MP: ಮದ್ಯ ಕದ್ದವರು ಯಾರೋ, ಮಾರಿದವರು ಯಾರೋ, ಕೆಳಗೆ ಚೆಲ್ಲಿದ ಇಲಿಗಳಿಗೆ ಆಯ್ತು ಜೈಲು ಶಿಕ್ಷೆ!
ಭೋಪಾಲ್ ನವೆಂಬರ್ 9: ವಶಪಡಿಸಿಕೊಂಡ ಮದ್ಯ ಸೇವಿಸಿದ್ದಕ್ಕಾಗಿ ಪೊಲೀಸರು ಇಲಿಗಳನ್ನು ಜೈಲಿಗೆ ಹಾಕಿದ್ದಾರೆ. ಆಶ್ಚರ್ಯ ಎನಿಸಿದರೂ ಇದು ನಿಜವೇ. ಮಧ್ಯಪ್ರದೇಶದಲ್ಲಿ ಇಂತಹ ಒಂದು ವಿಚಿತ್ರ ಘಟನೆ ನಡೆದಿದೆ.
ಮಧ್ಯಪ್ರದೇಶ ಪೊಲೀಸರ ಪ್ರಕಾರ, ಪೊಲೀಸ್ ಗೋದಾಮಿನಲ್ಲಿ ಸಂಗ್ರಹಿಸಲಾದ ಹಲವಾರು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಇಲಿಗಳು ಖಾಲಿ ಮಾಡಿವೆ. ಇಲಿಗಳು ಪ್ಲಾಸ್ಟಿಕ್ ಬಾಟಲಿಗಳನ್ನು ಕಚ್ಚಿದ್ದರಿಂದ ಮದ್ಯವು ಸೋರಿಕೆಯಾಗಿದೆ. ಸುಮಾರು 60 ರಿಂದ 65 ಸಣ್ಣ ಪ್ಲಾಸ್ಟಿಕ್ ಬಾಟಲಿಗಳು ಖಾಲಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪೊಲೀಸರು ಒಂದು ಇಲಿಯನ್ನು ಹಿಡಿದು ಬೋನಿನಲ್ಲಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ಪ್ರತ್ಯೇಕ ಘಟನೆಯಲ್ಲ ಇಂತಹ ಹತ್ತಾರು ಘಟನೆಗಳು ಠಾಣೆಯಲ್ಲಿ ನಡೆಯುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಠಾಣೆ ಕಟ್ಟಡ ಸಾಕಷ್ಟು ಹಳೆಯದಾಗಿದ್ದು, ಜಪ್ತಿ ಮಾಡಿದ ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಗೋದಾಮು ಇಲಿಗಳ ಆಟದ ಮೈದಾನವಾಗಿ ಮಾರ್ಪಟ್ಟಿದೆ ಎಂದು ವಿವರಿಸಿದರು.
ಅಷ್ಟೇ ಅಲ್ಲ ನಾವು ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಗಾಂಜಾ ಚೀಲಗಳನ್ನು ಇಲಿಗಳು ಕಡಿಯುತ್ತಿವೆ ಎಂದು ಅವರು ಹೇಳಿದರು. ಇದನ್ನು ತಡೆಯಲು ನಾವು ಗಾಂಜಾವನ್ನು ಕಬ್ಬಿಣದ ಡಬ್ಬದಲ್ಲಿ ಸಂಗ್ರಹಿಸಿಡುತ್ತಿದ್ದೇವೆ.
ಇಲಿಗಳು ವಶಪಡಿಸಿಕೊಂಡ ವಸ್ತುಗಳಿಗೆ ಹಾನಿಯನ್ನುಂಟುಮಾಡಿದ್ದು ಮಾತ್ರವಲ್ಲದೆ ಪ್ರಮುಖ ದಾಖಲೆಗಳಿಗೂ ಅಪಾಯವನ್ನುಂಟುಮಾಡಿವೆ. ಇದರಿಂದ ಪೊಲೀಸರು ಕಡತಗಳನ್ನು ಪ್ರತ್ಯೇಕವಾಗಿ ಮತ್ತು ಎತ್ತರದಲ್ಲಿ ಅಂದರೆ ಇಲಿಗಳ ಕೈಗೆಟುಕದಂತೆ ಸಂಗ್ರಹಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ. ಇಲಿಗಳ ಕಾಟದಿಂದ ಮುಕ್ತಿ ಬೇಗ ಸಿಗುವಂತಾಗಬೇಕು ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ಮಥುರಾದಲ್ಲಿ ಗಾಂಜಾ ತಿಂದ ಇಲಿಗಳು
ಇತ್ತೀಚಿಗೆ ಇಂಥಹದ್ದೇ ಘಟನೆ ಮಥುರಾದಲ್ಲಿ ನಡೆದಿತ್ತು. 500 ಕೆಜಿ ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಮಥುರಾ ಪೊಲೀಸರು ಕಳೆದ ವರ್ಷ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದ ಘಟನೆ ನಡೆದಿತ್ತು. ಎರಡು ಪ್ರಕರಣಗಳಲ್ಲಿ ಒಟ್ಟು 586 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಈ ವಶಪಡಿಸಿಕೊಂಡ ಗಾಂಜಾವನ್ನು ಹೈವೇ ಪೊಲೀಸ್ ಠಾಣೆಗಳ ಗೋಡೌನ್‌ಗಳಲ್ಲಿ ಇರಿಸಲಾಗಿತ್ತು. ಆದರೆ ಈ ಗಾಂಜಾವನ್ನು ಇಲಿಗಳು ತಿಂದು ತೇಗಿವೆ. ಇದರಿಂದಾಗಿ ಮಥುರಾ ಪೊಲೀಸರು ಇಲಿಗಳ ಕಾಟದಿಂದ ಎಲ್ಲಾ ಗಾಂಜಾ ನಾಶವಾಗಿದೆ ಎಂದು ನಾರ್ಕೋಟಿಕ್ಸ್ ಬ್ಯೂರೋಗೆ ತಿಳಿಸಿದ್ದರು.
ಇಲಿಗಳು ನೆಲ ಕೊರೆದು ಸುರಂಗ ಮಾಡಿಕೊಂಡು ಗೋಡನ್‌ನ ಒಳಗೆ ಬಂದಿದೆ. ಜೊತೆಗೆ ಇಲ್ಲಿಟ್ಟಿದ್ದ ಗಾಂಜಾವನ್ನು ತಿಂದಿದೆ. ಇದು ಗಮನಕ್ಕೆ ಬಂದ ಬಳಿಕ ನಾವು ಉಳಿದ ಗಾಂಜಾವನ್ನೂ ನಾಶಪಡಿಸಿದ್ದೇವೆ ಎಂದು ಪೊಲೀಸ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ಮೀಟಿಂಗ್‌ನಲ್ಲಿ ಕೇಕ್ ತಿಂದ ಇಲಿ
ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೋದಲ್ಲಿ ಮೀಟಿಂಗ್ ವೇಳೆ ಟೇಬಲ್ ಮೇಲೆ ಇರಿಸಿದ ಕೇಕ್ ಅನ್ನು ಇಲಿಯೊಂದು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಾಲ್ಕೈದು ಜನ ಗಂಭೀರವಾಗಿ ಸಭೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಟೇಬಲ್ ಮೇಲೆ ಇರಿಸಿದ ಕೃತಕ ಹೂ ಗುಚ್ಚದಲ್ಲಿ ಕುಳಿತ ಇಲಿ ಅದರ ಪಕ್ಕ ಪ್ಲೇಟ್‌ನಲ್ಲಿ ಇರಿಸಲಾದ ಕೇಕ್‌ನ್ನು ತಿನ್ನುತ್ತದೆ. ಈ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಭಾರೀ ವೈರಲ್ ಆಗಿತ್ತು.












Click it and Unblock the Notifications