ಮಹಾರಾಷ್ಟ್ರ ಸಿ.ಎಂ ಏಕನಾಥ್ ಶಿಂಧೆ ನಾಳೆ ರಾಜೀನಾಮೆ, ಬಿಜೆಪಿಯ ಆ ನಾಯಕ ಹೊಸ ಸಿ.ಎಂ ?!
ಮಹಾರಾಷ್ಟ್ರದಲ್ಲಿ ಮಹಾಯುತಿ ಮತ್ತೆ ಸರ್ಕಾರ ರಚನೆ ಮಾಡುವುದಕ್ಕೆ ಬೇಕಾದ ಸಿದ್ಧತೆಗಳು ಜೋರಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಧೂಳಿಪಟವಾಗಿದೆ. ಮಹಾರಾಷ್ಟ್ರದಲ್ಲಿ ಇದೀಗ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಇದೀಗ ಮಹಾ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಾಳೆ (ನವೆಂಬರ್ 26ಕ್ಕೆ) ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇದೀಗ ಮಹಾ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆಯೇ ಗಂಭೀರ ಚರ್ಚೆಗಳು ನಡೆಯುತ್ತಿವೆ.
ಈ ಬಾರಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಪತ್ತೆಗೆ ಇಲ್ಲದಂತೆ ಹೀನಾಯವಾಗಿ ಸೋತಿದೆ. ಬಿಜೆಪಿ ಮೈತ್ರಿಕೂಟ ಮಹಾಯುತಿ ಹೊಸ ದಾಖಲೆ ಸೃಷ್ಟಿ ಮಾಡಿದ್ದು, ಅಮೋಘ ಸಾಧನೆ ಮಾಡಿದೆ. ಬಿಜೆಪಿ ಪಕ್ಷವು ಇಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ. ಹೀಗಾಗಿ, ಈ ಬಾರಿ ಬಿಜೆಪಿಯಿಂದಲೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೇ ಈ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಚುನಾವಣೆ ಫಲಿತಾಂಶದ ನಂತರ ಮಾತನಾಡಿದ್ದ ದೇವೇಂದ್ರ ಫಡ್ನವಿಸ್ ಅವರು ನಾವು ಮುಖ್ಯಮಂತ್ರಿ ಸಮಸ್ಯೆಯನ್ನು ಶೀಘ್ರ ಪರಿಹರಿಸಿಕೊಳ್ಳಲಿದ್ದೇವೆ ಎಂದಿದ್ದರು. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಿದ್ದು, ಹಲವು ದಶಕಗಳ ನಂತರ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಕಳೆದ ಬಾರಿ ಅಂದರೆ 2019ರಲ್ಲಿ 105 ಸೀಟುಗಳನ್ನು ಹಾಗೂ ಉಳಿದ ಎಲ್ಲಾ ಪಕ್ಷಗಳಿಗಿಂತಲೂ ಹೆಚ್ಚಿನ ಸ್ಥಾನದಲ್ಲಿ ಗೆದ್ದರೂ ಬಿಜೆಪಿಯಿಂದ ಯಾರೂ ಮುಖ್ಯಮಂತ್ರಿಯಾಗಿರಲಿಲ್ಲ. ಅಲ್ಲದೇ ದೇವೇಂದ್ರ ಫಡ್ನವಿಸ್ ಅವರು ಸರ್ಕಾರದ ಭಾಗವಾಗುವುದಕ್ಕೂ ಹಿಂದೇಟು ಹಾಕಿದ್ದರು. ಬಿಜೆಪಿ ಹೈಕಮಾಂಡ್‌ನ ಮಧ್ಯಪ್ರವೇಶದಿಂದ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಮಹಾರಾಷ್ಟ್ರದಲ್ಲಿ ಸಂಕಷ್ಟದ ಸಮಯದಲ್ಲೂ ಅವರು ಬಿಜೆಪಿಯನ್ನು ಮುನ್ನಡೆಸಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಗಳ ನಡುವೆ ತಮ್ಮ ಪಕ್ಷದ ಶಾಸಕರು ಹಾಗೂ ಮೈತ್ರಿ ಪಕ್ಷಗಳನ್ನು ಹೊಂದಾಗಿ ತೆಗೆದುಕೊಂಡು ಹೋಗುವಲ್ಲಿ ದೇವೇಂದ್ರ ಫಡ್ನವಿಸ್ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕ್ಲೀನ್‌ಸ್ವೀಪ್: ಮಹಾರಾಷ್ಟ್ರದಲ್ಲಿ ಈ ಬಾರಿ ಮಹಾಯುತಿ ಪಕ್ಷಗಳು ಮಹಾ ವಿಕಾಸ್ ಅಘಾಡಿ ಪಕ್ಷಗಳನ್ನು ಕ್ಲೀನ್ ಸ್ವೀಪ್ ಮಾಡಿವೆ. ಮಹಾರಾಷ್ಟ್ರದಲ್ಲಿ ಒಟ್ಟು 288 ಸದಸ್ಯರ (ವಿಧಾನಸಭೆ) ಸಂಖ್ಯೆ ಇದೆ. ಅದರಲ್ಲಿ ಮಹಾಯುತಿ ಮೈತ್ರಿಕೂಟವೇ 235 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ಬಿಜೆಪಿಯು 132 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹಾಯುತಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೇ ಇದು ಎಲ್ಲಾ ಮಿತ್ರಪಕ್ಷಗಳಿಗಿಂತ ಅತ್ಯಂತ ಹೆಚ್ಚಾಗಿದೆ. ಮಹಾಯುತಿ ಮೈತ್ರಿಕೂಟದ ಭಾಗವಾದ ಏಕನಾಥ್ ಶಿಂಧೆ (ಶಿವಸೇನೆ ಬಣ) 57 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ (ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಬಣ) ಎನ್‌ಸಿಪಿ 41 ಸ್ಥಾನಗಳಲ್ಲಿ ಗೆದ್ದಿದೆ. ಮಹಾರಾಷ್ಟ್ರದ ಮ್ಯಾಜಿಕ್ ಸಂಖ್ಯೆ 145 ಆಗಿದೆ.












Click it and Unblock the Notifications