ಅಕ್ಟೋಬರ್ 1 ರಿಂದ ದೇಶದಲ್ಲಿ ಒಂದೇ ಮಾದರಿಯ ಡಿಎಲ್, ಆರ್‌ಸಿ
ನವದೆಹಲಿ, ಸೆಪ್ಟೆಂಬರ್ 28: ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಇನ್ನೊಂದು ಹೊಸ ನಿಯಮ ಜಾರಿಗೆ ತರಲಿದೆ.
ಇಡೀ ದೇಶದಲ್ಲಿ ಒಂದೇ ಮಾದರಿಯ ಡಿಎಲ್ ಮತ್ತು ಆರ್‌ಸಿ ಪತ್ರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ.
ಡಿಎಲ್ ಮತ್ತು ಆರ್‌ಸಿ ಪತ್ರವನ್ನು ಒಂದೇ ರೀತಿಯಾಗಿ ಮುದ್ರಿಸಲಾಗುವುದು. ಹಳೆಯ ವಿನ್ಯಾಸ, ಮುದ್ರಣ ಶೈಲಿ ಎಲ್ಲವೂ ಬದಲಾಗಲಿವೆ. ಅಂತೆಯೇ ಎರಡೂ ದಾಖಲೆಗಳಲ್ಲೂ ಮೈಕ್ರೋಚಿಪ್ ಮತ್ತು ಕ್ಯೂ ಆರ್ ಕೋಡ್ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿಯೇ ಮೋಟಾರು ವಾಹನ(ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿತ್ತು. ಸಂಚಾರ ನಿಯಮ ಉಲ್ಲಂಘನೆ ತಡೆಯುವುದೇ ಈ ಮಸೂದೆಯ ಮೂಲ ಉದ್ದೇಶವಾಗಿತ್ತು. ಒಂದು ವೇಳೆ ಇನ್ಮುಂದೆ ಯಾರಾದರೂ ರಸ್ತೆಯಲ್ಲಿ ಕುಡಿದು ಅಡ್ಡಾದಿಡ್ಡಿ ವಾಹನ ಚಲಾಯಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿದ್ದವು.
ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಟ್ರ್ಯಾಕಿಂಗ್ ಉಪಕರಣ ನೀಡಲಾಗಿದೆ. ಈ ಟ್ರ್ಯಾಕಿಂಗ್ ಉಪಕರಣದ ಮೂಲಕ ಪೊಲೀಸರು ಯಾವುದೇ ವಾಹನದ ಮಾಹಿತಿಯನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಬಹಳ ಕಟ್ಟುನಿಟ್ಟಿನ ಸಾರಿಗೆ ಸಂಚಾರ ನಿಯಮಗಳನ್ನು ಹೊಂದಿರುವ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆಪ್ಟೆಂಬರ್ 2ರಿಂದಲೇ ದೇಶಾದ್ಯಂತ ಚಾಲನೆಗೆ ಬಂದಿತ್ತು.












Click it and Unblock the Notifications