Maharashtra Assembly Elections 2024: ಮಹಾರಾಷ್ಟ್ರದಲ್ಲಿ ಒಟ್ಟು ಎಷ್ಟು ಮತದಾರರು?
ಮುಂಬೈ, ಅಕ್ಟೋಬರ್ 15: ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಿದೆ.

ಕೇಂದ್ರ ಚುನಾವಣಾ ಆಯೋಗದ ಮಾಹಿತಿ ಪ್ರಕಾರ 15/10/2024ರ ಮಾಹಿತಿಯಂತೆ 9.63 ಕೋಟಿ ಮತದಾರರು ಈ ಬಾರಿಯ ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.
9.63 ಕೋಟಿ ಮತದಾರರಲ್ಲಿ 4.97 ಕೋಟಿ ಪುರುಷರು, 4.66 ಕೋಟಿ ಮಹಿಳೆಯರು, 1.85 ಕೋಟಿ ಯುವ ಮತದಾರರು (20-29) ಮತದಾರರು. 20.93 ಲಕ್ಷ (18-19) ಮತದಾರರು ಮೊದಲ ಬಾರಿಗೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಆಯೋಗ ಹೇಳಿದೆ.
ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿವೆ. 22/10/2024ರಂದು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ. 29/10/2024 ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ.
30/10/2024ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 4/11/2024 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಒಂದೇ ಹಂತದಲ್ಲಿ 20/11/2024ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. 23/11/2023ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾ ಕಾರ್ಯಗಳು 25/11/2024ರಂದು ಮುಕ್ತಾಯಗೊಳ್ಳಲಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 1,00,186 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 52,789 ಪ್ರದೇಶಗಳಲ್ಲಿ ಮತಗಟ್ಟೆ ಸ್ಥಾಪನೆಯಾಗಲಿದೆ. ಇವುಗಳಲ್ಲಿ ನಗರದಲ್ಲಿ 42,604, ಗ್ರಾಮೀಣ ಭಾಗದಲ್ಲಿ 57,582 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಪ್ರತಿ ಮತಗಟ್ಟೆಗೆ ಕನಿಷ್ಠ ಮತದಾರರು 960.
ಅಂಗವಿಕಲರು 299, ಮಹಿಳೆಯರು 388 ಮತಗಟ್ಟೆ ನಿರ್ವಹಣೆ ಮಾಡಲಿದ್ದಾರೆ. ಮಾದರಿ ಮತಗಟ್ಟೆಗಳು 530. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಆಡಳಿತದಲ್ಲಿದೆ. ಈ ಬಾರಿಯ ಚುನಾವಣೆಯನ್ನು ಸಹ ಮೈತ್ರಿಕೂಟದ ಮೂಲಕವೇ ಎದುರಿಸಲು ಮೂರು ಪಕ್ಷಗಳು ತೀರ್ಮಾನ ಮಾಡಿದ್ದು, ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ.
ರಾಜ್ಯದ ವಿರೋಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿವೆ. ಈ ಬಾರಿಯ ಚುನಾವಣೆಯನ್ನು ಮೈತ್ರಿಕೂಟದ ಮೂಲಕವೇ ಮೂರು ಪಕ್ಷಗಳು ಎದುರಿಸಲಿವೆ.
2024ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಒಂದಾಗಿದೆ. ಅಲ್ಲದೇ ಬಿಜೆಪಿಗೆ ಇದು ಪ್ರಮುಖವಾದ ರಾಜ್ಯವಾಗಿದೆ. ಆರ್‌ಎಸ್ಎಸ್ ಕೇಂದ್ರ ಕಛೇರಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ತವರು ರಾಜ್ಯ ಮಹಾರಾಷ್ಟ್ರ. ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ದೇಶದ ವಾಣಿಜ್ಯ ನಗರಿ ಮುಂಬೈ ಇರುವ ರಾಜ್ಯದ ಅಧಿಕಾರ ಹಿಡಿಯಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ.












Click it and Unblock the Notifications