ಬಿಜೆಪಿಗೆ ದಿಗ್ವಿಜಯ: ಬಾಲಿವುಡ್ ನಟ ಧರ್ಮೇಂದ್ರ ಕುಟುಂಬಕ್ಕೆ ಡಬಲ್ ಧಮಾಕ!
ಬೆಂಗಳೂರು, ಮೇ 23: ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪಾಲಿಗೆ ಈ ದಿಗ್ವಿಜಯ ಸ್ಮರಣೀಯ. ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರಿಗೂ ಇದು ಸ್ಮರಣೀಯ. ಅವರ ಮನೆಯಲ್ಲಿ ಈಗ ಎರಡೆರಡು ಸಂಭ್ರಮ. ಏಕೆಂದರೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಗ ಸನ್ನಿ ಡಿಯೋಲ್ ಮತ್ತು ಪತ್ನಿ ಹೇಮಾಮಾಲಿನಿ ಇಬ್ಬರೂ ಜಯಭೇರಿ ಬಾರಿಸಿದ್ದಾರೆ.
ಪಂಜಾಬ್‌ನ ಗುರುದಾಸ್ ಪುರದಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್, ಕಾಂಗ್ರೆಸ್‌ನ ಹಾಲಿ ಸಂಸದ ಸುನಿಲ್ ಜಖಾರ್ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಸನ್ನಿ ಡಿಯೋಲ್, ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು. ಕೆಲವು ವರ್ಷಗಳ ಬಳಿಕ ಕೌರ್ ಅವರಿಗೆ ವಿಚ್ಛೇದನ ನೀಡಿದ್ದ ಧರ್ಮೇಂದ್ರ, ಹೇಮಾಮಾಲಿನಿ ಅವರನ್ನು ಮದುವೆಯಾಗಿದ್ದರು.
ಐದೂವರೆ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಸನ್ನಿ ಡಿಯೋಲ್, ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆದ್ದು ಸಂಸತ್ ಪ್ರವೇಶಕ್ಕೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅತ್ತ ಹೇಮಾಮಾಲಿನಿ ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.

ಈ ಎರಡೂ ಗೆಲುವನ್ನು ಧರ್ಮೇಂದ್ರ ಸಂಭ್ರಮಿಸಿದ್ದಾರೆ. ಮಗನನ್ನು ಮಣ್ಣಿನ ಮಗ ಎಂದು ಕರೆದು ಖುಷಿಪಟ್ಟಿದ್ದಾರೆ.
Faqeer Badshah Modi JI , Dharti puttra sunny Deol, Congratulations. Achhe Din Yaqeenan Ayen Ge 🌾🌾🌾🌾🌾🌾🌾🌾🌾🌾🌾🌾🌾🌾🌾🌾🌳. pic.twitter.com/wisnZ6XIpa
— Dharmendra Deol (@aapkadharam) 23 May 2019
'ಕಿಂಗ್ ಮೋದಿಜಿ, ಮಣ್ಣಿನ ಮಗ ಸನ್ನಿ ಡಿಯೋಲ್, ಅಭಿನಂದನೆಗಳು. ಒಳ್ಳೆಯ ದಿನಗಳು ಖಂಡಿತಾ ಬರಲಿವೆ' ಎಂದು ಧರ್ಮೇಂದ್ರ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಅವರು ಹಿರಿಯ ನಟಿ, ಪತ್ನಿ ಮತ್ತು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರಿಗೂ ಶುಭ ಹಾರೈಸಿದ್ದಾರೆ.
Hema , Congratulations. We love Mother India 🇮🇳 we have proved in Bekaner and Mathura. We will keep our 🇮🇳 flying.........always 🙏 pic.twitter.com/utQnUZ5QUj
— Dharmendra Deol (@aapkadharam) 23 May 2019
'ಹೇಮಾ, ಅಭಿನಂದನೆಗಳು. ನಾವು ಭಾರತ ಮಾತೆಯನ್ನು ಪ್ರೀತಿಸುತ್ತೇವೆ. ಇದನ್ನು ನಾವು ಬಿಕಾನೇರ್ ಮತ್ತು ಮಥುರಾಗಳಲ್ಲಿ ಸಾಬೀತುಪಡಿಸಿದ್ದೇವೆ. ನಮ್ಮ ದೇಶದ ಧ್ವಜ ಸದಾ ಹಾರಾಡುವಂತೆ ಮಾಡುತ್ತೇವೆ' ಎಂದು ಬರೆದಿದ್ದಾರೆ.












Click it and Unblock the Notifications