Madhya Pradesh Assebly Election 2023: ಮಧ್ಯೆ ಪ್ರದೇಶ ಚುನಾವಣೆ ಮತದಾನ, ಫಲಿತಾಂಶ ದಿನಾಂಕ, ಮತಗಟ್ಟೆ, ವೇಳಾಪಟ್ಟಿ ವಿವರ
ಬೆಂಗಳೂರು, ಅಕ್ಟೋಬರ್ 09: ಭಾರತೀಯ ಕೇಂದ್ರ ಚುನಾವಣೆ ಆಯೋಗವು ಮಧ್ಯ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಈ ಪೈಕಿ ಮಧ್ಯ ಪ್ರದೇಶದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳ ನವೆಂಬರ್ 17ಕ್ಕೆ ಮತದಾನ ನಡೆಯಲಿದೆ. ಹಾಗಾದರೆ ಈ ರಾಜ್ಯದ ಚುನಾವಣೆ ಪ್ರಕ್ರಿಯೆಗಳು, ಮತ ಎಣಿಕೆಗೆ, ವಿಧಾನಸಭಾ ಕ್ಷೇತ್ರಗಳ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಚುನಾವಣೆ ಆಯೋಗ ತಿಳಿಸಿರುವಂತೆ ಮಧ್ಯ ಪ್ರದೇಶದಲ್ಲಿ ನವೆಂಬರ್ 17ರಂದು ಎಲ್ಲ 230 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಬೆಳಗ್ಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅದೇ ದಿನ ಸಂಜೆ ಫಲಿತಾಂಶ ಪ್ರಕಟಗೊಳ್ಳಲಿದೆ. ಒಟ್ಟಾರೆ ಡಿಸೆಂಬರ್ 5ರೊಳಗೆ ಚುನಾವಣೆ ಪೂರ್ಣಗೊಳ್ಳಲಿದೆ.

ಮಧ್ಯಪ್ರದೇಶದ ಗೆಜೆಟ್ ಅಧಿಸೂಚನೆ ದಿನಾಂಕ ಅಕ್ಟೋಬರ್ 21 ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ದಿನದಿಂದಲೇ ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅಭ್ಯರ್ಥಿಗಳು ನಾಮಪತ್ರಗಳನ್ನು ಅಕ್ಟೋಬರ್ 30ರೊಳಗೆ ಸಲ್ಲಿಸಬೇಕು. ಸಲ್ಲಿಕೆಯಾದ ಎಲ್ಲ ನಾಮ ನಿರ್ದೇಶನಗಳನ್ನು ಅಕ್ಟೋಬರ್ 31 ರಂದು ಚುನಾವಣಾಧಿಕಾರಿಗಳು ಪರಿಶೀಲಿಸುತ್ತಾರೆ. ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ನವೆಂಬರ್ 2 ಕೊನೆ ದಿನವಾಗಿರುತ್ತದೆ.
ಚುನಾವಣೆಗಾಗಿ ಅಗತ್ಯ ಸಿದ್ಧತೆಗಳು
ಚುನಾವಣೆಗೆ ಪ್ರಕ್ರಿಯೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಅಕ್ರಮ ಹಣ, ಮದ್ಯ ಸಾಗಾಟ, ಡ್ರಗ್ಸ್ ಮತ್ತು ಇತರ ಉಚಿತ ವಸ್ತುಗಳ ಹಂಚಿಕೆ, ಹರಿವು ಪರಿಶೀಲನೆಗೆ ಚುನಾವಣೆ ಆಯೋಗವು ರಾಜ್ಯದ ಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಿದೆ. ಚುನಾವಣೆ ನಡೆಯುವ ರಾಜ್ಯಗಳಾದ್ಯಂತ 940 ಕ್ಕೂ ಹೆಚ್ಚು ಗಡಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು.
ಮಧ್ಯ ಪ್ರದೇಶ ರಾಜ್ಯದ ಈ ಹಿಂದಿನ ವಿಧಾನಸಭಾ ಚುನಾವಣೆ 2018ರ ನವೆಂಬರ್ ರಂದು ಕೊನೆಗೊಂಡಿತ್ತು. ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪ್ರಚಂಡ ಪಕ್ಷವಾಗಿ ಹೊರ ಹೊಮ್ಮಿ ಅಧಿಕಾರ ಹಿಡಿಯಿತು. ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಈ ಬಾರಿ ಗೆಲ್ಲಲೇಬೇಕೆಂಬ ಹಠದಲ್ಲಿ ಮತ್ತೆ ರಣತಂತ್ರ ರೂಪಿಸುವಲ್ಲಿ ಬಿಜೆಪಿ ನಿರತವಾಗಿದೆ.

ಮಧ್ಯ ಪ್ರದೇಶ: ಸ್ಪರ್ಧಿಸಲಿರುವ ಪಕ್ಷಗಳು?
ರಾಜ್ಯದಲ್ಲಿ ಚುನಾವಣೆ ಎದುರಿಸಲು ಹೊರಟಿರುವ ಪ್ರಮುಖ ಪಕ್ಷಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದ್ದು, ಇದಲ್ಲದೇ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳೂ ಕಣದಲ್ಲಿ ಗೆಲವಿಗಾಗಿ ಸೆಣಸಲಿವೆ.
ಇತ್ತೀಚಿನ ದಿನಗಳಲ್ಲಿ ಮಧ್ಯ ಪ್ರದೇಶ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ವಿವಿಧ ಕಡೆ ಮೆರವಣಿಗೆ ನಡೆಸಿ ರಾಜ್ಯ ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇತ್ತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ರ್ಯಾಲಿ ನಡೆಯುತ್ತಿವೆ. ಆಡಳಿತ ವಿರೋಧಿ ಅಲೆ ಮದ್ಯೆ ಹೋರಾಟ ಮಾಡಿ ಅಧಿಕಾರ ಉಳಿಸಿಕೊಳ್ಳಲು ಸಿಎಂ ಪ್ರಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಹೋಗಿ ಬಿಜೆಪಿ ಅಧಿಕಾರಕ್ಕೆ ಬಂತು
ಮಧ್ಯ ಪ್ರದೇಶದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದು ಹಿರಿಯ ನಾಯಕ ಕಮಲ್ ನಾಥ್ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. 22 ಶಾಸಕರು ರಾಜೀನಾಮೆ ನೀಡಿದ ನಂತರ 2020 ರಲ್ಲಿ ಪಕ್ಷವು ಅಧಿಕಾರವನ್ನು ಕಳೆದುಕೊಂಡಿತು. ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಮಧ್ಯಪ್ರದೇಶದ ಹೊರತಾಗಿ ಮಿಜೋರಾಂ, ತೆಲಂಗಾಣ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿವೆ. ಈ ಎಲ್ಲ ಐದು ರಾಜ್ಯಗಳಲ್ಲಿ ಒಟ್ಟು 1.77 ಲಕ್ಷ ಮತಗಟ್ಟೆಗಳಿವೆ ಎಂದು ಕೇಂದ್ರ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications