ಡೇಂಜರ್ ಡಿಸೆಂಬರ್: ಖ್ಯಾತ ನಟಿಯ ಕಾರು ಅಪಘಾತ: ಓರ್ವ ಸಾವು
ಮುಂಬೈ, ಡಿಸೆಂಬರ್ 29: ಡಿಸೆಂಬರ್ ತಿಂಗಳ ಅಂತಿಮ ದಿನಗಳು ಬರುತ್ತಿದ್ದಂತೆ ಎಲ್ಲೆಡೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವು-ನೋವುಗಳು ಕೂಡ ಹೆಚ್ಚಾಗಿದೆ. ಒಂದೇ ಅಪಘಾತದಲ್ಲಿ ಆರಕ್ಕೂ ಹೆಚ್ಚು ಜನರು ಉಸಿರು ಚೆಲ್ಲಿದ ಘಟನೆಗಳು ಕಣ್ಣೆದುರಿದ್ದು, ಎಲ್ಲೆಡೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಈ ತಿಂಗಳಲ್ಲಿ ಹೆಚ್ಚಿದೆ.
ಇದೀಗ ಖ್ಯಾತ ಸಿನಿಮಾ ನಟಿಯ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ, ನಟಿ ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮರಾಠಿ ಮತ್ತು ಹಿಂದಿ ಸಿನಿಮಾಗಳ ಜನಪ್ರಿಯ ನಟಿ ಊರ್ಮಿಳಾ ಕೊಠಾರಿ ಅವರ ಕಾರು ಮಧ್ಯ ರಾತ್ರಿ ಅಪಘಾತಕ್ಕೀಡಾಗಿದ್ದು, ಓರ್ವ ಮೆಟ್ರೋ ಕಾರ್ಮಿಕ ಈ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮರಾಠಿ ನಟಿ ಊರ್ಮಿಳಾ ಕೊಠಾರಿ ಸಿನಿಮಾ ಚಿತ್ರೀಕರಣ ಮುಗಿಸಿ ವಾಪಸ್ ಆಗುವ ವೇಳೆ ಮುಂಬೈನ ಕಾಂಧಿವಲಿ ಏರಿಯಾದಲ್ಲಿನ ಪೊಯ್ಸಾರ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾರ್ಮಿಕರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ನಟಿ ಹಾಗೂ ಅವರ ಕಾರು ಚಾಲಕನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ನಟಿಯ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ನಟಿಯ ಕಾರು ಅತಿವೇಗವಾಗಿ ಬಂದು ಕಾರ್ಮಿಕರಿಗೆ ಡಿಕ್ಕಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳ ಪರೀಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇನ್ನು ನಟಿ ಊರ್ಮಿಳಾ ಕೊಠಾರಿ, ಮರಾಠಿ ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಥ್ಯಾಂಕ್ ಗಾಡ್ ಸಿನಿಮಾದಲ್ಲಿ ಊರ್ಮಿಳಾ ಕೊಠಾರಿ ನಟಿಸಿದ್ದಾರೆ. ಮೆಚ್ಚಿನ ನಟಿಯ ಕಾರು ಅಪಘಾತ ವಿಚಾರ ಅವರ ಮರಾಠಿ ಅಭಿಮಾನಿಗಳಿಗೆ ತಲುಪಿದ್ದು, ಊರ್ಮಿಳಾ ಕೊಠಾರಿ ಫ್ಯಾನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.












Click it and Unblock the Notifications