ಮಂಗಳೂರು ರೈಲ್ವೆ ವಿಚಾರದಲ್ಲಿ ಕರ್ನಾಟಕ ಮೌನ! ಕೇರಳದ ಲಾಬಿಗೆ ಹೆದರುತ್ತಿದೆಯೇ ರಾಜ್ಯ ಸರ್ಕಾರ?
ಬೆಂಗಳೂರು: ಮಂಗಳೂರು ರೈಲ್ವೆ ವಲಯವನ್ನು ಕೇರಳದ ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮೈಸೂರು ವಿಭಾಗಕ್ಕೆ ಸೇರಿಸಿದ್ದಕ್ಕೆ ಕನ್ನಡಿಗರಿಗೆ ಸಂತಸವಾಗಿದೆ. ಆದರೆ ನಮ್ಮನ್ನಾಳುವ ಜನನಾಯಕರಿಗೆ ಈ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವೇ?. ಕರ್ನಾಟಕದ ಪಾಲಿಗೆ ಸಿಕ್ಕ ಮೂರು ರೈಲ್ವೆ ನಿಲ್ದಾಣಗಳನ್ನು ಕಸಿದುಕೊಳ್ಳಲು ಕೇರಳ ದೆಹಲಿ ಮಟ್ಟದಲ್ಲಿ ಭಾರೀ ಲಾಭಿ ನಡೆಸುತ್ತಿದೆ. ಕನ್ನಡಪರ ಸಂಘಟನೆಗಳು, ಮುಖ್ಯವಾಗಿ ಕಾಂಗ್ರೆಸ್ ನಾಯಕರು, ಸಿಎಂ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕರು ಮೌನವಾಗಿರುವುದೇಕೆ? ಎಲ್ಲದರಲ್ಲೂ ರಾಜಕೀಯ ಬಿಟ್ಟು ನಾಡಿನ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗಬೇಕಿದೆ. ಕೆಲವೊಮ್ಮೆ ಸಿನಿಮಾ, ಗಡಿ, ಅಭಿವೃದ್ಧಿ ವಿಚಾರಗಳಲ್ಲಿ ನೆರೆಯ ರಾಜ್ಯಗಳನ್ನು ನೋಡಿ ಕರ್ನಾಟಕ ಕಲಿಯಬೇಕು ಅನ್ನಿಸುತ್ತದೆ!.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಸಿಎಂ ವಿ.ಡಿ.ಸತೀಶನ್ ಆದಿಯಾಗಿ ಅನೇಕರು ಪಕ್ಷಾತೀತವಾಗಿ ಮೈಸೂರು ವಿಭಾಗಕ್ಕೆ ಸೇರಿಸಿದ ರೈಲ್ವೆ ಇಲಾಖೆ ನಿರ್ಧಾರವನ್ನು ಖಂಡಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಕ್ಕೆ ಮೌನವಾಗಿದ್ದಾರಾ? ಅಥವಾ ಮುಖ್ಯಮಂತ್ರಿಗಳ ಮೇಲೊಬ್ಬ ಸೂಪರ್ ಸಿಎಂ ಇದ್ದಾರಾ? ಎಂಬ ಪ್ರಶ್ನೆ ಸಹ ಉದ್ಭವವಾಗಿದೆ. ಡಿಕೆ ಶಿವಕುಮಾರ್ ಸಿಎಂ ಆದರೆ ಕೇರಳ ಸಂಸದರು ಆಗಿರುವ ಕೆ.ಸಿ.ವೇಣುಗೋಪಾಲ್ ಸೂಪರ್ ಸಿಎಂ. ಅವರ ಕೈಯಲ್ಲಿ ಕರ್ನಾಟಕದ ಗಾಳ ಇದೆ ಎಂಬ ಮಾತುಗಳು ಚರ್ಚೆ ಆಗುತ್ತಿವೆ.

ಕೇರಳದಿಂದ ದೊಡ್ಡ ಮಟ್ಟದ ಲಾಭಿ!
ಮೈಸೂರು ವಿಭಾಗಕ್ಕೆ ಮಂಗಳೂರು ರೈಲ್ವೆಯನ್ನು ಸೇರಿಸಿದ್ದೇ ತಡ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ಸೇರಿದಂತೆ ಕೇರಳದ ಸಂಸದರು ಪಕ್ಷಾತೀತವಾಗಿ ಲಾಭಿ ನಡೆಸಿದ್ದಾರೆ. ಪಿಎಂಗೆ ಸಿಎಂ ಪತ್ರ ಬರೆದಿದ್ದಾರೆ. ಜೊತೆಗೆ ಅಧಿಕಾರಿಗಳ ಮಟ್ಟದಲ್ಲೂ ಲಾಭಿ ಮುಂದುವರಿದಿದ್ದು, ಅಧಿಕಾರಿಗಳು ಅವರ ಪರವೇ ಇದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಆದರೂ ಕರ್ನಾಟಕವು ಮೌನ ವಹಿಸಿರುವುದು ನೋಡಿದರೆ ಕರ್ನಾಟಕದ ಪಾಲಿಗೆ ಬಂದ ಕರಾವಳಿಯ ಮೂರು ರೈಲು ನಿಲ್ದಾಣಗಳು ಮತ್ತೆ ಕೇರಳ ಪಾಲಾಗುತ್ತವಾ ಎಂಬ ಆತಂಕ ಶುರುವಾಗಿದೆ. ಸುಮಾರು 30 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸಿದವರ ಶ್ರಮ ವ್ಯರ್ಥವಾಗುವ ಮೊದಲೇ ಕರ್ನಾಟಕ ಸರ್ಕಾರ, ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕಿದೆ.
ಕೆಸಿ ವೇಣೂಗೋಪಾಲ್ ಸೂಪರ್ ಸಿಎಂ, ಡಿಕೆಶಿ?
ಈ ಹಿಂದೆ ಕೇರಳದ ಸಿಎಂ ಆಗಲು ಲಾಭಿ ನಡೆಸಿದ್ದ ಕೆಸಿ ವೇಣುಗೋಪಾಲ ಅವರು ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ವೇಳೆ ಸೀಟು ಹಂಚಿಕೆ ಆಗಬೇಕಾದರೆ, ಸಚಿವ ಸ್ಥಾನ ನೀಡಬೇಕಾದರೆ ಹೈಕಮಾಂಡೇ ನಿರ್ಧರಿಸುತ್ತದೆ. ಈ ಸಂದರ್ಭದಲ್ಲಿ ಕೆಸಿ ವೇಣುಗೋಪಾಲ್ ಅವರ ಹಸ್ತಕ್ಷೇಪವು ಸಾಕಷ್ಟಿರುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈ ಕಾರಣಕ್ಕೆ ಕರ್ನಾಟಕದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಇದೆಲ್ಲ ನೋಡಿದರೆ ಕರ್ನಾಟಕಕ್ಕೆ ಡಿಕೆ ಶಿವಕುಮಾರ್ ಅವರು ಸಿಎಂ ಆದರೆ ಕೆಸಿ ವೇಣುಗೋಪಾಲ್ ಅವರು ಸೂಪರ್ ಸಿಎಂ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪರಿಸ್ಥಿತಿ ಹೀಗಿರುವಾಗ ಕರ್ನಾಟಕ ಸರ್ಕಾರ ಕೇರಳದ ಲಾಭಿ ವಿರುದ್ಧ ಮಾತನಾಡಿದರೆ ಅದು ಕೇರಳ ಪರವಾಗಿ ರೈಲ್ವೇ ಸಚಿವರನ್ನು ಭೇಟಿ ಮಾಡಿ ಲಾಭಿ ನಡೆಸುತ್ತಿರುವ ಕೆಸಿ ವೇಣುಗೋಪಾಲ ವಿರುದ್ಧ ಮಾತನಾಡಿದಂತಾಗುತ್ತದೆ. ಈ ಕಾರಣಕ್ಕೆನೆ ಮೈಸೂರು ವಿಭಾಗಕ್ಕೆ ಸೇರಿದ ಮೂರು ರೈಲ್ವೆ ನಿಲ್ದಾಣ, ಕೇರಳ ಲಾಭಿ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ತುಟಿ ಬಿಚ್ಚುತ್ತಿಲ್ಲ ಎನ್ನಲಾಗಿದೆ.
ವಿಪಕ್ಷಗಳಿಗೆ ಬುದ್ಧಿ ಬಂದಂತಿಲ್ಲ!
ಇನ್ನು ಸಚಿವ ಬಿ.ನಾಗೇಂದ್ರ ವಿಚಾರ ಮುಂದಿಟ್ಟುಕೊಂಡು ಎರಡು ವಾರದ ರಾಜ್ಯ ವಿಧಾನಮಂಡಲ ಕಲಾಪಕ್ಕೆ ಅಡ್ಡಿಪಡಿಸಿದ ಮತ್ತು ಸೆ.1ರಿಂದ ಪಾದಯಾತ್ರೆಗೆ ಸಜ್ಜಾಗಿರುವ ಬಿಜೆಪಿ-ಜೆಡಿಎಸ್ ನಾಯಕರಿಗೂ ರಾಜಕೀಯವೇ ಮುಖ್ಯವಾಗಿದೆ. ಇಂತಹ ಸಂದರ್ಭದಲ್ಲಿ ಧ್ವನಿ ಎತ್ತಬೇಕಾದ ಕರ್ನಾಟಕ ವಿಪಕ್ಷ ನಾಯಕರು ಕೂಡ ಕರುನಾಡಿನ ಜನರ ಹಿತ ಕಾಯುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಕರ್ನಾಟಕ ಪರ ಕೇಂದ್ರ ಬಿಜೆಪಿ ಕೈಗೊಂಡ ನಿರ್ಧಾರಕ್ಕೂ ನಿರೀಕ್ಷಿತ ಶ್ಲಾಘನೆ ವ್ಯಕ್ತವಾಗುತ್ತಿಲ್ಲ.
ಪತ್ರ ಬರೆದು ಕರ್ನಾಟಕದ ಬೆಂಬಲ ಕೇಳುವ ಸ್ಥಿತಿ
ಕೇರಳದಿಂದ ಮೈಸೂರು ವಿಭಾಗಕ್ಕೆ ಮಂಗಳೂರಿನ ರೈಲ್ವೆ ವಲಯ ಸೇರಿಸಬೇಕೆಂದು ಬ್ರಿಜೇಶ್ ಚೌಟಾ ಅವರು ಕರ್ನಾಟಕದ ಪರ ದೆಹಲಿಯಲ್ಲಿ ಲಾಭಿ ಮಾಡಿದ್ದರು. ಆದರೆ ಈಗ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರ್ಕಾರದ ಬೆಂಬಲ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಒಂದೇ ಒಂದು ಹೇಳಿಕೆ ಸಹ ನೀಡದಷ್ಟು ಅಸಹಾಯಕ ಸ್ಥಿತಿ ತಲುಪಿತೇ? ಅಥವಾ ಕರ್ನಾಟಕದಲ್ಲಿ ಆಡಳಿತ ನಡೆಸುವವರಿಗೆ ರಾಜ್ಯದ ಬಗ್ಗೆ ಸ್ವಾಭಿಮಾನವೇ ಇಲ್ಲದಂತಾಯ್ತಾ? ಇಲ್ಲ ಕೇರಳ ವಿರುದ್ಧ (ಕೆ.ಸಿ.ವೇಣುಗೋಪಾಲ) ಕನಿಷ್ಟ ಮಾತನಾಡಲು, ನಮ್ಮ ಹಕ್ಕಿನ ಬಗ್ಗೆ ವಿವರಿಸಲು ಭಯವೇ? ಈ ಕುರಿತು ಸರ್ಕಾರದ ಪ್ರತಿಕ್ರಿಯೆಗೆ ರಾಜ್ಯದ ಜನರು ಕಾಯುತ್ತಿದ್ದಾರೆ.


Click it and Unblock the Notifications
