Delhi Election 2025 Exit Poll: ದೆಹಲಿ ಎಕ್ಸಿಟ್ ಫೋಲ್ ಫಲಿತಾಂಶ, ಬಿಜೆಪಿಗೆ ಅಧಿಕಾರ
ನವದೆಹಲಿ, ಫೆಬ್ರವರಿ 05: ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನ ಬುಧವಾರ ಮುಕ್ತಾಯಗೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿದ್ದು, ಯಾರಿಗೆ ಅಧಿಕಾರ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 70 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಚುನಾವಣಾ ಪ್ರಚಾರ ಜೋರಾಗಿ ನಡೆದಿತ್ತು, ಕಣದಲ್ಲಿ 699 ಅಭ್ಯರ್ಥಿಗಳಿದ್ದಾರೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರ ಶನಿವಾರ ಪ್ರಕಟವಾಗಲಿದೆ.
ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ. ಈಗಾಗಲೇ 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿ ಚುನಾವಣೆ ಎದುರಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಎಎಪಿಗೆ ಎದುರಾಳಿಗಳು.

ಬಿಜೆಪಿಗೆ ಬಹುಮತ: ದೆಹಲಿ ಚುನಾವಣೆ ಕುರಿತು Matrize-ABP ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶ ಬುಧವಾರ ಸಂಜೆ ಪ್ರಕಟವಾಗಿದೆ.
Matrize-ABP ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ 35-40 ಸೀಟುಗಳಲ್ಲಿ ಜಯಗಳಿಸುವ ಮೂಲಕ ಸರಳ ಬಹುಮತವನ್ನು ಪಡೆಯಲಿದೆ. ಈ ಮೂಲಕ 26 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಅಧಿಕಾರ ಬಿಜೆಪಿ ಕೈ ಸೇರಲಿದೆ.
ಸಮೀಕ್ಷೆ ಪ್ರಕಾರ ರಾಜ್ಯದ ಆಡಳಿತ ಪಕ್ಷ ಎಎಪಿಗೆ ಹಿನ್ನಡೆಯಾಗಲಿದೆ. 2015, 2020ರಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರ ಪಡೆದಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ 32-37 ಸೀಟುಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ.
ಈ ಸಮೀಕ್ಷೆ ವರದಿಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮುಖಭಂಗವಾಗಲಿದೆ. ಪಕ್ಷ 0-1 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಅಂದಾಜಿಸಲಾಗಿದೆ.
2020ರ ಚುನಾವಣೆಯಲ್ಲಿ ಎಎಪಿ ರಾಜ್ಯದಲ್ಲಿ 62 ಸೀಟುಗಳಲ್ಲಿ ಗೆದ್ದು, ಶೇ 54ರಷ್ಟು ಮತಗಳನ್ನು ಪಡೆದಿತ್ತು. ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿ ಶೇ 39ರಷ್ಟು ಮತಗಳನ್ನು ಪಡೆದಿತ್ತು. ಕಾಂಗ್ರೆಸ್ ಪಕ್ಷ ಯಾವುದೇ ಸೀಟುಗಳಲ್ಲಿ ಗೆದ್ದಿರಲಿಲ್ಲ ಆದರೆ ಶೇ 4ರಷ್ಟು ಮತಗಳನ್ನು ಗಳಿಸಿತ್ತು.
2025ರ ದೆಹಲಿ ಚುನಾವಣೆ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರಮುಖವಾಗಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರ ನಾಯಕರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು.
ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅತಿಶಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಎಪಿ ಜಯಗಳಿಸಿದರೆ ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಎಪಿ ಪಕ್ಷ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಎಎಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ, ಕಾಂಗ್ರೆಸ್ ನಿರೀಕ್ಷೆ ಹೊಂದಿವೆ. ಚುನಾವಣೆಯಲ್ಲಿ ಎಎಪಿ, ಬಿಜೆಪಿ ನಡುವೆ ನೇರ ಪೈಪೋಟಿ ಇದೆ ಎಂದು ಅಂದಾಜಿಸಲಾಗಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರ ಶನಿವಾರ ಪ್ರಕಟವಾಗಲಿದೆ.












Click it and Unblock the Notifications