ಮಣಿಪುರ; ಗುರುವಾರದಿಂದ 14 ದಿನ ಸಂಪೂರ್ಣ ಲಾಕ್ ಡೌನ್
ಇಂಪಾಲ, ಜುಲೈ 23 : ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಣಿಪುರದಲ್ಲಿ 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2060.
ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಘೋಷಣೆ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಮಂಗಳವಾರ ಮಣಿಪುರದಲ್ಲಿ 90 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿತ್ತು. ಆದ್ದರಿಂದ, ಬುಧವಾರ ತುರ್ತು ಸಚಿವ ಸಂಪುಟ ಸಭೆ ನಡೆಸಿ ಲಾಕ್ ಡೌನ್ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಮೊದಲು 7 ದಿನದ ಲಾಕ್ ಡೌನ್ ಎಂದು ತೀರ್ಮಾನಿಸಲಾಗಿತ್ತು. ಬಳಿಕ ಅದನ್ನು 14 ದಿನಗಳಿಗೆ ವಿಸ್ತರಣೆ ಮಾಡಲಾಯಿತು.

"ತುರ್ತು ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಜನರು ಇದನ್ನು ಪಾಲಿಸಬೇಕು" ಎಂದು ಎನ್. ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನರ ಸಂಚಾರವನ್ನು ನಿಯಂತ್ರಿಸಲು ಕರ್ಫ್ಯೂ ಜಾರಿಗೆ ಬರಲಿದೆ.
ಮಣಿಪುರದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2060ಕ್ಕೆ ಏರಿಕೆಯಾಗಿದೆ. ಬುಧವಾರ ರಾಜ್ಯದಲ್ಲಿ 45 ಹೊಸ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 68.68ರಷ್ಟಿದೆ.












Click it and Unblock the Notifications