ಮಧ್ಯಪ್ರದೇಶ ಚುನಾವಣೆ; ಶಿವ ಭಕ್ತ v/s ಹನುಮ ಭಕ್ತ ಹಣಾಹಣಿ!
ಭೋಪಾಲ್, ನವೆಂಬರ್ 14: ಮಧ್ಯಪ್ರದೇಶ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ನವೆಂಬರ್ 17ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿ ತಮ್ಮ ಕ್ಷೇತ್ರದಲ್ಲಿಯೇ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಯಲ್ಲಿ ಎದುರಾಳಿಗಳು. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ.

2018ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾದ ಕಮಲ್ ನಾಥ್ 2020ರಲ್ಲಿ ಸರ್ಕಾರ ಪತನದ ಬಳಿಕ ಮಾಜಿ ಮುಖ್ಯಮಂತ್ರಿಯಾದರು. ಚಿಂದ್ವಾರಾ ಕ್ಷೇತ್ರವನ್ನು ಪ್ರತಿನಿಧಿಸುವ ಹಿರಿಯ ನಾಯಕನಿಗೆ ಈ ಬಾರಿ ಪ್ರಬಲ ಪೈಪೋಟಿ ಇದೆ.
ಶಿವ ಭಕ್ತ ಮತ್ತು ಹನುಮ ಭಕ್ತ; 76 ವರ್ಷದ ಕಮಲ್ ನಾಥ್ ಚಿಂದ್ವಾರಾ ಕ್ಷೇತ್ರದ ಹಾಲಿ ಶಾಸಕರು. ಅವರೇ ಹೇಳುವಂತೆ 'ಹನುಮ ಭಕ್ತ'ರು ಅವರು. ಚುನಾವಣೆಯಲ್ಲಿ ಅವರ ಎದುರಾಳಿ ಬಿಜೆಪಿಯ ವಿವೇಕ್ ಬಂಟಿ ಶಾಹೂ ಜನರ ಪ್ರಕಾರ ಅವರು ಅಪ್ಪಟ 'ಶಿವ ಭಕ್ತ'.
2018ರ ಚುನಾವಣೆಯಲ್ಲಿಯೂ ಇಬ್ಬರೂ ನಾಯಕರು ಮುಖಾಮುಖಿಯಾಗಿದ್ದರು. 44 ವರ್ಷದ ವಿವೇಕ್ ಬಂಟಿ ಶಾಹೂ 25,837 ಮತಗಳ ಅಂತರದಿಂದ ಸೋತರು. ಚುನಾವಣೆಯಲ್ಲಿ ಗೆದ್ದ ಕಮಲ್ ನಾಥ್ ರಾಜ್ಯದ ಮುಖ್ಯಮಂತ್ರಿಯಾದರು. ಬಳಿಕ ಸರ್ಕಾರ ಪತನಗೊಂಡಿತು.
ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಬಿಜೆಪಿ ವಿವೇಕ್ ಬಂಟಿ ಶಾಹೂ ಕಣಕ್ಕಿಳಿಸಿದೆ. ನವೆಂಬರ್ 17ರ ಚುನಾವಣೆಯಲ್ಲಿಯೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕರೆ ಕಮಲ್ ನಾಥ್ ಮುಖ್ಯಮಂತ್ರಿಯಾಗಲಿದ್ದಾರೆ. ಈ ಅಂಶ ಅವರಿಗೆ ಸಹಾಯಕವಾಗಬಹುದು ಎಂದು ಅಂದಾಜಿಸಲಾಗಿದೆ.
ಆರು ತಿಂಗಳ ಹಿಂದೆ ಚಿಂದ್ವಾರಾ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ ಬಿಜೆಪಿ ಕಳೆದ ಚುನಾವಣೆಯಲ್ಲಿ ಗೆದ್ದ ಬಳಿಕ ಕಮಲ್ ನಾಥ್ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಲು ಬೈನಾಕುಲರ್ ಬೇಕು ಎಂದು ಲೇವಡಿ ಮಾಡಿತು. ಚಿಂದ್ವಾರಾದಲ್ಲಿ ಬಿಜೆಪಿ ಇದುವರೆಗೂ ಗೆದ್ದಿರುವುದು 3 ಚುನಾವಣೆ ಮಾತ್ರ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳು 13 ಚುನಾವಣೆ ಗೆದ್ದಿದ್ದಾರೆ.
ಚಿಂದ್ವಾರಾ ಕ್ಷೇತ್ರದ ಹೆಸರಿನಲ್ಲಿಯೇ ಲೋಕಸಭಾ ಕ್ಷೇತ್ರವೂ ಇದೆ. ಬಿಜೆಪಿ ಕೇಂದ್ರ ಸಚಿವರನ್ನು ಕಣಕ್ಕಿಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕ್ಷೇತ್ರದಲ್ಲಿ ಕಳೆದ ಬಾರಿ ಸೋತ ವಿವೇಕ್ ಬಂಟಿ ಶಾಹೂಗೆ ಟಿಕೆಟ್ ಕೊಡಲಾಗಿದೆ.
ಕೆಲವು ದಿನಗಳ ಹಿಂದೆ ಚಿಂದ್ವಾರಾ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, "ಕಮಲ್ ನಾಥ್ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಅವರನ್ನು ಹನುಮ ಭಕ್ತ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಏಕೆ ಅವರ ಸ್ನೇಹಿತ, ತಮಿಳುನಾಡು ಮುಖ್ಯಮಂತ್ರಿ ಪುತ್ರನ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ ಹಿಂದೂ ಧರ್ಮದ ಹೇಳಿಕೆಗಳ ಬಗ್ಗೆ ಮಾತನಾಡುವುದಿಲ್ಲ?" ಎಂದು ಪ್ರಶ್ನಿಸಿದ್ದರು.
ಚಿಂದ್ವಾರಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾರೀ ಜೋರಾಗಿದೆ. ದೆಹಲಿ ಮತ್ತು ಭೋಪಾಲ್‌ನ ಬಿಜೆಪಿ ತಂಡಗಳು ಇಲ್ಲಿಗೆ ಪ್ರಚಾರಕ್ಕೆ ಬಂದಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ತವರು ರಾಜ್ಯ ಗುಜರಾತ್‌ನಿಂದ ಇಲ್ಲಿಗೆ ಪ್ರಚಾರಕ್ಕಾಗಿ ತಂಡಗಳನ್ನು ಕರೆಸಲಾಗಿದೆ.
ಕಾಂಗ್ರೆಸ್ ಸಹ ಅಬ್ಬರದ ಪ್ರಚಾರ ನಡೆಸುತ್ತಿದೆ. ನೀವು ನೀಡುವ ಮತ ಈ ಬಾರಿ ಚಿಂದ್ವಾರಾ ಕ್ಷೇತ್ರ ಮಾತ್ರವಲ್ಲ ಮಧ್ಯಪ್ರದೇಶದ ಬದಲಾವಣೆಗೆ ಕಾರಣವಾಗಲಿದೆ ಎಂದು ಪರೋಕ್ಷವಾಗಿ ಕಮಲ್ ನಾಥ್ ಗೆದ್ದರೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಚಿಂದ್ವಾರಾ ಕ್ಷೇತ್ರದಲ್ಲಿ ಮಹಿಳಾ ಮತಗಳ ಸಂಖ್ಯೆ ಅಧಿಕವಾಗಿದೆ. 1,41,002 ಮಹಿಳಾ ಮತದಾರರು ಇದ್ದಾರೆ. ಪುರುಷ ಮತದಾರರು 1,40,674. ಬಿಜೆಪಿಯ ವಿವೇಕ್ ಬಂಟಿ ಶಾಹೂ ಚುನಾವಣಾ ಪ್ರಚಾರ ಸಭೆಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪತ್ನಿಯಿಂದಲೇ ರಾಜೀನಾಮೆ ಕೊಡಿಸಿದ ಕಮಲ್ ನಾಥ್ ಮಹಿಳಾ ವಿರೋಧಿ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ನಮ್ಮ ಪ್ರಚಾರಕ್ಕೆ ಸಿಗುತ್ತಿರುವ ಬೆಂಬಲ ನೀಡಿದರೆ ಈ ಬಾರಿ ವಿವೇಕ್ ಬಂಟಿ ಶಾಹೂ ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.












Click it and Unblock the Notifications