Lok Sabha Election 2024: ಇಂಡಿಯಾ ಬಣಕ್ಕೆ ಸೆಡ್ಡು ಹೊಡೆದು ಹ್ಯಾಟ್ರಿಕ್ ಸಾಧಿಸ್ತಾರ ಮೋದಿ? ಸಮೀಕ್ಷೆ ಹೇಳಿದ್ದಿಷ್ಟು
2024ರ ಲೋಕಸಭಾ ಚುನಾವಣೆ ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದೆ. ಕಳೆದ ಎರಡು ಚುನಾವಣೆಯಲ್ಲಿ ಸಮರ್ಥ ಎದುರಾಳಿಗಳೇ ಇಲ್ಲ ಎನ್ನುವಂತೆ ಬಿಜೆಪಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿ ಬಿಜೆಪಿ ಯನ್ನು ಸೋಲಿಸಲು ವಿರೋಧ ಪಕ್ಷಗಳು ಇಂಡಿಯಾ ಹೆಸರಲ್ಲಿ ಒಗ್ಗೂಡಿದ್ದು, ಎನ್‌ಡಿಎ ಒಕ್ಕೂಟಕ್ಕೆ ಪೈಪೋಟಿ ನೀಡುವ ಉತ್ಸಾಹದಲ್ಲಿದೆ.
2024ರ ಚುನಾವಣೆಗೆ ಮುನ್ನ ದೇಶದ ಜನರ ಮನಸ್ಥಿತಿ ಏನಿದೆ. ಯಾವ ಪಕ್ಷದತ್ತ ಒಲವಿದೆ ಎನ್ನುವ ಬಗ್ಗೆ ಇಂಡಿಯಾ ಟುಡೇ -ಸಿವೋಟರ್ 'ಮೂಡ್ ಆಫ್ ದಿ ನೇಷನ್' ಹೆಸರಿನಲ್ಲಿ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಪ್ರಕಾರ ಮೂರನೇ ಬಾರಿ ಕೂಡ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟಕ್ಕೆ ಸೋಲಾಗಲಿದೆ ಎಂದು ಹೇಳಿದೆ. 26 ವಿರೋಧ ಪಕ್ಷಗಳ ಒಕ್ಕೂಟವಾದ 'ಇಂಡಿಯಾ' ಸೋಲನುಭವಿಸಲಿದ್ದು, ಈ ಬಾರಿ ಕೂಡ ಮತದಾರರ ಬಿಜೆಪಿ ಪರ ಒಲವು ಹೊಂದಿರುವುದಾಗಿ ಸಮೀಕ್ಷೆ ಹೇಳಿದೆ.

ಕಳೆದ ವಾರ ಬಿಡುಗಡೆಯಾದ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 543 ಲೋಕಸಭಾ ಸ್ಥಾನಗಳಲ್ಲಿ ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲಲಿದ್ದು, ವಿರೋಧ ಪಕ್ಷದ ಇಂಡಿಯಾ ಬಣ 193 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ಹೆಚ್ಚಾಗುತ್ತಿದೆ ಇಂಡಿಯಾ ಜನಪ್ರಿಯತೆ!
2023ರ ಜನವರಿಯಲ್ಲಿ ನಡೆಸಿದ ಸಮೀಕ್ಷೆಗೆ ಹೋಲಿಕೆ ಮಾಡಿದಾಗ ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಜನವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ 298 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದ್ದರೆ, ಇಂಡಿಯಾ ಒಕ್ಕೂಟ 153 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು. ಆಗಸ್ಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಯ 305 ಸೀಟುಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದು, ಇಂಡಿಯಾ 193 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ.
ಪ್ರತಿಪಕ್ಷವು ಗೆಲ್ಲುವ ಸ್ಥಾನಗಳಲ್ಲಿ ಏರಿಕೆಯನ್ನು ತೋರಿಸಿದರೂ ಬಹುಮತದ ಸನಿಹಕ್ಕೂ ಹೋಗಲಾಗದು. ಆದರೆ, ಜನವರಿ ಮತ್ತು ಆಗಸ್ಟ್ ನಡುವೆ ಆಗಿರುವ ಬದಲಾವಣೆ ಗಮನಸಿದಾಗ ಬಿಜೆಪಿಗೆ ಚಿಂತೆ ಕಾಡುವುದಂತೂ ಸತ್ಯ. ಇಂಡಿಯಾ 8 ತಿಂಗಳಲ್ಲಿ 153 ಸ್ಥಾನಗಳಿಂದ 193 ಸ್ಥಾನಗಳಿಗೆ ಹೋಗಿದೆ, ಇದೇ ರೀತಿ ಟ್ರೆಂಡ್ ಮುಂದುವರೆದರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗುವುದಂತೂ ಸತ್ಯ.

ಇದುವರೆಗಿನ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಬಿಜೆಪಿ ಸಾಕಷ್ಟು ಆರಾಮದಾಯಕ ಸ್ಥಿತಿಯಲ್ಲಿದೆ. ಸಂಶೋಧನೆಗಳು ಇತರ ಔಟ್‌ಲೆಟ್‌ಗಳು ನಡೆಸಿದ ಅಭಿಪ್ರಾಯ ಸಮೀಕ್ಷೆಗಳ ಫಲಿತಾಂಶಗಳಿಗೆ ಅನುಗುಣವಾಗಿರುತ್ತವೆ ಮತ್ತು ಇದು ಎನ್‌ಡಿಎಯನ್ನು ಇಂಡಿಯಾ ಬ್ಲಾಕ್‌ಗಿಂತ ಅನುಕೂಲಕರ ಅಂತರದಿಂದ ಮುಂದಿದೆ.
ಇಂಡಿಯಾ ಬಗ್ಗೆ ಮತದಾರ ಹೇಳಿದ್ದೇನು?
ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (ಇಂಡಿಯಾ) ಎನ್ನುವ ಹೆಸರಿನಲ್ಲಿ ವಿಪಕ್ಷಗಳು ಒಗ್ಗಟ್ಟಾಗಿದೆ. ಶೇಕಡಾ 33 ರಷ್ಟು ಮಂದಿ ಮಾತ್ರ ಇಂಡಿಯಾ ಒಕ್ಕೂಟ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದು ಹೇಳಿದ್ದಾರೆ. ಇನ್ನು ಶೇಕಡಾ 54 ರಷ್ಟು ಮಂದಿ ಇದಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿದ್ದಾರೆ.
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (UPA) ಅನ್ನು ಇಂಡಿಯಾ ಎಂದು ಮರುನಾಮಕರಣ ಮಾಡುವುದರಿಂದ ಮತದಾರರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆಯೇ? ಎನ್ನುವ ಬಗ್ಗೆ ಕೂಡ ಸಮೀಕ್ಷೆ ಮಾಡಲಾಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದವರನ್ನು ಶೇಕಡಾ 39 ರಷ್ಟು ಜನ ಹೌದು ಎಂದು ಹೇಳಿದ್ದರೆ, ಶೇಕಡ 30 ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಶೇಕಡ 18 ರಷ್ಟು ಮಂದಿ ಇದರ ಬಗ್ಗೆ ಅಭಿಪ್ರಾಯ ಹೊಂದಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದಲ್ಲಿ ನಾಯಕತ್ವ ಯಾರು ವಹಿಸಿಕೊಳ್ಳಬೇಕು ಎನ್ನುವ ಪ್ರಶ್ನೆಗೆ ರಾಹುಲ್ ಗಾಂಧಿ ಪರವಾಗಿ ಶೇಕಡ 24 ರಷ್ಟು ಮಂದಿ ಒಲವು ಹೊಂದಿದ್ದು, ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಪರವಾಗಿ ತಲಾ 15 ರಷ್ಟು ಮಂದಿ ಒಲವು ತೋರಿದ್ದಾರೆ.












Click it and Unblock the Notifications