Lok Sabha Elections 2024: ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ, ಸಮೀಕ್ಷಾ ವರದಿ ಬಹಿರಂಗ
ಬೆಂಗಳೂರು, ಆಗಸ್ಟ್ 18: ಮುಂಬರುವ ಲೋಕಸಭಾ ಚುನಾವಣೆ 2024ರಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಸಮೀಕ್ಷೆ ವರದಿಯನ್ನು ಸ್ಮಾಲ್ ಬಾಕ್ಸ್ ಇಂಡಿಯಾ ಬಿಡುಗಡೆ ಮಾಡಿದೆ.
2024ರ ಲೋಕಸಭಾ ಚುನಾವಣೆ ನಿರ್ಣಾಯಕವಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲೇ ಎನ್‌ಡಿಎ ಒಕ್ಕೂಟ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿದೆ. ಇದಕ್ಕೆ ಪ್ರತಿಯಾಗಿ ವಿರೋಧ ಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಎಂಬ ಒಕ್ಕೂಟ ಮಾಡಿಕೊಂಡಿದ್ದು, ಎನ್‌ಡಿಎಯನ್ನು ಕಟ್ಟಿಹಾಕಲು ಪೂರ್ವ ತಯಾರಿ ಈಗಾಗಲೇ ಆರಂಭಿಸಿವೆ.

ಈ ನಿಟ್ಟಿನಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಬರುತ್ತಿವೆ. ಸ್ಮಾಲ್ ಬಾಕ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ ಪ್ರಕಾರ ಕರ್ನಾಟಕದಲ್ಲಿ ಎನ್‌ಡಿಎ ಒಕ್ಕೂಟವು 16 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಅಲ್ಲದೆ ಇಂಡಿಯಾ ಒಕ್ಕೂಟ 12 ಸ್ಥಾನ, ಇತರರು 1 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
2024ರ ಲೋಕಸಮರಕ್ಕೆ ಸಂಬಂಧಿಸಿದಂತೆ ಹಲವಾರು ಸಮೀಕ್ಷೆಗಳು ಬರತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಒಕ್ಕೂಟ ಮತ್ತೆ ಹ್ಯಾಟ್ರಿಕ್ ವಿಜಯ ಸಾಧಿಸಲು ಮುಂದಾಗುತ್ತಿದ್ದು, ಮೋದಿ ಅವರು 3ನೇ ಬಾರಿ ಪ್ರಧಾನಿಯಾಗುವ ತವಕದಲ್ಲಿದ್ದಾರೆ. ಆದರೆ ಮಣಿಪುರ ಹಿಂಸಾಚಾರ, ಮಹಿಳಾ ಅಥ್ಲಿಟ್‌ಗಳ ಪ್ರತಿಭಟನೆ ಹಾಗೂ ರೈತ ಪ್ರತಿಭಟನೆ, ಇತ್ತೀಚೆಗೆ ನೂಹ್ ಕೋಮುಗಲಭೆ ಸೇರಿದಂತೆ ಅನೇಕ ಪ್ರಕರಣಗಳು ಎನ್‌ಡಿಎ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಉತ್ತರ ಭಾರತದಲ್ಲಿ ಮೋದಿ ಅಲೆ ಕುಸಿತಗೊಂಡಿದೆ ಎಂದು ತಮಿಳುನಾಡಿನಿಂದ ಮೋದಿ ಸ್ಫರ್ಧೆ ಮಾಡುತ್ತಾರೆ ಎಂದು ವರದಿಗಳು ಪ್ರಕಟಗೊಂಡಿದ್ದವು. ಆದರೆ ಇದಕ್ಕೆ ಬಿಜೆಪಿ ಹೈಕಮಾಂಡ್ ಯಾವುದೇ ಮಾಹಿತಿ ನೀಡಿಲ್ಲ. ಮೋದಿ ತಮಿಳುನಾಡಿನಂದ ಸ್ಪರ್ಧೆ ಮಾಡಿದರೆ ದಕ್ಷಿಣ ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿದೆ ಎಂದು ಹೈಕಮಾಂಡ್ ಭಾವಿಸಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕವಲ್ಲದೆ ತಮಿಳುನಾಡಿನ ಸಮೀಕ್ಷೆ ಕೂಡ ಸ್ಮಾಲ್ ಬಾಕ್ಸ್ ಇಂಡಿಯಾ ಬಿಡುಗಡೆ ಮಾಡಿದ್ದು, ಆ ಪ್ರಕಾರ ಇಂಡಿಯಾ ಒಕ್ಕೂಟ 36 ಸ್ಥಾನಗಳನ್ನು ಗೆಲ್ಲಿಸಿದರೆ, ಎನ್‌ಡಿಎ ಒಕ್ಕೂಟಕ್ಕೆ 3 ಸ್ಥಾನಗಳು ಬರಬಹುದು ಹಾಗೂ ಇತರರಿಗೆ ಇಲ್ಲಿ ಅವಕಾಶವಿಲ್ಲ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಹಾಗೆಯೇ ಕೇರಳದ ಸಮೀಕ್ಷೆ ಬಹಿರಂಗವಾಗಿದ್ದು, ಆ ಪ್ರಕಾರ ಯುಡಿಎಫ್‌ಗೆ 18 ಸ್ಥಾನ, ಎಲ್‌ಡಿಎಫ್‌ಗೆ 02 ಸ್ಥಾನ ಹಾಗೂ ಎನ್‌ಡಿಎಗೆ ಶೂನ್ಯ ಸ್ಥಾನ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.
ಇದಲ್ಲದೆ ರಾಜಸ್ತಾನದಲ್ಲಿ ಇಂಡಿಯಾ ಒಕ್ಕೂಟ 5 ಸ್ಥಾನಗಳನ್ನು ಗೆದ್ದರೆ, ಎನ್‌ಡಿಎ 20 ಸ್ಥಾನಗಳನ್ನು ಗೆಲ್ಲಬಹುದು, ಇತರರಿಗೆ ಇಲ್ಲಿ ಜಾಗವಿಲ್ಲ ಎಂದು ವರದಿ ಹೇಳಿದೆ. ಕಳೆದ ವಾರ ಟೈಮ್ಸ್ ನೌ- ಇಟಿಜಿ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿ ಮ್ಯಾಜಿಕ್ ಮುಂದುವರಿಯಲಿದೆ. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಮೋದಿ ಮೂರನೇ ಬಾರಿಯೂ ಆಯ್ಕೆಯಾಗಲಿದ್ದಾರೆ ಎಂದು ಹೇಳಿತ್ತು.
ಎನ್‌ಡಿಎ ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಆ ಪ್ರಕಾರ ದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 300 ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 160 ರಿಂದ 190 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿತ್ತು.












Click it and Unblock the Notifications