Nitesh Rane: ಕೇರಳ ಮಿನಿ ಪಾಕಿಸ್ತಾನ, ಅದಕ್ಕೇ ರಾಹುಲ್-ಪ್ರಿಯಾಂಕಾ ಗೆಲ್ತಾರೆ ಎಂದ ಸಚಿವ
ಕೇರಳ ರಾಜ್ಯವನ್ನು ಮಿನಿ ಪಾಕಿಸ್ತಾನ ಎಂದು ಕರೆಯುವ ಮೂಲಕ ಮಹಾರಾಷ್ಟ್ರದ ನೂತನ ಸಚಿವ ನಿತೀಶ್ ರಾಣೆ ವಿವಾದಕ್ಕೆ ಗುರಿಯಾಗಿದ್ದಾರೆ. ಕೇರಳ ಮಿನಿ ಪಾಕಿಸ್ತಾನ ಆಗಿರುವುದಕ್ಕೇ ಅಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗೆಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಪುಣೆ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿಯ ಗೆಲುವಿನ ವರ್ಷಾಚರಣೆ ವೇಳೆ ರಾಣೆ ಈ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ಅವರಿಗೆ ಕೇರಳದಲ್ಲಿರುವ ಉಗ್ರಗಾಮಿಗಳು ಮಾತ್ರವೇ ವೋಟ್ ಹಾಕ್ತಾರೆ. ಇವರೆಲ್ಲ ಭಯೋತ್ಪಾದಕರ ನೆರವಿನಿಂದ ಸಂಸದರಾಗಿದ್ದಾರೆ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಮೀನುಗಾರಿಕಾ ಸಚಿವ ನಿತೇಶ್ ರಾಣೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಬಳಿಕ ರಾಣೆ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ್ದರಿಂದ ಕೇರಳ ಭಾರತದ ಭಾಗವಾಗಿದೆ ಎಂದು ಯೂಟರ್ನ್ ಹೊಡೆದಿದ್ದಾರೆ. ಆದರೆ, ಕೇರಳನ್ನು ಪಾಕಿಸ್ತಾನಕ್ಕೆ ಹೋಲಿಸಿದ ಹೇಳಿಕೆ ಸಮರ್ಥಿಸಿಕೊಂಡಿರುವ ಅವರು ಅವರನ್ನು ಧಾರ್ಮಿಕ ಮತಾಂತರ ಹಾಗೂ ಲವ್ ಜಿಹಾದ್ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ತಮ್ಮ ಹೇಳಿಕೆ ಇವು ಸಾಕ್ಷಿ ಹಾಗೂ ವಾಸ್ತವಿಕ ಎಂದು ರಾಣೆ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಪುತ್ರನಾಗಿರುವ ನಿತೀಶ್ ರಾಣೆ ಅವರು ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಂಕಾವ್ಲಿ ಕ್ಷೇತ್ರದಿಂದ ಜಯ ಸಾಧಿಸಿದ್ದರು. ಬಳಿಕ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಮಹಾಯುತಿ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರು ಖಾತೆಯ ಸಚಿವರಾಗಿ ರಾಣೆ ಪ್ರಮಾಣ ವಚನ ಸ್ವೀಕರಿಸಿದ್ದರು.

ರಾಣೆ ಹೇಳಿಕೆಗೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ನಿತೇಶ್ ರಾಣೆ ಅವರಿಂದ ಇಂತಹ ಮಾತನ್ನಲ್ಲದೆ ಬೇರೆ ಏನು ನಿರೀಕ್ಷಿಸಲು ಸಾಧ್ಯ? ಅವರು ಈ ಕೆಲಸ ಮಾಡುವುದಕ್ಕಾಗಿ ಸಚಿವರಾಗಿದ್ದಾರೆ. ಭಾರತದ ಸಾರ್ವಭೌಮತ್ವ ಮತ್ತು ಐಕ್ಯತೆಯನ್ನು ಕಾಪಾಡಬೇಕಾದ ಸಚಿವರು ಈ ರೀತಿ ದೇಶದ ಒಂದು ರಾಜ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿ, ಅಲ್ಲಿನ ಮತದಾರರನ್ನು ಭಯೋತ್ಪಾದಕರು ಎಂದು ಕರೆದಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಹಾಗೂ ಮೋದಿ ಅವರೇ ಉತ್ತರ ಕೊಡಬೇಕು. ರಾಣೆ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆ ಇದೆ ಎಂದಿದ್ದಾರೆ.
ಈ ಕಾರ್ಯಕ್ರಮದ ಭಾಷಣಕ್ಕೂ ಮುನ್ನ ಸಚಿವ ನಿತೀಶ್ ರಾಣೆ ಅವರು ಪ್ರಚೋದನಕಾರಿ ಭಾಷಣ ಮಾಡದಂತೆ ತಡೆಯಿರಿ ಎಂದು ಪೊಲೀಸರು ಕೂಡ ಈ ಕಾರ್ಯಕ್ರಮದ ಆಯೋಜಕರಿಗೆ ಹೇಳಿದ್ದರು. ಆದರೂ ರಾಣೆ ನಾಲಿಗೆ ಹರಿಬಿಟ್ಟಿದ್ದಾರೆ. ಅಲ್ಲದೆ ಈ ಹಿಂದೆಯೂ ರಾಣೆ ಅವರು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಕಳೆದ ತಿಂಗಳು ಕೂಡ ರಾಣೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ದೇಶದಲ್ಲಿ ಶೇ 90ರಷ್ಟು ಹಿಂದೂಗಳು ವಾಸಿಸುತ್ತಿದ್ದು, ಹಿಂದೂಗಳ ಹಿತಾಸಕ್ತಿಗಳ ಬಗ್ಗೆ ಚಿಂತಿಸುವುದು ಅಪರಾಧವಲ್ಲ ಎಂದಿದ್ದರು. ಮುಸ್ಲಿಂರನ್ನು ಕಂಡರೆ ಯಾಕಿಷ್ಟು ದ್ವೇಷ ಎಂಬ ಪ್ರಶ್ನೆಗೆ ಈ ರೀತಿ ರಾಣೆ ಉತ್ತರಿಸಿದ್ದರು. ಈ ರೀತಿ ದ್ವೇಷಪೂರಿತ ಹೇಳಿಕೆ ನೀಡಿರುವ ಆರೋಪದ ಮೇಲೆ ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ.












Click it and Unblock the Notifications