ಗಗನಸಖಿ ತರಬೇತಿ ಬಿಟ್ಟು 12 ಟನ್ ತೂಕದ ಲಾರಿ ಸ್ಟೇರಿಂಗ್ ಹಿಡಿದ ದಿಟ್ಟೆ ನೇಹಾ ಠಾಕೂರ್!
ಇಂದು ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಭೂಮಿಯಿಂದ ಬಾಹ್ಯಾಕಾಶದವರೆಗೆ ಪುರುಷರ ಏಕಸ್ವಾಮ್ಯವಿದ್ದ ಎಷ್ಟೋ ಕಠಿಣ ಕ್ಷೇತ್ರಗಳಿಗೆ ಕಾಲಿಟ್ಟು, ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸುತ್ತಿದ್ದಾರೆ. ಇದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆಯೆಂದರೆ, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಘಾಟ್‌ನ ಖುಡ್ಲಾ ಗ್ರಾಮದ 25 ವರ್ಷದ ಯುವತಿ ನೇಹಾ ಠಾಕೂರ್.
ಹೌದು, ವಾಯುಯಾನ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕಿದ್ದ ಈ ಯುವತಿ, ಇಂದು 12 ಟನ್ ತೂಕದ ಭಾರೀ ಟ್ರಕ್‌ನ ಸ್ಟೇರಿಂಗ್ ಹಿಡಿದು ಹೆದ್ದಾರಿಗಳಲ್ಲಿ ಸಲೀಸಾಗಿ ವಾಹನ ಚಲಾಯಿಸುತ್ತಿದ್ದಾರೆ. ಇವರು ಹಿಮಾಚಲ ಪ್ರದೇಶದ ಮೊಟ್ಟಮೊದಲ ಮಹಿಳಾ ಟ್ರಕ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೇಹಾ ಅವರಿಗೆ ಟ್ರಕ್ ಎನ್ನುವುದು ಹೊಸ ವಿಚಾರವೇನಲ್ಲ. ಅವರ ತಂದೆ ಮನೋಜ್ ಠಾಕೂರ್ ಕಳೆದ ಎರಡು ದಶಕಗಳಿಂದ ಸಾರಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದಾರೆ. ನೇಹಾ ತಮ್ಮ ಬಾಲ್ಯದಲ್ಲಿ ತಂದೆಯ ಟ್ರಕ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದರು. ಆ ದೊಡ್ಡ ವಾಹನವನ್ನ ನೋಡಿದಾಗಲೆಲ್ಲಾ ಅವರಲ್ಲಿ ಒಂದು ರೀತಿಯ ಕುತೂಹಲ ಮತ್ತು ಆಕರ್ಷಣೆ ಮನೆಮಾಡುತ್ತಿತ್ತು. ಬೇರೆ ಕ್ಷೇತ್ರವನ್ನ ಎಷ್ಟೇ ಆಯ್ಕೆ ಮಾಡಿಕೊಂಡರೂ, ಬಾಲ್ಯದ ಈ ಆಕರ್ಷಣೆ ಅವರ ಮನಸ್ಸಿನಿಂದ ಅಳಿಸಿಹೋಗಿರಲಿಲ್ಲ.
ಕೊರೊನಾ ತಂದ ತಿರುವು: ಏರ್ ಹೋಸ್ಟೆಸ್‌ನಿಂದ ಟ್ರಕ್ ಡ್ರೈವರ್ ಆಗಿ ಬದಲಾದ ಕಥೆ
ಪದವಿಯ ನಂತರ ನೇಹಾ ಚಂಡೀಗಢಕ್ಕೆ ತೆರಳಿ ಏರ್ ಹೋಸ್ಟೆಸ್ (ಗಗನಸಖಿ) ತರಬೇತಿಯನ್ನ ಪಡೆದರು. ಆದರೆ, ಅದೇ ಸಮಯಕ್ಕೆ ವಕ್ಕರಿಸಿದ ಕೋವಿಡ್-19 ಸಾಂಕ್ರಾಮಿಕ ವಾಯುಯಾನ ಕ್ಷೇತ್ರದ ಮೇಲೆ ಭಾರಿ ಪೆಟ್ಟು ನೀಡಿತು. ಇದರಿಂದಾಗಿ ನೇಹಾ ತಮ್ಮ ಹುಟ್ಟೂರಿಗೆ ಹಿಂತಿರುಗಬೇಕಾಯಿತು. ಈ ಸಂದರ್ಭದಲ್ಲಿ ಅವರು ಹೊಸ ವೃತ್ತಿ ಮಾರ್ಗವನ್ನ ಆಯ್ಕೆ ಮಾಡಿಕೊಳ್ಳುವ ಧೈರ್ಯ ಮಾಡಿದರು.
ಭಾರಿ ವಾಣಿಜ್ಯ ವಾಹನಗಳನ್ನ ನಿಭಾಯಿಸುವುದು, ಗೇರ್, ಕ್ಲಚ್, ಬ್ರೇಕ್ ಇತ್ಯಾದಿಗಳನ್ನ ಅರಿಯುವುದು ಸುಲಭದ ಮಾತಾಗಿರಲಿಲ್ಲ. ಆದರೂ ಛಲ ಬಿಡದ ನೇಹಾ, ಡ್ರೈವಿಂಗ್ ಸ್ಕೂಲ್ ಸೇರಿ ಕಠಿಣ ತರಬೇತಿ ಪಡೆದು, 2023 ರಲ್ಲಿ (ತಮ್ಮ 21 ನೇ ವಯಸ್ಸಿನಲ್ಲಿ) ಭಾರಿ ಮೋಟಾರು ವಾಹನ ಪರವಾನಗಿಯನ್ನ ಪಡೆದರು. ಸಮಾಜದ ಟೀಕೆಗಳ ನಡುವೆಯೂ ಅವರ ತಂದೆ ಬೆನ್ನೆಲುಬಾಗಿ ನಿಂತು, ತಮ್ಮದೇ ಟ್ರಕ್‌ನಲ್ಲಿ ಮಗಳಿಗೆ ಅಭ್ಯಾಸ ಮಾಡಲು ನೆರವಾದರು.
ಸವಾಲುಗಳನ್ನು ಮೀರಿ ನಿಂತ ದಿಟ್ಟೆ: ಗುಡ್ಡಗಾಡು ರಸ್ತೆಗಳಲ್ಲಿ ಭಾರೀ ವಾಹನ ಚಾಲನೆ
ಆರಂಭದಲ್ಲಿ ಸ್ಥಳೀಯವಾಗಿ ಟ್ರಕ್ ಓಡಿಸುತ್ತಿದ್ದ ನೇಹಾ, ನಿಧಾನವಾಗಿ ಅಂತರರಾಜ್ಯ ಮಾರ್ಗಗಳಲ್ಲಿ ಪ್ರಯಾಣ ಬೆಳೆಸಿದರು. ಪ್ರಸ್ತುತ ಅವರು 12 ಟನ್ ತೂಕದ ಟಾಟಾ ಟ್ರಕ್‌ನಲ್ಲಿ ನಿರ್ಮಾಣ ಸಾಮಗ್ರಿಗಳು ಮತ್ತು ಕೃಷಿ ಉತ್ಪನ್ನಗಳನ್ನ ನೂರಾರು ಕಿಲೋಮೀಟರ್‌ಗಳವರೆಗೆ ಸಾಗಾಣಿಕೆ ಮಾಡುತ್ತಾರೆ. ಹಿಮಾಚಲ ಪ್ರದೇಶದಂತಹ ಗುಡ್ಡಗಾಡು, ಕಿರಿದಾದ ರಸ್ತೆಗಳು, ಮಂಜು, ಮಳೆಯಂತಹ ಕಠಿಣ ಹವಾಮಾನದಲ್ಲಿ ಟ್ರಕ್ ಓಡಿಸುವುದು ಎಂತಹವರಿಗೂ ಸವಾಲೇ ಸರಿ.
ಸಮಯಕ್ಕೆ ಸರಿಯಾಗಿ ಊಟವಿಲ್ಲದೇ, ಮನೆ ಬಿಟ್ಟು ದೂರದ ರಸ್ತೆಗಳಲ್ಲಿ ರಾತ್ರಿ ಕಳೆಯುವ ಕಷ್ಟಗಳನ್ನ ನೇಹಾ ಅತ್ಯಂತ ತಾಳ್ಮೆಯಿಂದ ನಿಭಾಯಿಸುತ್ತಿದ್ದಾರೆ. ಜನ ಆರಂಭದಲ್ಲಿ ಅಚ್ಚರಿ ಮತ್ತು ಸಂಶಯದಿಂದ ನೋಡಿದರೂ, ನೇಹಾ ತಮ್ಮ ಕೆಲಸದ ಮೂಲಕವೇ ಎಲ್ಲರಿಗೂ ಉತ್ತರ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್: ಟ್ರಕ್ ಡ್ರೈವರ್ ವ್ಲಾಗರ್ ಆಗಿ ಮಿಂಚುತ್ತಿರುವ ನೇಹಾ
ನೇಹಾ ಕೇವಲ ಟ್ರಕ್ ಚಾಲಕಿಯಾಗಿ ಉಳಿಯಲಿಲ್ಲ. ತಾವು ಪ್ರಯಾಣಿಸುವ ಹಾದಿ, ಟ್ರಕ್ ಡ್ರೈವರ್‌ಗಳ ದೈನಂದಿನ ಬದುಕು, ಹವಾಮಾನ ವೈಪರೀತ್ಯಗಳಂತಹ ವಿಚಾರಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಶುರುಮಾಡಿದರು. ಇವರ ವ್ಲಾಗ್‌ಗಳಿಗೆ ಒಳ್ಳೆ ಸ್ಪಂದನೆ ಸಿಕ್ಕಿತು. ಇಂದು ಯೂಟ್ಯೂಬ್‌ನಲ್ಲಿ 4.5 ಲಕ್ಷಕ್ಕೂ ಹೆಚ್ಚು ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಇವರಿಗೆ, ಅನೇಕ ಬ್ರ್ಯಾಂಡ್‌ಗಳಿಂದಲೂ ಅವಕಾಶಗಳು ಒಲಿದುಬರುತ್ತಿವೆ.
"ಹುಡುಗಿಯರು ತಮಗೆ ಆಸಕ್ತಿ ಇರುವ, ಆದರೆ ಸಮಾಜ ಇದು ಹುಡುಗಿಯರಿಗೆ ಅಲ್ಲ ಎಂದು ಹೇಳುವ ಕ್ಷೇತ್ರಗಳಿಗೆ ಹೋಗಲು ಎಂದಿಗೂ ಹಿಂದೇಟು ಹಾಕಬಾರದು. ಜನ ಏನು ಹೇಳುತ್ತಾರೆ ಎಂಬುದನ್ನು ಬಿಟ್ಟು, ನಿಮ್ಮ ಮೇಲೆ ನಂಬಿಕೆ ಇಟ್ಟು ಮುನ್ನಡೆಯಿರಿ" ಎಂದು ಯುವತಿಯರಿಗೆ ಕಿವಿಮಾತು ಹೇಳುತ್ತಾರೆ ನೇಹಾ. ಇದು ಕೇವಲ ಒಬ್ಬ ಮಹಿಳಾ ಟ್ರಕ್ ಡ್ರೈವರ್‌ನ ಕಥೆಯಲ್ಲ, ಬದಲಾಗಿ ತಮ್ಮ ಕನಸುಗಳನ್ನ ನನಸಾಗಿಸಿಕೊಳ್ಳಲು ದಿಕ್ಕನ್ನೇ ಬದಲಿಸಿದ ದಿಟ್ಟ ಹೆಣ್ಣಿನ ಸ್ಪೂರ್ತಿದಾಯಕ ಪಯಣ.


Click it and Unblock the Notifications
