ನಿತೀಶ್ ಪದಗ್ರಹಣ: ಮೈತ್ರಿಕೂಟಕ್ಕೆ ಮುಜುಗರ ತಂದ ಲಾಲೂ ಸುಪುತ್ರ
ಪಾಟ್ನಾ, ನ 21: ಇದು ಬಿಹಾರದ ಕುಟುಂಬ ರಾಜಕಾರಣ, ಅದೃಷ್ಟ ಒಲಿದರೆ ಹೀಗೆ ಒಲಿಬೇಕು ನೋಡಿ. ರಾಜಕೀಯದಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ 26ವರ್ಷದ, 9ನೇ ತರಗತಿ ಓದಿರುವ ಯುವಕನಿಗೆ ಉಪಮುಖ್ಯಮಂತ್ರಿ ಭಾಗ್ಯ, ಜೊತೆಗೆ ಆಯಕಟ್ಟಿನ ಮೂರು ಖಾತೆ!
ವಿಚಾರ ಅದಲ್ಲ, ಪ್ರಮಾಣವಚನ ಸ್ವೀಕರಿಸುವ ವೇಳೆ ಲಾಲೂ ಪುತ್ರ, ಡಿಸಿಎಂ ಹುದ್ದೆಯೇರುತ್ತಿರುವ ತೇಜ್ ಪ್ರತಾಪ್ ಯಾದವ್ ಪ್ರತಿಜ್ಞಾ ವಿಧಿಯನ್ನು ಸರಿಯಾಗಿ ಉಚ್ಚರಿಸದೇ, ಪ್ರಮುಖವಾಗಿ ಲಾಲೂ ಮತ್ತು ನಿತೀಶ್ ಕುಮಾರಿಗೆ ಮುಜುಗರ ತಂದಿದ್ದು.
ಪಾಟ್ನಾದ ಗಾಂಧಿ ಮೈದಾನದಲ್ಲಿ ಶುಕ್ರವಾರ (ನ 20) ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿತೀಶ್ ಕುಮಾರ್ ನಂತರ ಮೂರನೆಯವರಾಗಿ ತೇಜ್ ಪ್ರತಾಪ್ ಪ್ರಮಾಣಚನ ಸ್ವೀಕರಿಸಲು ವೇದಿಕೆ ಏರಿದ್ದರು. (ಬಿಹಾರದಲ್ಲಿ ಮಹಾಮೈತ್ರಿಕೂಟ ಪರ್ವ ಆರಂಭ)
ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಪ್ರತಿಜ್ಞಾವಿಧಿ ಬೋಧಿಸುತ್ತಿದ್ದಾಗ, ತೇಜ್ ಪ್ರತಾಪ್ ಪದ ಉಚ್ಚಾರಣೆಯನ್ನು ಸರಿಯಾಗಿ ಬಳಸದೇ ಇದ್ದಾಗ ಎರಡು ಬಾರಿ ಅವರಿಂದ ಪ್ರಮಾಣವಚನ ಸ್ವೀಕರಿಸುವಂತೆ ಸೂಚಿಸಿದರು.
ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾ ತೇಜ್ ಪ್ರತಾಪ್, 'ಅಪೇಕ್ಷಿತ್' ಶಬ್ದವನ್ನು 'ಉಪೇಕ್ಷಿತ್' ಎಂದು ಉಚ್ಚರಿಸಿದಾಗ, ಭಾಯ್ ಅದು ಉಪೇಕ್ಷಿತ್ ಅಲ್ಲ ಉಪೇಕ್ಷಿತ್, ಫಿರ್ ಸೆ ಬೋಲಿಯೇ ಎಂದು ರಾಜ್ಯಪಾಲರು ಹೇಳಿದಾಗ ನೆರೆದಿದ್ದ ಸಮೂಹ ಜೋರಾಗಿ ನಕ್ಕಿದ್ದು, ಲಾಲೂ ಮತ್ತು ನಿತೀಶ್ ಅವರಿಗೆ ಇರಿಸುಮುರಿಸು ತಂದಿತ್ತು. ಮುಂದೆ ಓದಿ..

ಮಾಪ್ ಕರೋ ಸರ್
'ಮಾಪ್ ಕರೋ ಸರ್' ಎಂದು ಮತ್ತೆ ಪ್ರಮಾಣವಚನ (ಸರಿಯಾಗಿ) ಸ್ವೀಕರಿಸಿ ತೇಜ್ ಪ್ರತಾಪ್, ರಾಜ್ಯಪಾಲರಿಗೆ ಮತ್ತು ವೇದಿಕೆಯಲ್ಲಿ ಆಸೀನರಾಗಿದ್ದ ನಿತೀಶ್ ಕುಮಾರ್ ಗೆ ನಮಸ್ಕರಿಸುತ್ತಾ ಕೆಳಗಿಳಿದರು. (ಚಿತ್ರ: ಪಿಟಿಐ)

ಲಾಲೂದ್ದೇ ಕಾರುಬಾರು
ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ನಿತೀಶ್ ಕುಮಾರ್ ಗಿಂತ ಹೆಚ್ಚಾಗಿ ಲಾಲೂ ಪ್ರಸಾದ್ ಯಾದವ್ ಪಾದರಸದಂತೆ ಓಡಾಡುತ್ತಾ ಬಂದವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು. (ಚಿತ್ರ: ಪಿಟಿಐ)

ದೇವೇಗೌಡ, ಸಿದ್ದು ಬಂದಿದ್ದರು
ಪ್ರಮಾಣವಚನ ಸಮಾರಂಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಉಮರ್ ಅಬ್ದುಲ್ಲಾ ಸೇರಿದಂತೆ ರಾಜ್ಯ, ರಾಷ್ಟ್ರ ರಾಜಕಾರಣದ ಹಲವಾರು ಮುಖಂಡರು ಭಾಗವಹಿಸಿದ್ದರು. (ಚಿತ್ರ: ಪಿಟಿಐ)

ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಯಾರು?
ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಸಚಿವ ವೆಂಕಯ್ಯ ನಾಯ್ಡು ಭಾಗವಹಿಸಿದ್ದರು. ಲಾಲೂ ಪಕ್ಕದ ಸೀಟಿನಲ್ಲಿ ಆಸೀನರಾಗಿದ್ದ ವೆಂಕಯ್ಯ ನಾಯ್ಡು ಮತ್ತು ಲಾಲೂ ನಡುವೆ ಏನೋ ಚರ್ಚೆ ನಡೆಯುತ್ತಿತ್ತು. (ಚಿತ್ರ: ಪಿಟಿಐ)

ಚೌಧುರಿ ನೂತನ ಸ್ಫೀಕರ್
ಜೆಡಿಯು ಮತ್ತು ಆರ್ಜೆಡಿಯ ಹನ್ನೆರಡು ಶಾಸಕರು ಮತ್ತು ಕಾಂಗ್ರೆಸ್ಸಿನ ನಾಲ್ಕು ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಜೆಡಿಯುನ ಹಿರಿಯ ಮುಖಂಡ ವಿಜಯ್ ಕುಮಾರ್ ಚೌಧುರಿ ಬಿಹಾರ ಅಸೆಂಬ್ಲಿಯ ನೂತನ ಸ್ಫೀಕರ್ ಆಗಲಿದ್ದಾರೆ. (ಚಿತ್ರ: ಪಿಟಿಐ)












Click it and Unblock the Notifications