Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ
ಸಾಮಾನ್ಯವಾಗಿ ಜನರು ಕಳ್ಳತನ, ಜಗಳ ಅಥವಾ ಆಸ್ತಿ ವಿವಾದಗಳ ದೂರು ಹಿಡಿದು ಪೊಲೀಸ್ ಠಾಣೆಗೆ ಹೋಗುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದಲ್ಲಿ ನಡೆದ ಘಟನೆ ಮಾತ್ರ ಪೊಲೀಸರನ್ನೇ ಒಂದು ಕ್ಷಣ ದಂಗಾಗಿಸಿದೆ. ತಾನು ತಂದ ಮಟನ್ ಎಷ್ಟೇ ಬೇಯಿಸಿದರೂ ಮೆತ್ತಗಾಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಬೇಯದ ಮಾಂಸದ ಪಾತ್ರೆಯನ್ನೇ ಹಿಡಿದು ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಯುಗಾದಿಗೆ ಕೈಕೊಟ್ಟ ಮಟನ್
ತಾಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಾಲಾ ಹಾಜಿ ಎಂಬುವವರು ಯುಗಾದಿ ಹಬ್ಬದ ಸಂಭ್ರಮಕ್ಕಾಗಿ ಮಾರುಕಟ್ಟೆಯಿಂದ ಟಗರು ತಲೆ ಮಾಂಸವನ್ನು ಖರೀದಿಸಿದ್ದರು. ಹಬ್ಬದ ದಿನ ಮನೆಯಲ್ಲಿ ರುಚಿಯಾದ 'ತಲೆ ಮಾಂಸದ ಸಾರು' ಸವಿಯಬೇಕೆಂದು ಬಹಳ ಉತ್ಸಾಹದಿಂದ ಅಡುಗೆ ಮನೆಗೆ ಇಳಿದಿದ್ದರು. ಹಾಜಿ ಅವರು ಮಾಂಸವನ್ನು ಕುಕ್ಕರ್‌ಗೆ ಹಾಕಿ ಬೇಯಿಸಲು ಶುರು ಮಾಡಿದರು. ಆದರೆ ಇಲ್ಲಿಂದಲೇ ಅಸಲಿ ಕಿರಿಕಿರಿ ಶುರುವಾಗಿದ್ದು. ಒಂದು ಬಾರಿ ಅಲ್ಲ, ಎರಡು ಬಾರಿ ಅಲ್ಲ... ಬರೋಬ್ಬರಿ 20 ಬಾರಿ ಕುಕ್ಕರ್ ಸೀಟಿ ಹೊಡೆಸಿದರೂ ಮಾಂಸ ಬೇಯಲೇ ಇಲ್ಲ. ಬದಲಿಗೆ ಕಲ್ಲಿನಂತೆ ಗಟ್ಟಿಯಾಗಿಯೇ ಇತ್ತು. ಗಂಟೆಗಟ್ಟಲೆ ಒಲೆಯ ಮುಂದೆ ನಿಂತು ಸುಸ್ತಾದ ಹಾಜಿ ಅವರಿಗೆ ವಿಪರೀತ ಕೋಪ ಬಂತು.

ಪಾತ್ರೆ ಹಿಡಿದು ಸ್ಟೇಷನ್‌ಗೆ ಎಂಟ್ರಿ
ತಾನು ಹಣ ಕೊಟ್ಟು ತಂದ ಮಾಂಸ ಗುಣಮಟ್ಟದ್ದಲ್ಲ ಅಥವಾ ಹಳೆಯ ಮಾಂಸವನ್ನು ತನಗೆ ನೀಡಿ ಮೋಸ ಮಾಡಲಾಗಿದೆ ಎಂದು ಭಾವಿಸಿದ ಹಾಜಿ, ಬೇಯದ ಮಟನ್ ಇದ್ದ ಪಾತ್ರೆಯನ್ನೇ ಎತ್ತಿಕೊಂಡು ನೇರವಾಗಿ ತಾಡಿಪತ್ರಿ ಟೌನ್ ಪೊಲೀಸ್ ಠಾಣೆಗೆ ಹೋದರು. ಠಾಣೆಯಲ್ಲಿದ್ದ ಟೌನ್ ಸರ್ಕಲ್ ಇನ್ಸ್ಪೆಕ್ಟರ್ ಆನಂದ ರಾವ್ ಅವರಿಗೆ ಪಾತ್ರೆ ತೋರಿಸಿ, "ಸಾರ್, ಈ ಮಟನ್ ನೋಡಿ, 20 ಸಲ ಪ್ರಯತ್ನಿಸಿದರೂ ಬೇಯುತ್ತಿಲ್ಲ. ಆ ವ್ಯಾಪಾರಿ ನನಗೆ ಮೋಸ ಮಾಡಿದ್ದಾನೆ, ಅವನ ಮೇಲೆ ಕ್ರಮ ಕೈಗೊಳ್ಳಿ" ಎಂದು ಗಂಭೀರವಾಗಿ ದೂರು ನೀಡಿದರು. ದೂರು ಕೇಳಿ ಇನ್ಸ್ಪೆಕ್ಟರ್ ಅವರೇ ಒಂದು ಕ್ಷಣ ಏನು ಮಾತನಾಡಬೇಕೆಂದು ತಿಳಿಯದೆ ಗಲಿಬಿಲಿಯಾದರು.
ವಿಷಯ ವಿಚಿತ್ರವಾಗಿದ್ದರೂ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದರು. ಕೂಡಲೇ ಮಾಂಸ ಮಾರಾಟ ಮಾಡಿದ ವ್ಯಾಪಾರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿತು. ವ್ಯಾಪಾರಿಯು ಗ್ರಾಹಕನಿಗೆ ಹಣವನ್ನು ಮರಳಿ ನೀಡಲು ಅಥವಾ ಹೊಸ ಮಾಂಸವನ್ನು ನೀಡಲು ಒಪ್ಪಿಕೊಂಡ ನಂತರ ಹಾಜಿ ಅವರು ಶಾಂತರಾಗಿ ಮನೆಗೆ ಮರಳಿದರು. ಸ್ಥಳೀಯರ ಪ್ರಕಾರ, ಕುರಿ ಅಥವಾ ಟಗರು ಅತಿಯಾದ ವಯಸ್ಸಿನದ್ದಾಗಿದ್ದರೆ ಅದರ ಮಾಂಸವನ್ನು ಎಷ್ಟೇ ಬೇಯಿಸಿದರೂ ಮೆತ್ತಗಾಗುವುದಿಲ್ಲ. ವ್ಯಾಪಾರಿಯು ಈ ಬಗ್ಗೆ ಸ್ಪಷ್ಟನೆ ನೀಡದಿದ್ದರೂ, ಹಾಜಿ ಅವರಿಗೆ ನೀಡಿದ ಮಾಂಸವು ಕೂಡ ಇದೇ ರೀತಿಯದ್ದಿರಬೇಕು ಎಂದು ಶಂಕಿಸಿದ್ದಾರೆ. ಸದ್ಯ ಈ 'ಬೇಯದ ಮಟನ್' ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications