Maharashtra Election 2024 Result: ಗೆದ್ದು ಬೀಗಿದ ಸಿಎಂ ಏಕನಾಥ್ ಶಿಂಧೆ, ಅಂತರ ಎಷ್ಟು?
ಮುಂಬೈ, ನವೆಂಬರ್ 23: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಜಯಗಳಿಸುವ ಮೂಲಕ ಮಹಾಯತಿ ಮೈತ್ರಿಕೂಟ ದಾಖಲೆಯನ್ನು ಮಾಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಮಹಾಯತಿ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಸದ್ಯ ಮಹಾಯತಿ ಮೈತ್ರಿಕೂಟ 230 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ ಎಣಿಕೆ ಶನಿವಾರ ನಡೆಯುತ್ತಿದೆ. ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊಪ್ರಿ-ಪಂಚಖಾಡಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ ಅವರು 1,59,060 ಮತಗಳನ್ನು ಪಡೆದು, 1,20,717 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕ್ಷೇತ್ರದಲ್ಲಿ ಕೇದಾರ್ ದಿಘೆ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಅಭ್ಯರ್ಥಿಯಾಗಿದ್ದರು. ಅವರು 38,343 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದ ಮನೋಜ್ ಶಿಂಧೆ ಬಂಡಾಯ ಅಭ್ಯರ್ಥಿಯಾಗಿದ್ದರು. ಇದರಿಂದಾಗಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರು ಚುನಾವಣೆಯಲ್ಲಿ 1,653 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಕಂಡಿದ್ದಾರೆ.
ಮುಖ್ಯಮಂತ್ರಿ ಪಟ್ಟ ಕೈತಪ್ಪಲಿದೆ?; ಈ ಬಾರಿಯ ಚುನಾವಣೆಯಲ್ಲಿ ಮಹಾಯತಿ ಮೈತ್ರಿಕೂಟ ಗೆಲುವು ಸಾಧಿಸಿದರೂ ಸಹ ರಾಜ್ಯದ ಹಾಲಿ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪಟ್ಟ ಸಿಗುವುದಿಲ್ಲ. 2022ರಿಂದ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದು, ಮುಖ್ಯಮಂತ್ರಿ ಹುದ್ದೆ ಪಕ್ಷಕ್ಕೆ ಸಿಗಲಿದೆ.
ಥಾಣೆ ಜಿಲ್ಲೆಯಲ್ಲಿ ಕೊಪ್ರಿ-ಪಂಚಖಾಡಿ ವಿಧಾನಸಭಾ ಕ್ಷೇತ್ರ ಬರುತ್ತದೆ. ಥಾಣೆ ನಗರ ಏಕನಾಥ್ ಶಿಂಧೆ ಭದ್ರಕೋಟೆ. ನಾಲ್ಕು ಅವಧಿಗೆ ಅವರು ಕೊಪ್ರಿ-ಪಂಚಖಾಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಪ್ರಬಲ ಪೈಪೋಟಿಯನ್ನು ನಿರೀಕ್ಷೆ ಮಾಡಲಾಗಿತ್ತು.
ಏಕನಾಥ್ ಶಿಂಧೆ ಎದುರಾಳಿಯಾಗಿದ್ದ ಕೇದಾರ್ ದಿಘೆ ಏಕನಾಥ್ ಶಿಂಧೆಯವರ ಮಾರ್ಗದರ್ಶಕ ಆನಂದ್ ದಿಘೆ ಅವರ ಸೋದರಳಿಯ. ಏಕನಾಥ್ ಶಿಂಧೆ ಸೋಲಿಸಿ ಭದ್ರಕೋಟೆಯನ್ನು ಒಡೆಯಬೇಕು ಎಂದು ಎಂವಿಎ ಮೈತ್ರಿಕೂಟ ಕೇದಾರ್ ದಿಘೆ ಕಣಕ್ಕಿಳಿಸಿತ್ತು.
ಸಂಜೆ 6.16ರ ಮಾಹಿತಿಯಂತೆ ಮಹಾಯತಿ ಮೈತ್ರಿಕೂಟ 230 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಂವಿಎ ಮೈತ್ರಿಕೂಟ 51 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 133, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ 15, ಶಿವಸೇನೆ (ಉದ್ಧವ್ ಠಾಕ್ರೆ ಬಣ) 20, ಎನ್‌ಸಿಪಿ (ಶರದ್ ಪವಾರ್) 10, ಎಸ್‌ಪಿ 2, ಇತರರು/ ಪಕ್ಷೇತರರು 10 ಸೀಟುಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಫಲಿತಾಂಶದ ಸ್ಪಷ್ಟ ಚಿತ್ರಣ ರಾತ್ರಿ ವೇಳೆಗೆ ದೊರೆಯುವ ನಿರೀಕ್ಷೆ ಇದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ ಬಿಜೆಪಿ 77, ಶಿವಸೇನೆ (ಏಕನಾಥ್ ಶಿಂಧೆ ಬಣ) 37, ಎನ್‌ಸಿಪಿ (ಅಜಿತ್ ಪವಾರ್ ಬಣ) 32, ಶಿವಸೇನೆ (ಉದ್ಧವ್ ಠಾಕ್ರೆ ಬಣ) 14, ಕಾಂಗ್ರೆಸ್ 8, ಎನ್‌ಸಿಪಿ (ಶರದ್ ಪವಾರ್) 6, ಸಮಾಜವಾದಿ ಪಕ್ಷ 2 ಸೀಟುಗಳಲ್ಲಿ ಜಯಗಳಿಸಿವೆ.












Click it and Unblock the Notifications