ತಿರುಪತಿ ಬಳಿ ಟೆಂಪೋಗೆ ಲಾರಿ ಡಿಕ್ಕಿ; ಮೂವರು ಸಾವು, 12 ಮಂದಿಗೆ ಗಾಯ
ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಇಂದು (ಜೂನ್ 30) ಟೆಂಪೋಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಟೆಂಪೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಅನ್ನಮಯ್ಯ ಜಿಲ್ಲೆಯ ಕುರಬಳಕೋಟ ಮಂಡಲದ ಚೆನ್ನಾಮರ್ರಿ ಮಿಟ್ಟ ಬಳಿ ನಡೆದಿದೆ.
ಮೃತರನ್ನು ಮೇಘರಾಜ್ (17), ಚರಣ್(17) ಮತ್ತು ಶ್ರಾವಣಿ(28) ಎಂದು ಗುರುತಿಸಲಾಗಿದ್ದು, ಇವರು ಬಾಗೇಪಲ್ಲಿ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಲಾರಿ ಡಿಕ್ಕಿ ಹೊಡೆದ ವೇಳೆ ಟೆಂಪೋ ಟ್ರಾವೆಲರ್ ಮದನಪಲ್ಲಿಯಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ಪೋಲಿಸರು ತಿಳಿಸಿದರು. ಟೆಂಪೋದಲ್ಲಿದ್ದವರು ತಿರುಪತಿ ದರ್ಶನ ಮುಗಿಸಿ ಊರಿಗೆ ವಾಪಸ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಇನ್ನು ಗಾಯಾಳುಗಳನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಪಘಾತದ ನಂತರ ಲಾರಿ ಸಹಿತ ಚಾಲಕ ಸ್ಥಳದಿಂದ ಪರಾರಿ ಆಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದರು.
ಆಂಧ್ರಪ್ರದೇಶದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿಯವರು ಭೀಕರ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಳುಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭೀಕರ ಅಪಘಾತ: ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಹಿರೀಸಾವೆ-ಮೇಟಿಕರೆ ವೃತ್ತದಲ್ಲಿ ಬೈಕ್-ಸ್ಕೂಟರ್ ಡಿಕ್ಕಿ ಹೊಡೆದುಕೊಂಡಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು.
ಹೋಬಳಿಯ ಬಾಳಗಂಚಿ ನಿವಾಸಿ ಚಂದ್ರೇಗೌಡ (50) ಮತ್ತು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ವಡಕೇಘಟ್ಟ ಗ್ರಾಮದ ಲಕ್ಷ್ಮಮ್ಮ (55) ಮೃತಪಟ್ಟವರು. ಚಂದ್ರೇಗೌಡ ಅವರು ಪತ್ನಿ ಸವಿತಾ ಹಾಗೂ ಅತ್ತಿಗೆ ಲಕ್ಷ್ಮಮ್ಮ ಜೊತೆಗೆ ಹಿರೀಸಾವೆಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಸ್ಕೂಟರ್‌ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು.
ಅಪಘಾತದಲ್ಲಿ ಸವಿತಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು. ಹಾಸನದ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಬೈಕ್‌ನಲ್ಲಿ ಮಂಜುನಾಥ್ ದಂಪತಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದ್ದರಿಂದ ಇಲ್ಲಿ ಶೀಘ್ರದಲ್ಲೇ ಅಂಡರ್ಪಾಸ್ ನಿರ್ಮಾಣ ಮಾಡಿ ಸಮಸ್ಯೆಗಳನ್ನು ನಿಯಂತ್ರ ಮಾಡುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.












Click it and Unblock the Notifications