ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಗುಂಡಿನ ದಾಳಿಯಲ್ಲಿ ವ್ಯಕ್ತಿ ಸಾವು, ಏಳು ಮಂದಿಗೆ ಗಾಯ
ಇಂಪಾಲ, ಆಗಸ್ಟ್ 29: ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಶಂಕಿತ ಕುಕಿ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮೈತೇಯಿ ಸಮುದಾಯದ ಇಬ್ಬರು ರೈತರು ಸೇರಿದಂತೆ ಏಳು ಮಂದಿಗೆ ಗಾಯಗಳಾಗಿವೆ.
ಇಂದು ಬೆಳಗ್ಗೆ ನಡೆದ ಬಂಡುಕೋರರ ಗುಂಡಿನ ದಾಳಿಯಲ್ಲಿ 27 ವರ್ಷದ ವ್ಯಕ್ತಿಯೊಬ್ಬ ಗಾಯಗೊಂಡಿದ್ದರು. ಅವರು ಸಂಜೆ ಇಂಫಾಲ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂಫಾಲ್ ಕಣಿವೆಯಿಂದ ಕುಕಿ ಪ್ರಾಬಲ್ಯದ ಬೆಟ್ಟಗಳನ್ನು ಬೇರ್ಪಡಿಸುವ ಬಫರ್ ವಲಯದ ಸಮೀಪದಲ್ಲಿ ಈ ಘಟನೆ ನಡೆದಿದೆ. ಮೈತೇಯಿ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆಯ ನರೆನ್ಸೇನಾ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ.

ಶಂಕಿತ ಕುಕಿ ದಂಗೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೈತೇಯಿ ರೈತರು ಮೊದಲು ಗಾಯಗೊಂಡರು. ನಂತರ ಅವರನ್ನು ಇಂಫಾಲ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಂಡಿನ ದಾಳಿಯ ಹೆಚ್ಚಿನ ಘಟನೆಗಳು ವರದಿಯಾಗಿವೆ. ಇದರಲ್ಲಿ ಕನಿಷ್ಠ ಆರು ಮೈತೇಯಿ ಗ್ರಾಮ ಸ್ವಯಂಸೇವಕರಿಗೆ ಬುಲೆಟ್ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಗ್ರಾಮ ಸ್ವಯಂಸೇವಕರಲ್ಲಿ ಹೆಚ್ಚಿನವರು ಯುವಕರು. ಅವರು ತಮ್ಮ ಗ್ರಾಮಗಳ ಮೇಲೆ ನಡೆಯುವ ಸಂಭವನೀಯ ದಾಳಿಗಳ ವಿರುದ್ಧ ಹೋರಾಡುತ್ತಾರೆ.
ಈ ಘಟನೆಯ ಬಳಿಕ ಭದ್ರತಾ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದಿವೆ. ಶಂಕಿತ ಕುಕಿ ದಂಗೆಕೋರರ ಮೇಲೆ ಗುಂಡು ಹಾರಿಸಿವೆ.

ಮನೆಗಳಿಗೆ ಬೆಂಕಿ
ಹಿಂಸಾಚಾರ ಪೀಡಿತ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಭಾನುವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂರು ಮನೆಗಳನ್ನು ಸುಟ್ಟುಹಾಕಲಾಗಿದೆ. ಭದ್ರತಾ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಗಿದೆ.
ಮನೆಗಳಿಗೆ ಬೆಂಕಿ ಹಚ್ಚಿದ ಕೂಡಲೇ, ಜನರು ಆ ಪ್ರದೇಶದಲ್ಲಿ ಜಮಾಯಿಸಿದ್ದಾರೆ. ಗಲಭೆ ಪೀಡಿತ ಪ್ರದೇಶಕ್ಕೆ ಪ್ರವೇಶಿಸಲು ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದ್ದಾರೆ. ಭದ್ರತಾ ಪಡೆಗಳು ನಂತರ ಕೆಲವು ಸುತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಕೆ ರಾಜೋ ಅವರ ನಿವಾಸವನ್ನು ಕಾವಲು ಕಾಯುತ್ತಿದ್ದ ಭದ್ರತಾ ಸಿಬ್ಬಂದಿಯಿಂದ ಅಪರಿಚಿತ ವ್ಯಕ್ತಿಗಳು ಮೂರು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಇಂಫಾಲ್ ಪಿಎಸ್ ವ್ಯಾಪ್ತಿಯ ಸಗೋಲ್‌ಬಂದ್ ಬಿಜೋಯ್ ಗೋವಿಂದ ಎಂಬಲ್ಲಿ ಈ ಘಟನೆ ನಡೆದಿದ್ದು, ಕಿತ್ತುಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ ಸಿರೀಸ್ ರೈಫಲ್‌ಗಳು ಮತ್ತು ಕಾರ್ಬೈನ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು ನಾಲ್ಕು ತಿಂಗಳ ಹಿಂದೆ ಹಿಂಸಾಚಾರ ಪ್ರಾರಂಭವಾಗಿದೆ. ಇದರಲ್ಲಿ ಸುಮಾರು 180 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಮನೆಗಳನ್ನು ತೊರೆದಿದ್ದಾರೆ.












Click it and Unblock the Notifications