Maharashtra Assembly Elections 2024: ಮುಂಬೈನಲ್ಲಿ ಮತಗಟ್ಟೆ ಸಂಖ್ಯೆಯಲ್ಲಿ ಹೆಚ್ಚಳ
ಮುಂಬೈ, ಸೆಪ್ಟೆಂಬರ್ 21: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಜನರು ಸಹ ಈ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಂಬೈ ನಗರದಲ್ಲಿ ಮತಗಟ್ಟೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2024ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 218 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ಸ್ಥಾಪನೆ ಮಾಡಲಾಗುತ್ತದೆ.
ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಈಗಾಗಲೇ ಚುನಾವಣೆಗೆ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ತಯಾರಿಗಳನ್ನು ಕೈಗೊಂಡಿವೆ. ಒಟ್ಟು ಎರಡು ಹಂತದಲ್ಲಿ ರಾಜ್ಯದಲ್ಲಿ ಮತದಾನ ನಡೆಸಲಾಗುತ್ತದೆ ಎಂಬುದು ಸದ್ಯದ ಮಾಹಿತಿ. ಇದರಲ್ಲಿ ಮುಂಬೈ ನಗರದಲ್ಲಿಯೂ ಮತದಾನ ಪ್ರಕ್ರಿಯೆಯನ್ನು ನಡೆಸಬೇಕಿದೆ.

ಎಷ್ಟು ಮತಗಟ್ಟೆಗಳು?; ಮುಂಬರುವ ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಗೆ ಮುಂಬೈ ನಗರದಲ್ಲಿ 10,111 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯ ವರದಿ ಅನ್ವಯ ಚುನಾವಣಾ ಆಯೋಗ ಈ ಕುರಿತು ತೀರ್ಮಾನ ಕೈಗೊಂಡಿದೆ. ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿರೆ ಮತಟ್ಟೆಗಳ ಸಂಖ್ಯೆ 218 ಹೆಚ್ಚಾಗಲಿದೆ. ಇದರಿಂದಾಗಿ ಪ್ರತಿ ಮತಗಟ್ಟೆಯ ಮತದಾರರ ಸಂಖ್ಯೆ 1500 ರಿಂದ 1200ಕ್ಕೆ ಇಳಿಕೆಯಾಗಲಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಮುಂಬೈ ನಗರದಲ್ಲಿ 2509 ಮತ್ತು ಉಪ ನಗರದಲ್ಲಿ 7,384 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಈಗ ಪುನಃ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ ಕಾರಣ ಹೊಸ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ವಿಧಾನಸಭೆ ಚುನಾವಣೆಗೆ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ.
ಮತಗಟ್ಟೆಗಳ ಸಂಖ್ಯೆಯ ಏರಿಕೆಯಿಂದ ಪಾರದರ್ಶಕತೆ ಮತ್ತು ಶಾಂತಿಯುತ ಮತದಾನಕ್ಕೆ ಸಹಕಾರಿಯಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿದೆ. ಇದರಿಂದಾಗಿ ಮುಂಬೈ ನಗರ ಮತ್ತು ಉಪ ನಗರದಲ್ಲಿ ಚುನಾವಣಾ ಪ್ರಕ್ರಿಯೆಗಳು ಸುಲಭವಾಗಿ ನಡೆಯಲಿವೆ ಎಂದು ತಿಳಿಸಿದೆ.
ಮತದಾನಕ್ಕೆ ಸಹಾಯಕವಾಗಲು ಈಗಾಗಲೇ ಮುಂಬೈ ಮಹಾನಗರ ಪಾಲಿಕೆ 'ನೋ ಯುವರ್ ಪೊಲಿಂಗ್ ಸ್ಟೇಷನ್' ಎಂಬ ಅಭಿಯಾನವನ್ನು ಆರಂಭಿಸಿದೆ. ಪಾಲಿಕೆಯ ಸಿಬ್ಬಂದಿ ಹೊಸ ಮತಗಟ್ಟೆ ತೆರೆಯಲಾದ ಪ್ರದೇಶಗಳ ಮನೆಗಳಿಗೆ ಭೇಟಿ ನೀಡಿ, ಮತಗಟ್ಟೆ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಇ-ಮೇಲ್, ಎಸ್‌ಎಂಎಸ್ ಮೂಲಕ ಮತದಾರರಿಗೆ ಮಾಹಿತಿ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿ 76,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರದಲ್ಲಿದೆ.
ಮುಂಬರುವ ಚುನಾವಣೆಯನ್ನು ಸಹ ಈ ಮೈತ್ರಿಕೂಟದ ಮೂಲಕವೇ ಎದುರಿಸಲಿದ್ದು, ಈಗಾಗಲೇ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮುಂಬೈ ನಗರದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಪಕ್ಷಕ್ಕೆ ಸೀಟು ಬಿಟ್ಟುಕೊಡಲು ಶಿವಸೇನೆ, ಎನ್‌ಸಿಪಿ ಒಪ್ಪಿಗೆಯನ್ನು ನೀಡಿವೆ ಎಂಬ ಮಾಹಿತಿ ಇದೆ.
ಮಹಾರಾಷ್ಟ್ರ ರಾಜ್ಯದ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಈಗಾಗಲೇ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ, "ಮಹಾರಾಷ್ಟ್ರದಲ್ಲಿ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಎರಡು ಹಂತದಲ್ಲಿ ಚುನಾವಣೆ ನಡೆದರೆ ಸೂಕ್ತ. ಈ ಕುರಿತು ಚುನಾವಣಾ ಆಯೋಗಕ್ಕೆ ಸಹ ಮನವಿ ಮಾಡಲಾಗಿದೆ" ಎಂದು ಹೇಳಿದ್ದಾರೆ. ಜಮ್ಮು & ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಜಾರ್ಖಂಡ್ ಮತ್ತು ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.












Click it and Unblock the Notifications