ಟುಡೇಸ್ ಚಾಣಕ್ಯ ಚುನಾವಣಾ ಸಮೀಕ್ಷೆ ನಡೆಸಿಲ್ಲ : ಸುಳ್ಳು ಸುದ್ದಿ ನಂಬಬೇಡಿ
ನವದೆಹಲಿ, ಮಾರ್ಚ್ 29 : "ಲೋಕಸಭೆ ಚುನಾವಣೆ 2019ರ ಕುರಿತು ಟುಡೇಸ್ ಚಾಣಕ್ಯ ಯಾವುದೇ ಸಮೀಕ್ಷೆ ಬಿಡುಗಡೆ ಮಾಡಿಲ್ಲ. ದಯವಿಟ್ಟು ನಮ್ಮ ಹೆಸರಿನಲ್ಲಿ ಬರುತ್ತಿರುವ ಸಮೀಕ್ಷಾ ವರದಿಗಳನ್ನು ನಂಬಬೇಡಿ" ಎಂದು ಟುಡೇಸ್ ಚಾಣಕ್ಯ ಟ್ವೀಟ್ ಮಾಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಜಕೀಯ, ಪಬ್ಲಿಕ್ ಅಫೇರ್ಸ್, ಪಬ್ಲಿಕ್ ಪಾಲಿಸಿ ಕ್ಷೇತ್ರಗಳಲ್ಲಿ ಸಮೀಕ್ಷೆಗಳನ್ನು ನಡೆಸಿ, ಜನಾಭಿಪ್ರಾಯ ಸಂಗ್ರಹಿಸುವ ಅಗ್ರಗಣ್ಯ ಸಂಸ್ಥೆಗಳಲ್ಲಿ ಟುಡೇಸ್ ಚಾಣಕ್ಯ ಕೂಡ ಒಂದು. ಲೋಕಸಭೆ ಚುನಾವಣೆಗೂ ಮುನ್ನವೇ ಕೆಲ ವರದಿಗಳು ಲೋಕಸಭೆ ಚುನಾವಣೆ ಬಗ್ಗೆ ಪ್ರಕಟವಾಗುತ್ತಿದ್ದಂತೆ ಈ ಹೇಳಿಕೆ ನೀಡಿದೆ.
ಕೆಲವು ಪ್ರಕಟವಾದ ವರದಿಗಳು ಏನು ಹೇಳುತ್ತಿವೆಯೆಂದರೆ, ಏಪ್ರಿಲ್ 11ರಿಂದ ಆರಂಭವಾಗಿ ಮೇ 19ರವರೆಗೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವನ್ನು ಪಡೆದು, 293 ಕ್ಷೇತ್ರಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆಯಲಿದೆ ಮತ್ತು ಸರಕಾರ ರಚಿಸಲಿದೆ. ಈ ವರದಿಗಳೆಲ್ಲ ಸುಳ್ಳು ಎಂದು ಟುಡೇಸ್ ಚಾಣಕ್ಯ ಹೇಳಿದೆ.

2014ರಲ್ಲಿ ಟುಡೇಸ್ ಚಾಣಕ್ಯ ನಡೆಸಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ : ಬಿಜೆಪಿ 291 ±14 ಸ್ಥಾನಗಳು, ಕಾಂಗ್ರೆಸ್ 57 ±9 ಸ್ಥಾನಗಳು, ಎನ್‌ಡಿಎ 340 ±14 ಸ್ಥಾನಗಳು, ಯುಪಿಎ 70 ±9 ಸ್ಥಾನಗಳು ಮತ್ತು ಇತರರು 133 ±11 ಸ್ಥಾನಗಳನ್ನು ಗೆಲ್ಲುತ್ತದೆಂದು ವರದಿ ಬಿಡುಗಡೆ ಮಾಡಿತ್ತು.
ಈ ಸಮೀಕ್ಷೆ ಕಳೆದ ಚುನಾವಣೆಯಲ್ಲಿ ಹೆಚ್ಚೂ ಕಡಿಮೆ ಸರಿಯಾಗಿತ್ತು. ಬಿಜೆಪಿ 282, ಕಾಂಗ್ರೆಸ್ 44, ಎನ್‌ಡಿಎ 336, ಯುಪಿಎ 60, ಇತರ ಪಕ್ಷಗಳು 147 ಕ್ಷೇತ್ರಗಳನ್ನು ಗೆದ್ದಿದ್ದವು. ಟುಡೇಸ್ ಚಾಣಕ್ಯ ನಡೆಸಿದ್ದ ಚುನಾವಣೋತ್ತರ ಸಮೀಕ್ಷೆ ಹೆಚ್ಚೂಕಡಿಮೆ ಪರ್ಫೆಕ್ಟಾಗಿತ್ತು.
ಈ ಕಾರಣದಿಂದಾಗಿಯೇ ಟುಡೇಸ್ ಚಾಣಕ್ಯ ನಡೆಸಲಿರುವ ಚುನಾವಣಾ ಸಮೀಕ್ಷೆಯ ಬಗ್ಗೆ ಜನರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದ್ಯಾರು ಕಾಂಗ್ರೆಸ್ ಏಕಾಂಗಿಯಾಗಿ 293 ಕ್ಷೇತ್ರಗಳನ್ನು ಗೆಲ್ಲುತ್ತದೆಂದು ಸುದ್ದಿಯನ್ನು ಹರಿಯಬಿಟ್ಟರೋ, ಟುಡೇಸ್ ಚಾಣಕ್ಯಗೆ ಇರುಸುಮುರುಸು ತಂದಿದೆ.
ಒಟ್ಟಿನಲ್ಲಿ ಸುದ್ದಿ ಹಬ್ಬಿರುವಂತೆ ಕಾಂಗ್ರೆಸ್ 293 ಕ್ಷೇತ್ರಗಳನ್ನು ಗೆಲ್ಲುತ್ತದೋ ಬಿಡುತ್ತದೋ, ಎನ್‌ಡಿಎ 250 ಕ್ಷೇತ್ರಗಳಲ್ಲಿ ಗೆಲ್ಲುತ್ತದೋ ಬಿಡುತ್ತದೋ ಎಂಬುದು ಮೇ 23ರಂದು ಮತಎಣಿಕೆಯ ನಂತರ ಗೊತ್ತಾಗಲಿದೆ. ಅಂದ ಹಾಗೆ, ಟುಡೇಸ್ ಚಾಣಕ್ಯದ ಚುನಾವಣಾ ತಜ್ಞ ಪಾರ್ಥ ದಾಸ್ ಅವರ ಟ್ವಿಟ್ಟರ್ ಖಾತೆ ಕ್ಲೋಸ್ ಆಗಿದೆ.












Click it and Unblock the Notifications