ಅಮೆರಿಕದಲ್ಲಿ ಕಮಾಲ್ ಮಾಡಿದ ನಮ್ಮೂರಿನ ಆಲೂ ಬೋಂಡಾ: 'ಮಾಸ್ಟರ್ಶೆಫ್ ಸೀಸನ್ 16'ನಲ್ಲಿ ಮಿಂಚಿದ ಐಶು ಚಲ್ಲಾ
ಆಹಾ! ಬಿಸಿ ಬಿಸಿ ಆಲೂ ಬೋಂಡಾವನ್ನು ಕಾಯಿ ಚಟ್ನಿಯೊಂದಿಗೆ ತಿನ್ನುವ ಮಜಾವೇ ಬೇರೆ. ನಮ್ಮ ಬೀದಿ ಬದಿ ಅಂಗಡಿಗಳಲ್ಲಿ, ಹೋಟೆಲ್ಗಳಲ್ಲಿ ಪ್ರತಿದಿನ ಸಿಗುವ ಎಲ್ಲರ ಈ ಅಚ್ಚುಮೆಚ್ಚಿನ ಸ್ನಾಕ್ಸ್ ಇಂದು ಅಮೆರಿಕದಂತಹ ದೇಶದಲ್ಲಿ ಸದ್ದು ಮಾಡುತ್ತದೆ ಎಂದು ಎಂದಾದರೂ, ಯಾರಾದ್ರೂ ಊಹಿಸಿಕೊಂಡುದ್ದೀರಾ?
ಹೌದು, ಅಂತಹದ್ದೊಂದು ಕ್ಷಣಕ್ಕೆ ನಮ್ಮ ದಕ್ಷಿಣ ಭಾರತದ ಹೆಮ್ಮೆಯ ಆಲೂ ಬೋಂಡಾ ಸಾಕ್ಷಿಯಾಗಿದೆ. ಭಾರತೀಯ ಯುವತಿ ಐಶು ಚಲ್ಲಾ ಅವರು ತಮ್ಮ ಅಡುಗೆ ಕೌಶಲ್ಯದಿಂದ ನಮ್ಮ ಹೆಮ್ಮೆಯ 'ಆಲೂ ಬೋಂಡಾ'ವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ, ಎಲ್ಲರ ಮನಗೆದ್ದಿದ್ದಾರೆ.

ಮಾಸ್ಟರ್ಶೆಫ್ ಸೀಸನ್ 16ನಲ್ಲಿ ಐಶು ಸಾಧನೆ
'ಮಾಸ್ಟರ್ಶೆಫ್ ಯುಎಸ್ಎ ಸೀಸನ್ 16 - ಗ್ಲೋಬಲ್ ಗಾಂಟ್ಲೆಟ್' ಸ್ಪರ್ಧೆಯಲ್ಲಿ ಏಷ್ಯಾ-ಪೆಸಿಫಿಕ್ ತಂಡವನ್ನು ಐಶು ಪ್ರತಿನಿಧಿಸುತ್ತಿದ್ದು, ಮೇ ತಿಂಗಳಲ್ಲಿ ನಡೆದ ಸಂಚಿಕೆಯಲ್ಲಿ ನಮ್ಮ ಜನಪ್ರಿಯ ತಿನಿಸಾದ ಆಲೂ ಬೋಂಡಾ ತಯಾರಿಸಿದ್ದರು. ವಿಶೇಷವೆಂದರೆ, ಈ ಖಾದ್ಯವನ್ನು ಸವಿದ ತೀರ್ಪುಗಾರರು ಫಿದಾ ಆಗಿದ್ದಲ್ಲದೆ, ಆಕೆಗೆ ಪ್ರತಿಷ್ಠಿತ 'ಇಮ್ಯುನಿಟಿ ಪಿನ್'ನೀಡಿ ಗೌರವಿಸಿದ್ದಾರೆ. ಭಾರತೀಯ ಸಸ್ಯಾಹಾರಿ ಅಡುಗೆಯಲ್ಲಿರುವ ರುಚಿ ಮತ್ತು ವೈವಿಧ್ಯತೆಯನ್ನು ಐಶು ತೀರ್ಪುಗಾರರ ಮುಂದಿಟ್ಟ ರೀತಿ ಕನ್ನಡಿಗರು ಹಾಗೂ ಭಾರತೀಯರಲ್ಲಿ ಸಂತಸ ಮೂಡಿಸಿದೆ.
ತೀರ್ಪುಗಾರರ ಮನಗೆದ್ದ ಆಲೂ ಬೋಂಡಾ ರೆಸಿಪಿ
ಮಾಸ್ಟರ್ಶೆಫ್ ಕಾರ್ಯಕ್ರಮದಲ್ಲಿ ಈ ಬೋಂಡಾವನ್ನು 'ಸೇವರಿ ಡೋನಟ್'ಅಂದರೆ ಖಾರದ ಡೋನಟ್ ಎಂದು ಹೇಳಿದ್ದಾರೆ. ಮಸಾಲೆ ಬೆರೆಸಿದ ಬೇಯಿಸಿದ ಆಲೂಗಡ್ಡೆ , ತುರಿದ ತೆಂಗಿನಕಾಯಿ, ಹುರಿದ ಜೀರಿಗೆಯ ಸ್ವಾದದೊಂದಿಗೆ, ತೆಂಗಿನಕಾಯಿ ಮತ್ತು ಪುದೀನಾ-ಕೊತ್ತಂಬರಿ ಚಟ್ನಿಯ ಜೊತೆ ಇದನ್ನು ಬಡಿಸಲಾಯಿತು. ಗರಿಗರಿಯಾದ ಚಿನ್ನದ ಬಣ್ಣದ ಆಲೂ ಬೋಂಡಾ ಹಾಗೂ ಅದರ ರುಚಿ ತೀರ್ಪುಗಾರರಿಂದ ಭಾರೀ ಮೆಚ್ಚುಗೆ ಗಳಿಸಿತು.
ಫಿಫಾ ವಿಶ್ವಕಪ್ ಹಿನ್ನೆಲೆಯಲ್ಲಿ ಕೆಲವು ವಾರಗಳ ಕಾಲ ಸ್ಥಗಿತಗೊಂಡಿದ್ದ ಈ ಶೋ, ಇದೀಗ ಜುಲೈ 15, 2026 ರಂದು ಫಾಕ್ಸ್ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಲಿದ್ದು, ಐಶು ಅವರ ಮುಂದಿನ ಪಯಣ ನೋಡಲು ವೀಕ್ಷಕರು ಕಾತರರಾಗಿದ್ದಾರೆ.
ಮನೆಯಲ್ಲೇ ರುಚಿಯಾದ ಆಲೂ ಬೋಂಡಾ ಮಾಡುವ ವಿಧಾನ
ಇದನ್ನು ಓದಿದ ಮೇಲೆ ನಿಮಗೂ ಬೋಂಡಾ ತಿನ್ನುವ ಆಸೆಯಾಗಿದ್ದರೆ, ಇಲ್ಲಿದೆ ನೋಡಿ ಸುಲಭ ವಿಧಾನ:
ಬೇಕಾಗುವ ಸಾಮಗ್ರಿಗಳು:
ಬೇಯಿಸಿ, ಮ್ಯಾಶ್ ಮಾಡಿದ ಆಲೂಗಡ್ಡೆ - 3 ರಿಂದ 4
ಸಣ್ಣದಾಗಿ ಹೆಚ್ಚಿದ ಈರುಳ್ಳಿ - 1, ಹಸಿಮೆಣಸು - 2, ಶುಂಠಿ - ಚಿಕ್ಕ ತುಂಡು
ಸಾಸಿವೆ, ಜೀರಿಗೆ, ಅರಿಶಿನ, ಕರಿಬೇವು, ಕೊತ್ತಂಬರಿ ಸೊಪ್ಪು
ಕಡಲೆ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಹಸಿಮೆಣಸು, ಈರುಳ್ಳಿ, ಶುಂಠಿ ಹಾಕಿ ಚೆನ್ನಾಗಿ ಬಾಡಿಸಿ.
ಇದಕ್ಕೆ ಸ್ವಲ್ಪ ಅರಿಶಿನ, ಉಪ್ಪು ಹಾಗೂ ಮ್ಯಾಶ್ ಮಾಡಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ, ಒಲೆಯಿಂದ ಕೆಳಗಿಳಿಸಿ.
ಈ ಮಿಕ್ಸ್ ಮಾಡಿ ಇಟ್ಟುಕೊಂಡಿರೋದು ತಣ್ಣಗಾದ ಮೇಲೆ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಅಂದರೆ ತುಂಬಾ ತೆಳುವಾಗದಂತೆ ಕಲೆಸಿಕೊಳ್ಳಿ. ಬೇಕಿದ್ದರೆ ಮಾತ್ರ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿಕೊಳ್ಳಿ.
ಆಲೂಗಡ್ಡೆ ಉಂಡೆಗಳನ್ನು ಈ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿದರೆ, ರುಚಿಯಾದ ಹಾಗೂ ಗರಿಗರಿಯಾದ ಆಲೂ ಬೋಂಡಾ ಸವಿಯಲು ಸಿದ್ಧ.


Click it and Unblock the Notifications
