Maha Kumbh Mela 2025: ಕುಟುಂಬವನ್ನೇ ದಿಕ್ಕರಿಸಿ ಮಹಾಕುಂಭಕ್ಕೆ ಬಂದ ಅಬುಧಾಬಿಯ ಮುಸ್ಲಿಂ ಮಹಿಳೆ- ಆಕೆ ಹೇಳಿದ್ದೇನು?
ಲಕ್ನೋ ಜನವರಿ 17: ವಿದೇಶದ ಮುಸ್ಲಿಂ ಮಹಿಳೆಯೊಬ್ಬರು ಭಾರತದ ಪ್ರಸಿದ್ಧ ಮಹಾಕುಂಭದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಬುಧಾಬಿಯ ಮುಸ್ಲಿಂ ಮಹಿಳೆ ಸ್ಯಾಲಿ ಎಲ್ ಅಜಾಬ್ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಭಾಗವಹಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಜೊತೆಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಹೊಗಳಿದ್ದಾರೆ.
ಮಹಾ ಕುಂಭಮೇಳದಲ್ಲಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಹಾಕುಂಭದಲ್ಲಿ ಸ್ನಾನ ಮಾಡಲು ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಗುರುವಾರ 10 ದೇಶಗಳ 21 ಜನಪ್ರತಿನಿಧಿಗಳ ನಿಯೋಗ ಮಹಾ ಕುಂಭಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದೆ.

ಇದಲ್ಲದೆ ಈ ವಿದೇಶಿ ಜನಪ್ರತಿನಿಧಿಗಳ ಗುಂಪು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಮಹಾ ಕುಂಭಮೇಳದ ಧಾರ್ಮಿಕ ಮಹತ್ವವನ್ನು ಅರ್ಥಮಾಡಿಕೊಂಡಿದ್ದು ಮಾತ್ರವಲ್ಲದೆ ಭಾರತೀಯ ಸಂಸ್ಕೃತಿಯ ಅಸಾಧಾರಣ ಅಂಶಗಳನ್ನು ಅನುಭವಿಸಿದ್ದಾರೆ. ಅಲ್ಲದೆ ವಿಶ್ವದ ಅತಿದೊಡ್ಡ ಧಾರ್ಮಿಕ ಮಹಾ ಕುಂಭ ಮೇಳಕ್ಕಾಗಿ ಮಾಡಿದ ವ್ಯವಸ್ಥೆಗಳಿಗಾಗಿ ಅಂತರರಾಷ್ಟ್ರೀಯ ಸಂದರ್ಶಕರು ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಮಹಾ ಕುಂಭ ಮೇಳದ ಬಗ್ಗೆ ಅಬುಧಾಬಿಯ ಮುಸ್ಲಿಂ ಮಹಿಳೆ ಮೆಚ್ಚುಗೆ
ಮಹಾ ಕುಂಭಕ್ಕೆ ಬಂದಿದ್ದ 21 ಸದಸ್ಯರ ವಿದೇಶಿ ನಿಯೋಗದ ಏಕೈಕ ಮುಸ್ಲಿಂ ಮಹಿಳಾ ಸದಸ್ಯೆ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸ್ಯಾಲಿ ಎಲ್ ಅಜಾಬ್ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ ನಂತರ ಸಾಕಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. 'ನಾನು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿದ್ದೇನೆ. ಇದೊಂದು ಅದ್ಭುತವಾದ ಘಟನೆ. ಇದು ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ. ಇಲ್ಲಿ ಎಲ್ಲವೂ ಚೆನ್ನಾಗಿ ಸಂಘಟಿತವಾಗಿದೆ. ಯುಪಿ ಸರ್ಕಾರ ರಕ್ಷಣೆಗಾಗಿ ಪೊಲೀಸ್ ವ್ಯವಸ್ಥೆಗಳನ್ನು ಮಾಡಿದೆ. 144 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆಯೋಜಿಸಲಾಗುತ್ತಿದೆ. ಇಲ್ಲಿನ ವ್ಯವಸ್ಥೆ ಕಂಡು ನನಗೆ ತುಂಬಾ ಖುಷಿಯಾಗಿದೆ' ಎಂದು ಸ್ಯಾಲಿ ಹೇಳಿದರು.
ಅಲ್ಲದೆ ಬ್ಲಾಗರ್ ಕೂಡ ಆಗಿರುವ ಸ್ಯಾಲಿ ಎಲ್ ಅಜಾಬ್ ಈ ಮಹಾಕುಂಭ ಮೇಳದ ಇತಿಹಾಸವನ್ನೂ ಹೇಳಿದರು. '12 ವರ್ಷಗಳ ನಂತರ ಕುಂಭ ಮೇಳ ನಡೆಯುತ್ತಿದೆ. ಆರು ವರ್ಷಗಳ ನಂತರ ಅರ್ಧ ಕುಂಭ ಮತ್ತು ಭಾರತದ ನಾಲ್ಕು ಸ್ಥಳಗಳಲ್ಲಿ ನಡೆಯುವ ಕುಂಭ ಮೇಳದ ಬಗ್ಗೆ' ಅವರು ಮಾತನಾಡಿದರು.

"ನಾನು ಈ ರೀತಿಯ ಘಟನೆಯನ್ನು ಎಂದಿಗೂ ನೋಡಿಲ್ಲ" ಎಂದು ಸ್ಯಾಲಿ ಹೇಳುತ್ತಾರೆ. 'ಬೇರೆಲ್ಲಿಯೂ ಕೂಡ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿರುವುದನ್ನು ನಾನು ನೋಡೇ ಇಲ್ಲ, ಕೇಳಿ ಕೂಡ ಇಲ್ಲ. ಕೋಟ್ಯಾಂತರ ಜನ ಸೇರುವ ಈ ಸ್ಥಳದಲ್ಲಿ ಯುಪಿ ಸರ್ಕಾರ ಅತ್ಯಾದ್ಬುತವಾಗಿ ವ್ಯವಸ್ಥೆಗಳನ್ನು ಮಾಡಿ ನಮ್ಮನ್ನು ಆಶ್ಚರ್ಯಗೊಳಿಸಿದೆ. ಇಲ್ಲಿಗೆ ಬಂದ ನಂತರವೂ ನಾನು ಮನೆಯಲ್ಲಿಯೇ ಇದ್ದಂತೆ ಭಾಸವಾಗುತ್ತಿದೆ. ಒಂದು ತಿಂಗಳಲ್ಲಿ 40 ಕೋಟಿ ಜನರು ಬರುತ್ತಾರೆ ಎಂದು ನಾನು ಕೇಳಲ್ಪಟ್ಟೆ. ಇಲ್ಲಿನ ಏಕತೆಯಿಂದ ಇಡೀ ಜಗತ್ತು ಕಲಿಯಬೇಕು ಎಂದು ಸ್ಯಾಲಿ ಹೊಗಳಿದ್ದಾರೆ. ಜೊತೆಗೆ ಸ್ಯಾಲಿ ಅವರು ತಮ್ಮ ದೇಶದ ಜನರಿಗೆ ಭಾರತದಲ್ಲಿ ನಡೆದ ಈ ಭವ್ಯ ಕಾರ್ಯಕ್ರಮ ಮತ್ತು ಊಹಿಸಲಾಗದ ವ್ಯವಸ್ಥೆಗಳ ಬಗ್ಗೆ ತಿಳಿಸಿದ್ದಾರೆ.
ಭಾರತೀಯ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಮೆಚ್ಚುಗೆ
ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಬಾಹ್ಯ ಪ್ರಚಾರ ಮತ್ತು ಸಾರ್ವಜನಿಕ ರಾಜತಾಂತ್ರಿಕ ವಿಭಾಗವು ಅಂತಾರಾಷ್ಟ್ರೀಯ ಸುದ್ದಿ ಪ್ರಚಾರಕರಾದ ಖ್ಯಾತ ಬ್ಲಾಗರ್‌ಗಳು ಹಾಗೂ ಜನಪ್ರತಿನಿಧಿಗಳ ನಿಯೋಗವನ್ನು ಮಹಾ ಕುಂಭ ಮೇಳಕ್ಕೆ ಆಹ್ವಾನಿಸಿದೆ. ಈ ಅಂತಾರಾಷ್ಟ್ರೀಯ ಜನಪ್ರತಿನಿಧಿಗಳ ನಿಯೋಗ ಕುಂಭಮೇಳದ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ತಿಳಿದುಕೊಂಡು ತಮ್ಮ ದೇಶದಲ್ಲಿ ಈ ಬಗ್ಗೆ ಪ್ರಚಾರ ಮಾಡುವ ಮೂಲಕ ಭಾರತದ ಭವ್ಯ ಸಂಸ್ಕೃತಿಯನ್ನು ಸಾರಲಿದೆ. ಇದಕ್ಕಾಗಿ ಈ ತಂಡ ಮಹಾ ಕುಂಭಮೇಳದ ಪ್ರಾಚೀನ ಸಂಪ್ರದಾಯ ಮತ್ತು ಭಾರತೀಯ ಸಂಸ್ಕೃತಿಯ ವೈಭವದ ಬಗ್ಗೆ ಸಂತರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ.
ಈ ನಿಯೋಗದ ತಂಡದವರು ಬುಧವಾರ ಮಹಾಕುಂಭಕ್ಕೆ ಆಗಮಿಸಿ, ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸಿದ ಅರೈಲ್‌ನಲ್ಲಿರುವ ಟೆಂಟ್ ಸಿಟಿಯಲ್ಲಿ ತಂಗಿದ್ದಾರೆ.
ಅಂತರರಾಷ್ಟ್ರೀಯ ಪ್ರತಿನಿಧಿಗಳು ಸಂತರ ಬೋಧನೆಗಳಿಂದ ಅವರು ಪ್ರಭಾವಿತರಾಗಿದ್ದಾರೆ. ಬಳಿಕ ಭಾರತೀಯ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿಗಳ ಈ ಬೇಟಿ ಜಗತ್ತಿಗೆ ಒಂದು ಪ್ರಬಲ ಸಂದೇಶವನ್ನು ರವಾನಿಸಿದೆ. ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ ಜನರು ಸಾಮರಸ್ಯದಿಂದ ಒಟ್ಟಿಗೆ ಬರಬಹುದು ಎಂಬುದನ್ನು ತೋರಿಸಿದೆ.
ಇದರಲ್ಲಿ ಫಿಜಿ, ಫಿನ್‌ಲ್ಯಾಂಡ್, ಗಯಾನಾ, ಮಲೇಷ್ಯಾ, ಮಾರಿಷಸ್, ಸಿಂಗಾಪುರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರತಿನಿಧಿಗಳು ಸೇರಿದ್ದಾರೆ. ಅಂತರರಾಷ್ಟ್ರೀಯ ಈ ಜನಪ್ರತಿನಿಧಿಗಳ ನಿಯೋಗ ತಮ್ಮ ಭೇಟಿಯ ಸಮಯದಲ್ಲಿ ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಧರ್ಮದಲ್ಲಿನ ಏಕತೆಯನ್ನು ಕಂಡು ಶ್ಲಾಘಿಸಿದೆ. ಹೀಗೆ ಭಾರತದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಶ್ಲಾಘಿಸಿದವರ ಪೈಕಿ ಸ್ಯಾಲಿ ಎಲ್ ಅಜಾಬ್ ಕೂಡ ಒಬ್ಬರಾಗಿದ್ದಾರೆ. ಹಾಗಾದರೆ ಸ್ಯಾಲಿ ಯಾರು?
ಸ್ಯಾಲಿ ಎಲ್ ಅಜಾಬ್ ಯಾರು?
ಸ್ಯಾಲಿ ಎಲ್ ಅಜಾಬ್ ಅವರ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಸ್ಯಾಲಿ ಅವರು ಸಿವಿಲ್ ಎಂಜಿನಿಯರ್ ಆಗಿದ್ದು, ಅವರು ತಮ್ಮ ಬ್ಲಾಗ್‌ನಲ್ಲಿ ಆಹಾರ ಮತ್ತು ಪ್ರಯಾಣದ ಬಗ್ಗೆ ಮಾತನಾಡುತ್ತಾರೆ. ಅವರ ವೀಡಿಯೊಗಳು ಪ್ರಪಂಚದಾದ್ಯಂತ ವಿವಿಧ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಒಳಗೊಂಡಿವೆ.
ಜೊತೆಗೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಅವರು ಜಗತ್ತಿನಲ್ಲಿ ನಡೆಯುವ ಕೆಲ ವಿಶೇಷ ಘಟನೆಗಳನ್ನು, ವಿಶೇಷ ಸ್ಥಳಗಳನ್ನು ಹಾಗೂ ಕಾರ್ಯಕ್ರಮಗಳನ್ನು ಸೆರೆ ಹಿಡಿದು ಅದರ ಬಗ್ಗೆ ಮಾಹಿತಿಯನ್ನು ತಮ್ಮ ದೇಶದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ ಸ್ಯಾಲಿ ಅವರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 3.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು. ಒಬ್ಬ ಮುಸ್ಲಿಂ ಮಹಿಳೆ ಭಾರತದ ಸಂಸ್ಕೃತಿ ಸಂಪ್ರದಾಯವನ್ನು ಹೊಗಳತ್ತಿರುವುದನ್ನು ನಿಜಕ್ಕೂ ವಿಶೇಷವಾಗಿದೆ.












Click it and Unblock the Notifications