Exit Poll 2024: ಮಹಾರಾಷ್ಟ್ರದಲ್ಲಿ ಎಲ್ಲಾ ಉಲ್ಟಾಪಲ್ಟಾ? ದೈನಿಕ್ ಬಾಸ್ಕರ್ ಎಕ್ಸಿಟ್ ಫೋಲ್‌ನಲ್ಲಿ ಅಚ್ಚರಿಯ ಅಂಕಿಅಂಶ
ಮುಂಬೈ, ನವೆಂಬರ್ 20: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಇಂದು ಮತದಾನ ಪೂರ್ಣಗೊಂಡಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮಹಾಯುತಿ ಮತ್ತು ಮಹಾವಿಕಾಸ್ ಅಘಾಡಿ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿಯಿದ್ದರೂ ಮಹಾಯುತಿಯತ್ತ ಜನರ ಒಲವು ಹೆಚ್ಚಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತದಾನದ ಬಳಿಕ ಎಲ್ಲಾ ಸುದ್ದಿ ವಾಹಿನಿ ಸಮೀಕ್ಷೆಗಳಲ್ಲೂ ಬಿಜೆಪಿ-ಎನ್‌ಸಿಪಿ-ಶಿವಸೇನೆ ಶಿಂಧೆ ಬಣದ ಮೈತ್ರಿಕೂಟವೇ ಅಧಿಕಾರಕ್ಕೇರುವುದು ಪಕ್ಕಾ ಎಂದು ಹಲವು ಸಮೀಕ್ಷೆಗಳು ತಿಳಿಸಿದ್ರೆ, ದೈನಿಕ್ ಬಾಸ್ಕರ್ ಎಕ್ಸಿಟ್ ಫೋಲ್‌ನಲ್ಲಿ ಅಚ್ಚರಿಯ ಅಂಕಿಅಂಶ ಪ್ರಕಟವಾಗಿದೆ.

ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಿತು. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 288 ಆಗಿದ್ದು, ರಾಜ್ಯದಲ್ಲಿ ಸರ್ಕಾರ ರಚಿಸಲು ಪಕ್ಷ ಅಥವಾ ಮೈತ್ರಿಕೂಟವು ಪಡೆಯಬೇಕಾದ ಬಹುಮತದ ಸಂಖ್ಯೆ 145 ಆಗಿದೆ. ಮಹಾರಾಷ್ಟ್ರ ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಟವಾಗಿದೆ. ಇದರ ಪ್ರಕಾರ NDAಗೆ 125ರಿಂದ 140 ಸೀಟುಗಳು, INDI ಮೈತ್ರಿಗೆ 135 ರಿಂದ 150 ಸ್ಥಾನಗಳು ಬರಲಿವೆ ಹಾಗೂ ಪಕ್ಷೇತರ 20-25 ಸ್ಥಾನ ಪಡೆಯಬಹುದು ಎಂದು ತಿಳಿಸಿದೆ.
ಬಿಜೆಪಿ 149 ಸ್ಥಾನಗಳಲ್ಲಿ, ಶಿವಸೇನೆ 81 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿರೋಧ ಪಕ್ಷದ ಮೈತ್ರಿಯಲ್ಲಿ ಕಾಂಗ್ರೆಸ್ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಶಿವಸೇನೆ (ಯುಬಿಟಿ) 95, ಮತ್ತು ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿವೆ. ಪ್ರತಿಪಕ್ಷ ಮಹಾವಿಕಾಸ್ ಅಘಾಡಿ (ಎಂವಿಎ)ಯಲ್ಲಿ ಕಾಂಗ್ರೆಸ್, ಶಿವಸೇನೆ ಮತ್ತು NCP (ಶರದ್ ಪವಾರ್ ಬಣ) ಸೇರಿದೆ.
2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44, ಎನ್‌ಸಿಪಿ 54 ಮತ್ತು ಇತರರು 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ-ಶಿವಸೇನೆ ಮೈತ್ರಿಮಾಡಿಕೊಂಡು, ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ್ದವು. ಆದರೆ, ಇದೀಗ 2024ರ ಚುನಾವಣಾ ಚಿತ್ರಣ ಸಂಪೂರ್ಣ ಬದಲಾಗಿದೆ. ನವೆಂಬರ್ 23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
2024ನೇ ಸಾಲಿನ ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳಿಂದ ತಿಳಿದು ಬಂದಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು 145 ಮ್ಯಾಜಿಕ್ ನಂಬರ್ ಆಗಿದೆ. ಮಹಾರಾಷ್ಟ್ರ ಫಲಿತಾಂಶವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ ಎಂದು ಹೇಳಲಾಗಿದೆ. ಇನ್ನು ಮಹಾರಾಷ್ಟ್ರದ ಮ್ಯಾಜಿಕ್ ನಂಬರ್‌ನ ಸಮೀಪದಲ್ಲೇ ಚುನಾವಣೆ ಫಲಿತಾಂಶ ಅಂದಾಜಿಸಿರುವುದರಿಂದ ಕೊನೆಯ ಕ್ಷಣದಲ್ಲಿ ಏನಾದರೂ ಬದಲಾವಣೆ ಆಗಬಹುದೇ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications