್ಯಾಗರಾಜರ್‌ ಕಾಲೇಜ್‌ ಅಫ್‌ ಇಂಜಿನಿಯರಿಂಗ್‌ ಕಾಲೇಜಿನ ತಮ್ಮ ಪ್ರಯೋಗಾಲಯದಲ್ಲಿ ಅವರು ಹಲವು ವರ್ಷಗಳ ಕಾಲ ಪ್ರಯೋಗ ನಡೆಸಿದರು. ಈ ವೇಳೆ ಅವರಿಗೆ ಪ್ಲಾಸ್ಟಿಕ್‌ನ ಒಂದು ವಿಶೇಷ ಗುಣ ಗಮನಕ್ಕೆ ಬಂತು. ಬಿಸಿ ಮಾಡಿದಾಗ ಪ್ಲಾಸ್ಟಿಕ್ ಉತ್ತಮ ಅಂಟಿಕೊಳ್ಳುವ ವಸ್ತುವಿನಂತೆ ವರ್ತಿಸುತ್ತದೆ. ರಸ್ತೆ ನಿರ್ಮಾಣಕ್ಕೆ ಬಳಸುವ ಬಿಟುಮಿನ್ (ತಾರ್) ಮತ್ತು ಪ್ಲಾಸ್ಟಿಕ್ ಎರಡರಲ್ಲೂ ಒಂದೇ ರೀತಿಯ ರಾಸಾಯನಿಕ ಗುಣಗಳಿವೆ. ಹೀಗಾಗಿ ಅವರು ಕಸದ ಪ್ಲಾಸ್ಟಿಕ್ ತುಂಡುಗಳನ್ನು ಬಿಸಿ ಮಾಡಿದ ಕಲ್ಲು ಮತ್ತು ಬಿಟುಮಿನ್ ಜೊತೆ ಬೆರೆಸಿದರು. ಫಲಿತಾಂಶ ಅಚ್ಚರಿಯದ್ದಾಗಿತ್ತು.

ಸಾಮಾನ್ಯ ರಸ್ತೆಗಳಲ್ಲಿ ಮಳೆ ನೀರು ಒಳನುಗ್ಗಿ ರಸ್ತೆ ಹಾಳಾಗುತ್ತದೆ. ಬಳಿಕ ಗುಂಡಿಗಳು ಉಂಟಾಗುತ್ತವೆ. ಆದರೆ ಪ್ಲಾಸ್ಟಿಕ್ ಮಿಶ್ರಿತ ರಸ್ತೆಗಳಲ್ಲಿ ಮಳೆ ನೀರು ಒಳನುಗ್ಗುವುದು ಕಡಿಮೆ. ಗುಂಡಿಗಳು ಉಂಟಾಗುವ ಸಾಧ್ಯತೆ ಕಡಿಮೆ. ರಸ್ತೆ ಹೆಚ್ಚು ಬಾಳಿಕೆ ಬರುತ್ತದೆ. ಬಿಸಿಲು ಮತ್ತು ಮಳೆಯನ್ನು ಉತ್ತಮವಾಗಿ ತಡೆದುಕೊಳ್ಳುತ್ತದೆ. ರಸ್ತೆ ಹೆಚ್ಚು ಬಲಿಷ್ಠವಾಗುತ್ತದೆ. ಇದರ ಜೊತೆಗೆ ರಸ್ತೆ ನಿರ್ಮಾಣಕ್ಕೆ ಬೇಕಾಗುವ ಬಿಟುಮಿನ್ ಪ್ರಮಾಣವೂ ಕಡಿಮೆಯಾಗುತ್ತದೆ.

ಸಂಶೋಧನಾ ಹಡಗಿನ ಇಂಜಿನ್ ವೈಫಲ್ಯ: 8 ವಿಜ್ಞಾನಿಗಳು ಸೇರಿ 36 ಸಿಬ್ಬಂದಿ ರಕ್ಷಿಸಿದ ಕೋಸ್ಟ್‌ಗಾರ್ಡ್‌
ಸಂಶೋಧನಾ ಹಡಗಿನ ಇಂಜಿನ್ ವೈಫಲ್ಯ: 8 ವಿಜ್ಞಾನಿಗಳು ಸೇರಿ 36 ಸಿಬ್ಬಂದಿ ರಕ್ಷಿಸಿದ ಕೋಸ್ಟ್‌ಗಾರ್ಡ್‌

ಒಂದು ಕಿಲೋಮೀಟರ್ ರಸ್ತೆಗೆ ಒಂದು ಟನ್ ಪ್ಲಾಸ್ಟಿಕ್!

ಸಾಮಾನ್ಯವಾಗಿ ಒಂದು ಕಿಲೋಮೀಟರ್ ರಸ್ತೆ ನಿರ್ಮಿಸಲು ಸುಮಾರು 10 ಟನ್ ಬಿಟುಮಿನ್ ಬೇಕಾಗುತ್ತದೆ. ಆದರೆ ವಾಸುದೇವನ್ ಅವರ ತಂತ್ರಜ್ಞಾನದಲ್ಲಿ ಸುಮಾರು 9 ಟನ್ ಬಿಟುಮಿನ್, 1 ಟನ್ ಕಸದ ಪ್ಲಾಸ್ಟಿಕ್ ಸಾಕಾಗುತ್ತದೆ. ಅಂದರೆ ಪ್ರತಿ ಕಿಲೋಮೀಟರ್ ರಸ್ತೆಯಲ್ಲೂ ಒಂದು ಟನ್ ಪ್ಲಾಸ್ಟಿಕ್ ಕಸ ಉಪಯೋಗವಾಗುತ್ತದೆ. ಇದರಿಂದ ಪ್ಲಾಸ್ಟಿಕ್ ಕಸ ಕಡಿಮೆಯಾಗುವುದರ ಜೊತೆಗೆ ರಸ್ತೆ ನಿರ್ಮಾಣದ ವೆಚ್ಚವೂ ಇಳಿಯುತ್ತದೆ.

ಡಾ. ಎಪಿಜೆ ಅಬ್ದುಲ್ ಕಲಾಂ ನೀಡಿದ ಪ್ರೋತ್ಸಾಹ

ಭಾರತದ ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಮಧುರೈ ಕಾಲೇಜಿಗೆ ಭೇಟಿ ನೀಡಿದಾಗ ಈ ಸಂಶೋಧನೆಯ ಬಗ್ಗೆ ತಿಳಿದುಕೊಂಡರು. ಅವರು ವಾಸುದೇವನ್ ಅವರಿಗೆ ಕಾಲೇಜಿನ ಆವರಣದಲ್ಲೇ ಮೊದಲ ಪ್ಲಾಸ್ಟಿಕ್ ರಸ್ತೆ ನಿರ್ಮಿಸಲು ಪ್ರೋತ್ಸಾಹ ನೀಡಿದರು.

2002ರಲ್ಲಿ ಸುಮಾರು 60 ಅಡಿ ಉದ್ದದ ಮೊದಲ ಪ್ಲಾಸ್ಟಿಕ್ ರಸ್ತೆ ನಿರ್ಮಿಸಲಾಯಿತು. ಅಚ್ಚರಿಯ ವಿಷಯ ಏನೆಂದರೆ, ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದರೂ ಆ ರಸ್ತೆ ಇನ್ನೂ ಉತ್ತಮ ಸ್ಥಿತಿಯಲ್ಲಿದೆ.

2006ರಲ್ಲಿ ಈ ತಂತ್ರಜ್ಞಾನಕ್ಕೆ ಪೇಟೆಂಟ್ ದೊರೆಯಿತು. ನಂತರ ಈ ತಂತ್ರಜ್ಞಾನವನ್ನು ಭಾರತದ ಅನೇಕ ರಾಜ್ಯಗಳು ಅಳವಡಿಸಿಕೊಂಡವು. ತಮಿಳುನಾಡಿನಲ್ಲಿ ಸಾವಿರಾರು ಕಿಲೋಮೀಟರ್ ರಸ್ತೆಗಳನ್ನು ಈ ವಿಧಾನದಲ್ಲಿ ನಿರ್ಮಿಸಲಾಯಿತು. ಬಳಿಕ ಕೇಂದ್ರ ಸರ್ಕಾರವೂ ಈ ತಂತ್ರಜ್ಞಾನಕ್ಕೆ ಅನುಮೋದನೆ ನೀಡಿತು. ಅವರ ಪರಿಸರ ಸ್ನೇಹಿ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

"ಪ್ಲಾಸ್ಟೋನ್" ಎಂಬ ಮತ್ತೊಂದು ಆವಿಷ್ಕಾರ

ರಸ್ತೆ ನಿರ್ಮಾಣ ಮಾತ್ರವಲ್ಲದೆ, ವಾಸುದೇವನ್ ಮತ್ತೊಂದು ಹೊಸ ವಸ್ತುವನ್ನೂ ಅಭಿವೃದ್ಧಿಪಡಿಸಿದರು. ಅದರ ಹೆಸರು ಪ್ಲಾಸ್ಟೋನ್ (Plastone). ಪ್ಲಾಸ್ಟಿಕ್ ಕಸ, ಕಲ್ಲು, ಸೆರಾಮಿಕ್ ತ್ಯಾಜ್ಯ ಮತ್ತು ಇತರ ವಸ್ತುಗಳನ್ನು ಬೆರೆಸಿ ಅವರು ಈ ಕಟ್ಟಡ ಸಾಮಗ್ರಿಯನ್ನು ತಯಾರಿಸಿದರು.

ಈ ವಸ್ತುವನ್ನು ಬಳಸಿ ನೆಲಹಾಸು, ಕಾಲುದಾರಿ, ಗೋಡೆ ಟೈಲ್ಸ್, ಶೌಚಾಲಯ ನಿರ್ಮಾಣ ಮಾಡಬಹುದು. ಒಂದು ಪ್ಲಾಸ್ಟೋನ್ ಬ್ಲಾಕ್ ತಯಾರಿಸಲು ನೂರಾರು ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಬಳಸಲಾಗುತ್ತವೆ.

ಪ್ಲಾಸ್ಟಿಕ್‌ನಿಂದ ವಿಷಕಾರಿ ಅನಿಲ ಬರುತ್ತದೆಯೇ?

ಕೆಲವು ಪರಿಸರವಾದಿಗಳು ಈ ತಂತ್ರಜ್ಞಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಪ್ಲಾಸ್ಟಿಕ್ ಬಿಸಿ ಮಾಡಿದಾಗ ವಿಷಕಾರಿ ಅನಿಲ ಬಿಡುಗಡೆಯಾಗಬಹುದೇ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಾಸುದೇವನ್ ಅವರ ಪ್ರಕಾರ, ರಸ್ತೆ ನಿರ್ಮಾಣದ ವೇಳೆ ಪ್ಲಾಸ್ಟಿಕ್ ಅನ್ನು ಸುಮಾರು 170 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಮಾತ್ರ ಬಿಸಿ ಮಾಡಲಾಗುತ್ತದೆ. ವಿಷಕಾರಿ ಅನಿಲಗಳು ಸಾಮಾನ್ಯವಾಗಿ 270 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಮಾತ್ರ ಬಿಡುಗಡೆಯಾಗುತ್ತವೆ. ಹೀಗಾಗಿ ಈ ವಿಧಾನ ಸುರಕ್ಷಿತವಾಗಿದೆ ಎಂದು ಅವರು ವಿವರಿಸಿದ್ದಾರೆ.

ಇಂದು ಭಾರತದ ಅನೇಕ ನಗರಗಳು ಮತ್ತು ರಾಜ್ಯಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಚೆನ್ನೈ, ಪುಣೆ, ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪ್ಲಾಸ್ಟಿಕ್ ರಸ್ತೆಗಳು ನಿರ್ಮಾಣಗೊಂಡಿವೆ. ಅಂದಾಜು ಪ್ರಕಾರ, ದೇಶಾದ್ಯಂತ 60,000 ಕಿಲೋಮೀಟರ್‌ಗಿಂತ ಹೆಚ್ಚು ರಸ್ತೆಗಳನ್ನು ಈ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಇದು ವಿಶ್ವದಲ್ಲೇ ಕಸದ ಪ್ಲಾಸ್ಟಿಕ್ ಮರುಬಳಕೆಯ ಅತ್ಯಂತ ಯಶಸ್ವಿ ಉದಾಹರಣೆಗಳಲ್ಲಿ ಒಂದಾಗಿದೆ.

73 ವರ್ಷದ ರಾಜಗೋಪಾಲನ್ ವಾಸುದೇವನ್ ಅವರು "ಪ್ಲಾಸ್ಟಿಕ್ ಸಮಸ್ಯೆಯಲ್ಲ. ಅದನ್ನು ನಾವು ಜವಾಬ್ದಾರಿಯಿಲ್ಲದೆ ಎಸೆಯುವುದು ಸಮಸ್ಯೆ" ಎನ್ನುತ್ತಾರೆ. ಒಮ್ಮೆ ಪರಿಸರಕ್ಕೆ ಅಪಾಯ ಎಂದು ಪರಿಗಣಿಸಿದ್ದ ಕಸದ ಪ್ಲಾಸ್ಟಿಕ್‌ನ್ನು ಅವರು ರಸ್ತೆ, ಕಟ್ಟಡ ಸಾಮಗ್ರಿ ಮತ್ತು ಅಭಿವೃದ್ಧಿಯ ಸಾಧನವಾಗಿ ಪರಿವರ್ತಿಸಿದ್ದಾರೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+